ತುಮಕೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಕೇಂದ್ರದ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು, ಜನರಿಗೆ ನೀಡಿದ್ದ ಭರವಸೆಗಳನ್ನು ಈಡೆರಿಸುವ ಕಾರ್ಯದಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹೇಳಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಸಚಿವ ವಿ.ಸೋಮಣ್ಣ ಅವರ ಪ್ರಯತ್ನದ ಫಲವಾಗಿ ತುಮಕೂರು ನಗರದ ವಿವಿಧ ರೈಲ್ವೆ ಗೇಟುಗಳಲ್ಲಿ ಮೇಲು ಸೇತುವೆ ನಿರ್ಮಾಣ ಮಾಡುವ ಮಹತ್ವದ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕ್ಯಾತ್ಸಂದ್ರದ ಮೈದಾಳ ಗೇಟ್, ನಗರದ ಬಡ್ಡಿಹಳ್ಳಿ ಅಗ್ನಿಶಾಮಕದಳ ಬಳಿಯ ರೈಲ್ವೆ ಗೇಟ್, ಬಟವಾಡಿ ಗೇಟ್, ಮಲ್ಲಸಂದ್ರ ಬಳಿಯ ಅರೆಯೂರು ಗೇಟ್, ಗುಬ್ಬಿ ತಾಲ್ಲೂಕು ನಿಟ್ಟೂರು ರೈಲ್ವೆ ನಿಲ್ದಾಣ ಸಮೀಪದ ಮೈಸೂರು ರಸ್ತೆಯ ರೈಲ್ವೆ ಗೇಟ್‍ಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ 350 ಕೋಟಿ ರೂ.ಗಳ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವೇ ಪೂರ್ಣವಾಗಿ ಭರಿಸಲಿದೆ, ರಾಜ್ಯ ಸರ್ಕಾರದ ಪಾಲು ಇಲ್ಲ ಎಂದು ಹೇಳಿದ್ದಾರೆ.
ಈ ಮೇಲುಸೇತುವೆ ನಿರ್ಮಾಣದಿಂದ ರಸ್ತೆ ಹಾಗೂ ರೈಲು ಸಾರಿಗೆ ಇನ್ನಷ್ಟು ಸುಗಮ ಹಾಗೂ ಸುರಕ್ಷಿತವಾಗಲಿದೆ. ಈ ಕಾಮಗಾರಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ. ಹಲವು ವರ್ಷಗಳ ಬೇಡಿಕೆ ಈ ರೈಲ್ವೆ ಗೇಟುಗಳಲ್ಲಿ ಪಾದಚಾರಿಗಳು, ವಾಹನ ಸವಾರರು ಗೇಟು ದಾಟಲು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ತುಮಕೂರು-ಬೆಂಗಳೂರು ನಡುವೆ ರೈಲುಗಳ ಸಂಖ್ಯೆ ಹೆಚ್ಚಾಗಿದ್ದು, ರೈಲು ಸಂಚಾರಕ್ಕೆ ಗೇಟುಗಳನ್ನು ಮುಚ್ಚಬೇಕಾದ ಪರಿಸ್ಥಿತಿಯಲ್ಲಿ ಶಾಲಾಕಾಲೇಜು ವಿದ್ಯಾರ್ಥಿಗಳು, ಉದ್ಯೋಗ, ವ್ಯವಹಾರಕ್ಕೆ ಹೋಗುವವರು ಸಕಾಲದಲ್ಲಿ ಹೋಗಲಾಗದೆ ತೊಂದರೆ ಅನುಭವಿಸುವಂತಾಗಿದೆ. ಮೇಲುಸೇತುವೆ ನಿರ್ಮಾಣದಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಈ ಯೋಜನೆಗೆ ಸಹಕರಿಸಿದ ಸಚಿವ ವಿ.ಸೋಮಣ್ಣನವರಿಗೆ ಧನ್ಯವಾದಗಳು ಎಂದು ಹೆಬ್ಬಾಕ ರವಿಶಂಕರ್ ಹೇಳಿದ್ದಾರೆ.
ನಗರದ ರೈಲ್ವೆ ನಿಲ್ದಾಣದ ಉನ್ನತೀಕರಣ, ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲು ಮಾರ್ಗದ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಜನರಿಗೆ ಅರ್ಪಣೆ ಮಾಡಲು ಸಚಿವ ಸೋಮಣ್ಣ ಸಂಕಲ್ಪ ಮಾಡಿದ್ದಾರೆ. ಸಚಿವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಯ ಜನರು ನಿರೀಕ್ಷೆ ಮಾಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಹಿ ವಿತರಿಸಿ ನಾಗರೀಕರ ಸಂಭ್ರಮಾಚರಣೆ
ನಗರದ ವಿವಿಧ ರೈಲ್ವೆ ಗೇಟ್‍ಗಳ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದನ್ನು ಸ್ವಾಗತಿಸಿ, ಸ್ಥಳಿಯ ನಾಗರೀಕರು ಮಂಗಳವಾರ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ನಗರದ ಬಟವಾಡಿ ಹಾಗೂ ಗೋಕುಲ ರೈಲ್ವೆ ಗೇಟ್ ಬಳಿ ಸ್ಥಳೀಯ ನಾಗರೀಕರು, ಬಿಜೆಪಿ ಮುಖಂಡರು ಸಮಾಗಮಗೊಂಡು ಈ ಕಾರ್ಯಕ್ಕೆ ನೆರವಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸಿದರು.
ಅಭಿವೃದ್ಧಿ ಹರಿಕಾರರೆಂದೇ ಹೆಸರಾದ ಕೇಂದ್ರ ಸರ್ಕಾರದ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರು ಅಧಿಕಾರ ವಹಿಸಿಕೊಂಡ 35 ದಿನಗಳಲ್ಲೇ ತುಮಕೂರು ನಗರದ ಹಲವು ವರ್ಷಗಳ ಬೇಡಿಕೆಯಾದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ. ಇದು ಸಚಿವರ ಇಚ್ಛಾಶಕ್ತಿಗೆ ಕಾರಣವೆಂದು ನಾಗರೀಕರು ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವ ವಿ.ಸೋಮಣ್ಣ ಹಾಗೂ ಈ ಕಾರ್ಯಕ್ಕೆ ಪ್ರಯತ್ನಿಸಿದ ಸ್ಥಳೀಯ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಅವರ ಪರ ಜೈಕಾರ ಕೂಗಿ ನಾಗರೀಕರು ಸಂಭ್ರಮಿಸಿದರು.
ತುಮಕೂರು ನಗರ ಹಾಗೂ ಜಿಲ್ಲೆಯ ವಿವಿಧ ಐದು ರೈಲ್ವೆ ಮೇಲ್ಸೇತುವೆಗಳಿಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. 350 ಕೋಟಿ ರೂ. ಅಂದಾಜು ವೆಚ್ಚದಲ್ಲಿ 5 ಮೇಲ್ಸೇತುವೆಗಳ ಕಾಮಗಾರಿಯನ್ನು ರೈಲ್ವೆ ಇಲಾಖೆ ಕೈಗೆತ್ತಿಕೊಳ್ಳಲಿದೆ. ನಗರದ ಬಡ್ಡಿಹಳ್ಳಿ ಗೇಟ್, ಬಟವಾಡಿ ಗೇಟ್ ಅಲ್ಲದೆ, ಕ್ಯಾತ್ಸಂದ್ರದ ಮೈದಾಳ ಗೇಟ್, ಅರೆಯೂರು ಗೇಟ್, ನಿಟ್ಟೂರು ಬಳಿಯ ಗೇಟ್‍ಗಳನ್ನು ತೆರವು ಮಾಡಿ ಇಲ್ಲಿ ರೈಲ್ವೆ ಮೇಲ್ಸೇತುವೆ ಮಾಡಲಾಗುತ್ತಿದೆ.
ನಗರದಲ್ಲಿ ರೈಲ್ವೆ ಗೇಟ್ ವ್ಯವಸ್ಥೆಯಿಂದ ನಾಗರೀಕರು ಹಳಿ ದಾಟಲು ಸಮಸ್ಯೆಯಾಗುತ್ತಿತ್ತು. ಈ ಮಾರ್ಗವಾಗಿ ಸಂಚರಿಸುವ ರೈಲುಗಳ ಸಂಖ್ಯೆ ಹೆಚ್ಚಾಗಿದ್ದು, ಸಂಚಾರ ಸಂದರ್ಭದಲ್ಲಿ ರೈಲ್ವೆ ಗೇಟ್ ಮುಚ್ಚುವ ಕಾರಣ ತುರ್ತಾಗಿ ಹೋಗಲು ತೊಂದರೆಯಾಗುತ್ತಿತ್ತು. ಇದು ಅವಘಡಗಳಿಗೂ ಕಾರಣವಾಗುತ್ತಿದೆ. ಮೇಲ್ಸೇತುವೆ ನಿರ್ಮಾಣವಾದರೆ ರಸ್ತೆ ಹಾಗೂ ರೈಲು ಸಾರಿಗೆ ಸುಗಮ, ಸುರಕ್ಷಿತವಾಗಲಿದೆ ಎಂದು ನಾಗರೀಕರು ಅಭಿಪ್ರಾಯಪಟ್ಟರು.