ತುಮಕೂರು: ಸಣ್ಣಪುಟ್ಟ ಸಮಾಜದವರನ್ನು ಪಕ್ಷದ ತೆಕ್ಕೆಗೆ ತರಲು ಅವರಲ್ಲಿ ರಾಜಕೀಯ ಶಕ್ತಿ ತುಂಬುವ ಹಾಗೂ ಕೇಂದ್ರ ಸಕಾರದ ಜನಪರ ಯೋಜನೆಗಳನ್ನು ಗ್ರಾಮಮಟ್ಟಕ್ಕೆ ಕೊಂಡೊಯ್ದು ಜನರಿಗೆ ತಲುಪಿಸುವ ಸಂಬಂಧ ಬಿಜೆಪಿ ಓಬಿಸಿ ಮೋರ್ಚಾ ಮುಖಂಡರು ಸಭೆ ಸೇರಿ ಚರ್ಚಿಸಿದೆವು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಹೇಳಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಚರ್ಚೆಗಳಾಗಿವೆ ಎಂಬ ತಪ್ಪು ಮಾಹಿತಿ ಹರಡಿದೆ, ಅದು ಸುಳ್ಳು ಅಂತಹ ಯಾವುದೇ ಚರ್ಚೆಗಳಾಗಿಲ್ಲ, ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳುವ ಕುರಿತು ಚರ್ಚಿಸಲಾಯಿತು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳು ಸಭೆ ಸೇರಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಕೇಂದ್ರ ಸರ್ಕಾರದ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಒಬಿಸಿ ವರ್ಗದಿಂದ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭ ಆಯೋಜಿಸುವ ಸಂಬಂಧ ಪೂರ್ವಭಾವಿ ಸಭೆ ಇದಾಗಿತ್ತು ಎಂದರು.
ಸಣ್ಣಪುಟ್ಟ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿ ತುಂಬುವ ಬಗ್ಗೆ ಚಿಂತನೆ, ರಾಜಕೀಯ ಅವಕಾಶ ಕಲ್ಪಿಸುವ ಕುರಿತು ಮಾತುಕತೆ ನಡೆಯಿತು. ಮುಂಬರುವ ಚುನಾವಣೆಗಳಲ್ಲಿ ಹಾಗೂ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಅವಕಾಶ ವಂಚಿತ ಸಮುದಾಯದ ಮುಖಂಡರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಬಗ್ಗೆ ರಾಜ್ಯ ನಾಯಕರ ಗಮನಕ್ಕೆ ತರುವ ಬಗ್ಗೆಯೂ ಚರ್ಚಿಸಲಾಯಿತು ಎಂದು ಶಿವಪ್ರಸಾದ್ ಹೇಳಿದರು.
ಎಲ್ಲಾ ಜಾತಿಗಳಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿ ಅನುದಾನ ನೀಡಿದ್ದು ಬಿಜೆಪಿ ಸರ್ಕಾರ. ಆ ನಿಗಮಗಳ ಶೇಕಡ 10ರಷ್ಟೂ ಹಣವನ್ನು ಕಾಂಗ್ರೆಸ್ ಸರ್ಕಾರ ಆ ವರ್ಗದ ಜನರಿಗೆ ಬಳಿಕೆ ಮಾಡಿಲ್ಲ, ಇದರ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಕುರಿತೂ ಚರ್ಚೆ ಮಾಡಲಾಯಿತು ಎಂದರು.
ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮುಖಂಡರಾದ ಆಯರಹಳ್ಳಿ ಶಂಕರಪ್ಪ, ರುದ್ರೇಶ್, ಮಲ್ಲಿಕಾರ್ಜುನ್, ಅಣೆತೋಟ ಶ್ರೀನಿವಾಸ್, ಬನಶಂಕರಿಬಾಬು, ನಾಗಭೂಷಣ್, ಕೃಷ್ಣಮೂರ್ತಿ ಮೊದಲಾದವರು ಹಾಜರಿದ್ದರು.