ಗುಲಾಮಗಿರಿ ದಲಿತರ ಮನಸ್ಸಿನಿಂದ ಕಿತ್ತಾಕುವುದು ಅಷ್ಟೊಂದು ಸುಲಭವಲ್ಲ-“ಅಟ್ರಾಸಿಟಿ”

ಪುಸ್ತಕ ವಿಮರ್ಶೆ

ಸ್ವಾತಂತ್ರ್ಯ ಬಂದು 76 ವರ್ಷಗಳಾಗಿದೆ, ದಲಿತ ಸಂಘರ್ಷ ಸಮಿತಿ ಉದಯವಾಗಿ 50 ವರ್ಷಗಳಾಗಿದ್ದು, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಒಮ್ಮೆ ತಿರುಗಿ ನೋಡಿದಾಗ ದಲಿತರ ಬದುಕು ಬಂಗಾರವಾಗಿದೆಯಾ ಎಂದು ಹುಡುಕಿದರೆ, ಕಾದ ಕಬ್ಬಿಣದಂತೆ ಇಂದೂ ಕೂಡ ಕಾಯಿಸಿಕೊಳ್ಳುತ್ತಾ ತಮ್ಮನ್ನು ತಟ್ಟಿಸಿಕೊಳ್ಳುತ್ತಿರುವುದನ್ನು ಕಂಡಾಗ ದಲಿತರ ಬದುಕು ಇನ್ನೂ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಎಂಬುದು ಪೇಪರ್ ಟೈಗರ್ ನಂತಾಗಿದೆ..

ಇತ್ತೀಚೆಗೆ ಗುರುಪ್ರಸಾದ್ ಕಂಟಲಗೆರೆ ಹೊರ ತಂದಿರುವ ‘ಅಟ್ರಾಸಿಟಿ’ ಕಾದಂಬರಿಯನ್ನು ಓದುತ್ತಾ ಹೋದಾಗ, ಗುಲಾಮಗಿರಿ ದಲಿತರ ಮನಸ್ಸಿನಿಂದ ಕಿತ್ತಾಕುವುದು ಅಷ್ಟೊಂದು ಸುಲಭವಲ್ಲ ಎಂಬುದನ್ನು ಹೇಳುತ್ತಲೇ, ಮತ್ತೇ ನಾವು ಗುಲಾಮಗಿರಿ ಕಿತ್ತಾಕಬೇಕೆಂದು ಹೋರಾಟದ ಬೆನ್ನತ್ತುವ ದಲಿತ ನಾಯಕರುಗಳು, ಆ ಹೋರಾಟ ತಮ್ಮ ದೈನಂದಿನ ಬದುಕಿನ ಹೋರಾಟವಷ್ಟೇ ಆಗಿ ಉಳಿದಿರುವುದನ್ನು ಕಾದಂಬರಿಯಲ್ಲಿ ಹೇಳುತ್ತಾ ಹೋಗಲಾಗಿದೆ.

ದಲಿತರ ಹುಡುಗ ಸ್ವಾಮಿ ಕಸ ಸಂಗ್ರಹದ ಆಟೋ ಡ್ರೈವರ್ ಆಗಿದ್ದರೆ, ಪಾಂಡು ಪೌರ ಕಾರ್ಮಿಕನಾಗಿ ನೇಮಕವಾಗಿರುತ್ತಾನೆ. ಆದರೆ ಇಲ್ಲಿ ಗುಲಾಮಗಿರಿಯ ಮನಸ್ಸೋ ಅಥವಾ ತಲೆತಲಾಂತರದಿಂದ ಮಾಡಿಕೊಂಡು ಬಂದ ಕೆಲಸವನ್ನು ಮಾಡಬೇಕೆಂಬ ಜೀನೋ ಗೊತ್ತಿಲ್ಲ, ಡ್ರೈವರ್ ಆಗಿರುವ ಸ್ವಾಮಿ, ಡ್ರೈವರ್ ಕೆಲಸ ಮಾಡದೆ ಪೌರಕಾರ್ಮಿಕ ಕೆಲಸವನ್ನು ಶಿರಸಾ ವಹಿಸಿ ಮಾಡುತ್ತಿರುವುದು ಆತನಿಗೆ ಡ್ರೈವರ್ ಕೆಲಸ ಒಗ್ಗಲಿಲ್ಲವೋ ಅಥವಾ ಹಿಂದುಳಿದ ಜಾತಿಯವನು, ನನಗಿಂತ ಮೇಲು ಎಂಬ ಭಾವನಿಯಿಂದಲೋ ಪೌರಕಾರ್ಮಿಕನಾಗಿರುವ ಪಾಂಡುವನ್ನು ಡ್ರೈವರ್ ಸೀಟಿನಲ್ಲಿ ಕೂರಿಸಿ ತಾನು ಕಸ ತರುವ ಮಹಿಳೆಯರಿಂದ ಬೈಯಿಸಿಕೊಳ್ಳುವುದನ್ನು ಓದಿದಾಗ ತಲೆತಲಾಂತರದಿಂದ ಬೈಗುಳಗಳ ಮುಖಾಂತರವೇ ಜನಾಂಗ ಬದುಕಿರುವುದರಿಂದ ಬೈಗುಳಗಳೇ ಅವರಿಗೆ ಲಾಲಿ ಹಾಡುಗಳ ತರಹವೇ ಎಂಬುದನ್ನು ಕಾದಂಬರಿ ಬರೆದ ಗುರುಪ್ರಸಾದ್ ಹೇಳಬೇಕಿತ್ತು.

ಮತ್ತೊಂದು ಸನ್ನಿವೇಶದಲ್ಲಿ ಎರಡು ದಲಿತ ಸಂಘರ್ಷ ಸಮಿತಿಗಳು ತಹಶೀಲ್ದಾರ್ ಒಬ್ಬರನ್ನು ಇಕ್ಕಟ್ಟಿಗೆ ಸಿಕ್ಕಿಸಿಕೊಂಡು ತಮ್ಮ ಹಕ್ಕನ್ನು ಪಡೆಯುವುದಕ್ಕಿಂತ ಆ ದಿನದ ಬದುಕಿನ ಖರ್ಚನ್ನು ದುಡಿದುಕೊಳ್ಳಲು ಆ ಎರಡೂ ಸಂಘಟನೆಗಳು ಹೂಡುವ ತಂತ್ರ-ಪ್ರತಿತಂತ್ರಗಳನ್ನು ದೇವರಾಜ ಮತ್ತು ಗಜೇಂದ್ರ ಇಬ್ಬರೂ ಹೂಡಿ ಹಳೆಯ ಅಂಬೇಡ್ಕರ್ ಭಾವಚಿತ್ರವನ್ನು ಅರಳಿ ಮರದ ಕೆಳಗೆ ಹಾಕಿದ್ದನ್ನೇ ತನ್ನ ಬಂಡವಾಳ ಮಾಡಿಕೊಂಡ ದೇವರಾಜು ತಾನು ಹತ್ತು ಸಾವಿರ ಕೇಳಿದರೆ ಕೊಡಲಿಲ್ಲ, ಈ ಮೂಲಕವೇ ತಹಶೀಲ್ದಾರ್ ಅವರನ್ನು ಬಗ್ಗು ಬಡಿಯಲು ಮುಂದಾಗಿದ್ದು ಇಡೀ ದಲಿತ ನಾಯಕರು ಇಂದು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಆಗದೆ, ನಾಯಕರಾಗಿ ಬೆಳಯಲೂ ಆಗದೇ ತಮ್ಮ ದೈನಂದಿನ ಜೀವನೋಪಾಯಕ್ಕೆ ಅಧಿಕಾರಿ ವರ್ಗವನ್ನೇ ತಮ್ಮ ಗಾಳವಾಗಿ ಉಪಯೋಗಿಸಿಕೊಂಡು ಬದುಕು ಕಟ್ಟಿಕೊಳ್ಳಲು ಹೊರಟರು ಅದು ಆರಕ್ಕೇರದೆ ಮೂರಕ್ಕೆ ಇಳಿಯದೆ ನಡು ಬಿಸಿಲಿನಲ್ಲಿ, ಸುರಿಯುವ ಮಳೆಯಲ್ಲಿ ತನ್ನ ಮಗಳಿಗಾದ ಅನ್ಯಾಯವನ್ನು ಯಾರಿಗೂ ಹೇಳದೆ ಬಾಯಿಗೆ ಸೆರಗು ಮುಚ್ಚಿಕೊಂಡು ಅಳುವ ತಾಯಿಯ ರೋಧನೆಗೆ ಕೊನೆಗೂ ಯಾವ ಸಂಘದಿಂದಲೂ ನ್ಯಾಯ ದೊರೆಯದೇ ಕಾಲಿಗೆ ಚಪ್ಪಲಿಯೂ ಇಲ್ಲದೆ ತಾಯಿ ಮಗಳು ಕಲ್ಲು ದಾರಿಯಲ್ಲಿ ನಡೆಯುವ ದೃಶ್ಯ ಎಂತಹವರ ಮನಸ್ಸನ್ನೂ ಕರಗಿಸುತ್ತದೆ.

ಮತ್ತೊಂದು ಕಡೆ ಸುಬ್ಬರಾಯ ಎಂಬುವನು ಮೈಕ್ರೋ ಪೈನಾನ್ಸ್ ಮೂಲಕ ಮಹಿಳೆಯರ ಸ್ವಸಹಾಯ ಸಂಘವನ್ನು ಮಾಡಿ, ಜೇಡ ತಾನು ನೇಯ್ದ ಬಲೆಯೊಳಗೆ ತಾನೇ ಸಿಕ್ಕಿಕೊಂಡಂತೆ ಒಂದು ಕಡೆ ಸಾಲ ಪಡೆದ ಮಹಿಳೆಯರು ಸಾಲ ಕಟ್ಟದೇ ಇರುವುದು, ಮಹಿಳಾ ಸ್ವಸಹಾಯ ಸಂಘದ ಮುಖ್ಯಸ್ಥೆಯನ್ನೇ ಇಟ್ಟುಕೊಂಡಿದ್ದಾನೆಂದು ತನ್ನ ಹೆಂಡತಿ ಕೈಯಿಂದಲೇ ಹೊದೆ ತಿಂದು ದಿಕ್ಕು-ದೆಸೆ ಇಲ್ಲದಂತಾಗಿ, ಮೈಕ್ರೋ ಪೈನಾನ್ಸ್‍ನವರು ಸಾಲ ಕೊಡಿಸಿರುವ ಸಾಲ ಕಟ್ಟುವಂತೆ ಕೊಡುವ ಹಿಂಸೆಯಿಂದ ಬೇಸತ್ತು ಸುಬ್ಬರಾಯ ಹುಚ್ಚನಂತಾಗಿ ಬಿಡಿತ್ತಾನೆ.

ಇದರ ಜೊತೆಗೆ ರಾಜೇಶ ಎಂಬುವನು ಮಾದಿಗರ ಹುಡುಗಿಯನ್ನು ಮದುವೆಯಾಗಿ ಗ್ರಾಮ ಪಂಚಾಯತಿ ಸದಸ್ಯಳನ್ನಾಗಿ ಮಾಡಿ ತಾನು ಮೆರೆಯುವ ಸನ್ನಿವೇಶಗಳನ್ನು ಇಂದು ಗ್ರಾಮ ಪಂಚಾಯಿತಿಗಳಲ್ಲಿ ಗಂಡ ಹೆಂಡತಿಯನ್ನು ಗೆಲ್ಲಿಸಿ ತಾನು ಅಧಿಕಾರ ಚಲಾಯಿಸುವುದನ್ನು ಚೆನ್ನಾಗಿ ಕಟ್ಟಿ ಕೊಟ್ಟಿರುವ ಗುರುಪ್ರಸಾದ್, ಹನುಮ ಎಂಬುವನ ತಂದೆ ದಾಸಜ್ಜ ಊರಬ್ಬ ಮಾಡುವುದಕೋಸ್ಕರ 50 ಸೇರು ರಾಗಿಗೆ ಎರಡು ಎಕರೆ ಹೊಲವನ್ನು ಲಿಂಗಾಯಿತರ ಶಿವರುದ್ರಯ್ಯನಿಗೆ ಮಾರಿದ್ದು, ಹನುಮನ ತಮ್ಮ ಚಂದ್ರ ಎಳ ನೀರು ಕಿತ್ತನೆಂದು ಕಂಬಕ್ಕೆ ಕಟ್ಟಿ ಹೊಡೆದಿದ್ದಕ್ಕೆ ಊರು ಬಿಟ್ಟಿದ್ದು, ಇನ್ನೊಬ್ಬ ತಮ್ಮ ಊರು ಬಿಟ್ಟು ಭದ್ರಾವತಿ ಸೇರಿದ್ದು, ಮರ ಹತ್ತುತ್ತಿದ್ದ ಹನುಮ ಕರೆಂಟ್ ಕಂಬ ಹತ್ತಿ ಸುಟ್ಟು ಹೋಗಿದ್ದು ಎಲ್ಲಾ 70-80ರ ದಶಕದಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಹಲ್ಲೆ, ಕೊಲೆ ಕಣ್ಣ ಮುಂದೆ ಹಾದು ಹೋಗುತ್ತದೆ.

ಜಯಮ್ಮನ ಮಗಳನ್ನು ಪಟೇಲ ಮಂಜಯ್ಯನ ಮಗ ಲೋಕ ಅತ್ಯಾಚಾರ ಮಾಡಿದ್ದನ್ನು ಪಟೇಲರಿಗೆ ಹೇಳಿದಾಗ, ಪಟೇಲ ಮಂಜಯ್ಯ ಜಯಮ್ಮನನ್ನು ಹೆದರಿಸಿದ್ದು, ಟೇಕಲ್ ಅನುಸೂಯಮ್ಮ ಘಟನೆಯನ್ನು ನೆನಪಿಗೆ ತರುತ್ತದೆ.

ಜಯಮ್ಮ ಕೊನೆ ತನಕ ತನ್ನ ಮಗಳಿಗೆ ನ್ಯಾಯ ಕೊಡಿಸಲು ಪರದಾಡುವ ಸ್ಥಿತಿ ಎಂತಹವರ ಕರುಳು ಕಿತ್ತು ಬರುತ್ತದೆ.

ಇನ್ನ ತಹಶೀಲ್ದಾರ್ ವೆಂಕಟರಮಣ್ ಅವರನ್ನು ಅಂಬೇಡ್ಕರ್ ಪೋಟೋ ಮೂಲಕವೇ ಬ್ಲಾಕ್ ಮೇಲ್ ಮಾಡುವ ದೇವರಾಜು, ತಹಶೀಲ್ದಾರ್ ಮತ್ತೊಬ್ಬ ಡಿಎಸ್‍ಎಸ್ ಲೀಡರ್ ಗಜೇಂದ್ರನ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುವುದು, ಅಂಬೇಡ್ಕರ್ ಭಾವ ಚಿತ್ರವನ್ನು ಅರಳಿಮರದ ಕೆಳಗೆ ಇಟ್ಟ ಪ್ರಕರಣವೇ ತಹಶೀಲ್ದಾರ್ ಕುತ್ತಿಗೆಗೆ ಬರುತ್ತದೆ ಎಂದಾಗ ಧರಣಿ ನಡೆಸುತ್ತಿದ್ದ ಡಿಎಸ್‍ಎಸ್‍ನವರನ್ನು ಒಳ ಕರೆದು ರಾಜೀ ಸಂಧಾನ ನಡೆಸಿ ನಂತರ ತಹಶೀಲ್ದಾರ್ ಅವರು ಬಂದಾಗ ಜೈಕಾರ ಕೂಗಿದ್ದು ನೋಡಿದರೆ ಇಂದು ದಲಿತ ನಾಯಕರುಗಳು ಮಾಡುತ್ತಿರುವ ಎಲ್ಲಾ ಆಟ-ಟೋಪಗಳನ್ನು ಗುರುಪ್ರಸಾದ್ ಕಂಟಲಗೆರೆ ಮನ ಬಿಚ್ಚಿ ಕಟ್ಟಿಕೊಟ್ಟಿದ್ದಾರೆ.

ಇಂತಹ ಒಂದು ದಲಿತರ ಬದುಕು-ಬವಣೆಯ ಕಾದಂಬರಿ ನಿಜಕ್ಕೂ ಇಂದಿನ ಯುವ ಪೀಳಿಗೆಗೆ ಅಗತ್ಯವಿತ್ತು. ಅದು ಯುವ ಪೀಳಿಗೆಗೆ ಹೇಗೆ ತಲುಪುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದ್ದು, ಕಾದಂಬರಿಯಲ್ಲಿ ಯೂನಿರ್ವಸಿಟಿಯಲ್ಲಿ ಓದಿ ಬಂದಿರುವ ನವೀನ ಎಂಬ ಯುವಕ ಪ್ರಗತಿ ಪರ ಚಿಂತನೆಯನ್ನು ಮೈಗೋಡಿಸಿಕೊಂಡು ಎಂಎಲ್‍ಎ ಕರೆದಿದ್ದ ದಲಿತರ ಸಮನ್ವಯ ಸಭೆಯಲ್ಲಿ ಶಾಸಕರಿಗೆ ಪೊಲೀಸಿನವರು ದಲಿತರ ಕೇಸು ದಾಖಲಿಸುವುದಿಲ್ಲ, ಮೇಲ್ಜಾತಿಯವರು ಜಾತಿ ನಿಂಧನೆ, ದೌರ್ಜನ್ಯ ಮಾಡುತ್ತಿದ್ದರು ಅಟ್ರಾಸಿಟಿ ಕೇಸು ದಾಖಲಿಸುವುದಿಲ್ಲ ಎಂದು ಪ್ರಶ್ನೆ ಮಾಡಿದ್ದು ಇತರ ದಲಿತರಿಗೆ ಸ್ವಲ್ಪ ದೈರ್ಯ ಬಂದರೂ ಯಾರೂ ಮಾತನಾಡುವುದಿಲ್ಲ, ಪುಸ್ತಕದಲ್ಲಿ ಎಲ್ಲಿಯೂ ಅಟ್ರಾಸಿಟಿ ಕೇಸ್ ದಾಖಲಾಗಿರುವ ಬಗ್ಗೆ ಬರೆದುಕೊಂಡಿಲ್ಲ.

ಗುರುಪ್ರಸಾದ್ ಕಂಟಲಗೆರೆಯವರು ಕ್ಷಣ ಮಾತ್ರದಲ್ಲಿ ಡಿಜಿಟಲ್ ಮತ್ತು ಜಾಲತಾಣಗಳಲ್ಲಿ ಸುದ್ದಿ, ವಗೈರೆ ತಲುಪುವ ಕಾಲದಲ್ಲಿದ್ದು, ಸಾಕಷ್ಟು ಬದಲಾವಣೆ ಕಾಣುತ್ತಿದ್ದರೂ, ಕಾದಂಬರಿಯಲ್ಲಿ ಹನುಮನಿಗೆ ಆಸ್ತಿ ಕೊಡಿಸುವುದಾಗಲಿ, ಜಯಮ್ಮನ ಮಗಳು ರತ್ನಳನ್ನು ಅಂತರ್ಜಾತಿ ಮಾಡಿಸಿ ಸಮಾಜ ಬದಲಾವಣೆ ಬಯಸಿದೆ ಎಂಬ ಸಂದೇಶವನ್ನು ಸಾರದೆ, ದಲಿತರಿಗೆ ನ್ಯಾಯವೇ ಸಿಕ್ಕಿಲ್ಲ, ಅಕ್ಷರ ಸಿಕ್ಕಲ್ಲವೆಂಬಂತೆ ಬಿಂಬಿಸಿರುವುದು ಒಂದು ಜಾತಿಯ ಎಲ್ಲೆಯನ್ನು ಗುರುಪ್ರಸಾದ್ ಮೀರಲಾಗಿಲ್ಲ.

ಮತ್ತೊಂದು ಗುರುಪ್ರಸಾದ್ ಪುಸ್ತಕಗಳನ್ನು ಬರೆಯುತ್ತಿರುವುದೇ ಪ್ರಶಸ್ತಿಗೋಸ್ಕರ ಎಂದು ಬರೆಯಬಾರದು,ಪ್ರಶಸ್ತಿ ಮನೆ ಬಾಗಿಲಿಗೆ ಹುಡುಕಿ ಬರಬೇಕು, ಕುವೆಂಪು, ಲಂಕೇಶ್, ಅನಂತಮೂರ್ತಿ, ತೇಜಸ್ವಿ ಅವರುಗಳು ಪ್ರಶಸ್ತಿಗೋಸ್ಕರ ಬರೆಯದೇ ಸಮಾಜದ ಅನಿಷ್ಠಗಳನ್ನು ತೊಲಗಿಸಲು ತಮ್ಮ ಸಾಹಿತ್ಯದ ಮೂಲಕ ಮೊನಚು ಬರಹದಿಂದ ರಾಜಕಾರಣಿಗಳನ್ನು, ಮೇಲ್ವರ್ಗವನ್ನು ಎಚ್ಚರಿಸಿ ಸರಿ ದಾರಿಗೆ ತರಲು ಪ್ರಯತ್ನಿಸಿದರು.

ಕಂಟಲಗೆರೆ ಗುರುಪ್ರಸಾದ್ ಇದೂವರೆವಿಗೂ ತಮ್ಮ ಜಾತಿ ಮಿತಿಯೊಳಗೆ ಬರಹವನ್ನು ಮಾಡಿದ್ದು, ಇದನ್ನು ಮೀರಿ ಅನ್ಯ ಜಾತಿಯ ಜನರ, ವರ್ಗದ ಬದುಕಿನ ಬವಣೆ, ನೋವು, ನಲಿವು, ಪ್ರೀತಿ, ಅಲ್ಲಿಯ ಸಾಮಾಜಿಕ ಅಸಮತೋಲನ ಆ ಜಾತಿಯೊಳಗೆ ಏನೇನಾಗಿದೆ ಎಂಬುದನ್ನು ತಮ್ಮ ತೀಕ್ಷ್ಣ ಮನಸ್ಸಿನಿಂದ ನೋಡದಿದ್ದರೆ ಇವರ ಬರಹ ದಲಿತರಿಗಷ್ಟೇ ಸೀಮಿತ ಎಂಬ ಗಡಿಯನ್ನು ಹಾಕುವುದರಲ್ಲಿ ಸಂದೇಹವಿಲ್ಲ.

ಕವಿಗೆ, ಕತೆಗಾರನಿಗೆ ಎಲ್ಲೆ ಇರಬಾರದು, ಎಲ್ಲೆ ಮೀರಿದಾಗ ಎಲ್ಲಾ ಕಡೆ ಸಲ್ಲುವವರಾಗುತ್ತಾರೆ. ಗುರುಪ್ರಸಾದ್ ಆ ನಿಟ್ಟಿನಲ್ಲಿ ಬರಹ ಮಾಡಲಿ.

ನಾನೊಬ್ಬ ಎಲ್ಲಾ ಬಲ್ಲೆ, ನನಗೆಲ್ಲಾ ತಿಳಿದಿದೆ, ನನಗಾರು ಸಮ, ದೇವನೂರು, ಕೇಬಿಗಿಂತ ಮಿಗಿಲು ಎಂಬ ಭಾವ ಗುರುಪ್ರಸಾದ್‍ಗೆ ಎಂದೂ ಬಾರದೆ ಅವರದೇ ಆದ ಮತ್ತೊಂದು ಸಾಹಿತ್ಯ ಪ್ರಕಾರ ಚಿಕ್ಕನಾಯಕನಹಳ್ಳಿ ನೆಲದಿಂದ ಹುಟ್ಟಲಿ.

ಕಾದಂಬರಿಯ ಕೊನೆ ಪುಟದಲ್ಲಿ ಈ ಕೆಳಗಿನಂತೆ ಬರೆಯಲಾಗಿದೆ.

ಆ ರಾತ್ರಿ ಹನ್ನೆರೆಡು ಗಂಟೆಯಾದರೂ ಊರಿನ ಹೊರ ವಲಯದಲ್ಲಿದ್ದ ಡಾಬಾದಲ್ಲಿ ಪಾರ್ಟಿ ಮುಗಿದಿರಲಿಲ್ಲ. ಸುಮಾರು ಎಂಟು ಗಂಟೆಯಿಂದಲೇ ಕುಡಿಯಲು ಶುರುವಾದವರು, ಹತ್ತು ಗಂಟೆಗೆಲ್ಲ ಚೆನ್ನಾಗಿ ಚಿತ್ ಆಗಿದ್ದರು.

ಅವರ ಮಾತುಗಳಲ್ಲಿ ಅಂಬೇಡ್ಕರ್, ಬುದ್ಧ, ಬಿಕೆ, ಹೋರಾಟದ ಹಾಡುಗಳು, ಶಿಕ್ಷಣ, ಸಂಘಟನೆ ಎಲ್ಲವೂ ಇದ್ದವು.
ಜೋರಾಗಿ ಹಾಡುತ್ತಿದ್ದರು.
ಗಹಗಹಿಸಿ ನಗುತ್ತಿದ್ದರು.

                                              -ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *