ತುಮಕೂರು.:ಹಿರಿಯ ಗಾಯಕ ಮತ್ತು ಕಲಾವಿದ ದಿಬ್ಬೂರು ಮಂಜು ಅವರ ನೇತೃತ್ವದ ಅಮರಜೋತಿ ಕಲಾ ವೃಂದದವತಿಯಿಂದ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ “ಡಾ.ರಾಜರತ್ನ” ಪ್ರಶಸ್ತಿಯನ್ನು ಕೊಡ ಮಾಡುತ್ತಿದ್ದು, ಜುಲೈ 13 ರಂದು ಕನ್ನಡ ಭವನದಲ್ಲಿ ಡಾ.ರಾಜರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ದಿಬ್ಬೂರು ಮಂಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಳೆದ 35 ವರ್ಷಗಳಿಂದ ಡಾ.ರಾಜಕುಮಾರ್ ಅವರ ಹಾಡುಗಳನ್ನು ಕೇಳಿ, ಅವರ ನಡೆ, ನುಡಿ ಅನುಸರಿಸಿ, ಅವರಂತಯೇ ಹಾಡುವ ಅನುಕರಣೆ ಮಾಡುತ್ತಾ ಒರ್ವ ಗಾಯಕನಾಗಿ ಗುರುತಿಸಿಕೊಂಡಿದ್ದೇನೆ. ಕಲಾಜಗತ್ತಿನಲ್ಲಿಯೇ ಮೇರು ಪರ್ವತವಾಗಿರುವ ಡಾ.ರಾಜಕುಮಾರ್ ಹೆಸರಿನಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಬಯಕೆ ವ್ಯಕ್ತಪಡಿಸಿದ ಸಂದರ್ಭದಲ್ಲಿ ಹಿರಿಯರು ಕೊಟ್ಟ ಸಲಹೆಯಂತೆ ಡಾ.ರಾಜರತ್ನ ಪ್ರಶಸ್ತಿಯನ್ನು ಸ್ಥಾಪಿಸಿ, ಪ್ರತಿವರ್ಷ ರಂಗಭೂಮಿ ಮತ್ತು ಚಲನಚಿತ್ರ ಎರಡು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಕಲಾವಿದರನ್ನು ಗುರುತಿಸಿ, ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಾಗಿದೆ ಎಂದರು.
ತುಮಕೂರು ಜಿಲ್ಲೆಯು ಕರ್ನಾಟಕ ಚಲನಚಿತ್ರ ಮತ್ತು ನಾಟಕ,ಸಂಗೀತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಡಾ.ಗುಬ್ಬಿ ವೀರಣ್ಣ, ಹಾಸ್ಯ ಚಕ್ರವರ್ತಿ ನರಸಿಂಹರಾಜು,ಬಿ.ಎಂ.ಶ್ರೀ,ಡಾ.ಬರಗೂರು ರಾಮಚಂದ್ರಪ್ಪ,ಡಾ.ಲಕ್ಷ್ಮಣದಾಸ್ ಸೇರಿದಂತೆ ಹಲವರು ತಮ್ಮದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಹಾಗೆಯೇ ಡಾ.ರಾಜಕುಮಾರ ಸಹ ಚಲನಚಿತ್ರದಲ್ಲಿ ನಾಯಕನಟನಾಗಿ ಪಾತ್ರ ಮಾಡಿದಂತೆ ನಿಜ ಜೀವನದಲ್ಲಿಯೂ ನಾಯಕನಾಗಿಯೇ ಬಳೆದವರು, ಗೋಕಾಕ್ ಚಳವಳಿ ಸೇರಿದಂತೆ ಹಲವು ಚಳುವಳಿಯ ನಾಯಕತ್ವ ವಹಿಸಿಕೊಂಡು ನಾಡು, ನುಡಿ, ನೆಲ, ಜಲಕ್ಕಾಗಿ ದುಡಿದವರು.ಇಂತಹವರ ಹೆಸರಿನಲ್ಲಿ ಡಾ.ರಾಜರತ್ನ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಇತರೆ ಕಲಾವಿದರಿಗೆ ರಾಜಕುಮಾರ್ ಅವರ ಜೀವನವನ್ನೇ ಮಾದರಿಯಾಗಿಸುವ ಕೆಲಸದಲ್ಲಿ ತೊಡಗಿದ್ದೇವೆ ಎಂದು ದಿಬ್ಬೂರು ಮಂಜು ನುಡಿದರು.
ಡಾ.ರಾಜರತ್ನ ಪ್ರಶಸ್ತಿ ಪ್ರಧಾನ ಆಯೋಜನಾ ಸಮಿತಿಯ ಸಂಚಾಲಕರಾದ ಡಾ.ಲಕ್ಷ್ಮಿರಂಗಯ್ಯ ಮಾತನಾಡಿ,ಜುಲೈ 13 ರಂದು ಸಂಜೆ 04 ಗಂಟೆಗೆ ತುಮಕೂರಿನ ಕನ್ನಡಭವನದಲ್ಲಿ ಆಯೋಜಿಸಿರುವ ಡಾ.ರಾಜರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಆಯೋಜನಾ ಸಮಿತಿಯ ಎಲ್ಲಾ ಸದಸ್ಯರು ಚರ್ಚಿಸಿ ಹಿರಿಯ ಕಲಾವಿದರಾದ, ಚಲನಚಿತ್ರ, ರಂಗಭೂಮಿ, ಕಿರುತೆರೆ ಮೂರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸುಂದರ್‍ರಾಜ್ ಹಾಗೂ ಡಾ.ರಾಜಕುಮಾರ್ ಅವರೊಂದಿಗೆ ರಂಗಭೂಮಿಯಲ್ಲಿ ಪಾತ್ರ ನಿರ್ವಹಿಸಿದ ಹಿರಿಯ ಹರಿಕಥಾ ವಿದ್ವಾನ್ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅವರುಗಳಿಗೆ ಡಾ.ರಾಜರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದರು.
ಡಾ,.ರಾಜರತ್ನ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಾಡೋಜ ಪ್ರೊ.ಬರಗೂರ ರಾಮಚಂದ್ರಪ್ಪ ಉದ್ಘಾಟಿಸಿ, ಪ್ರಶಸ್ತ್ರಿ ಪ್ರಧಾನ ಮಾಡುವರು.ಅಧ್ಯಕ್ಷತೆಯನ್ನು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ವಹಿಸುವರು.ಇದೇ ವೇಳೆ ಸಾಧಕರಾದ ಡಾ.ಓ.ನಾಗರಾಜ್,ಡಾ.ಎಲ್.ಸುಮನ, ಡಾ.ಎಲ್.ಸುಧಾ ಮಂಜುನಾಥ್, ಡಾ.ಎ.ಎಸ್.ರಾಜಶೇಖರ್, ಡಾ.ಆದರ್ಶ ಅವರುಗಳನ್ನು ಸನ್ಮಾನಿಸಲಾಗುವುದು.ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು, ದಿಬ್ಬೂರು ಮಂಜು ಹಾಗೂ ಡಾ.ಲಕ್ಷ್ಮಿರಂಗಯ್ಯ ಉಪಸ್ಥಿತರಿರುವರು. ಕಾರ್ಯಕ್ರಮದ ಅಂಗವಾಗಿ ದಿಬ್ಬೂರು ಮಂಜು ಮತ್ತು ತಂಡದವರಿಂದ ಡಾ.ರಾಜ್ ಗಾಯನಗಳ ಪ್ರಸ್ತುತಿ ನಡೆಯಲಿದೆ.ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು, ಡಾ.ರಾಜ್ ಅಭಿಮಾನಿಗಳು ಆಗಮಿಸಿ, ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ.ರಾಜರತ್ನ ಪ್ರಶಸ್ತಿ ಆಯೋಜನ ಸಮಿತಿ ಸದಸ್ಯರಾದ ದೇವಿರಪ್ಪ ಉಪಸ್ಥಿತರಿದ್ದರು.