ಬೀದಿ ನಾಯಿಗಳ ಉಪಟಳ ನಿಯಂತ್ರಣಕ್ಕೆ ಡಾ.ರಫೀಕ್ ಅಹ್ಮದ್ ಒತ್ತಾಯ

ತುಮಕೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರಪಾಲಿಕೆ ಸೂಕ್ತ ಕ್ರಮ ಕೈಗೊಂಡು ನಾಗರಿಕರಿಗೆ ನಾಯಿಗಳಿಂದ ಆಗುತ್ತಿರುವ ಉಪಟಳಕ್ಕೆ ಇತೀಶ್ರಿ ಹಾಡಬೇಕೆಂದು ಮಾಜಿ ಶಾಸಕ ಡಾ. ರಫೀಕ್ ಅಹಮದ್ ಅವರು ಒತ್ತಾಯಿಸಿದ್ದಾರೆ.

ನಗರದ ವಿವಿಧ ಬಡಾವಣೆ ಹಾಗೂ ಹೊರವಲಯಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಶಾಲಾ ಮಕ್ಕಳು, ವಯೋವೃದ್ದರು ಹಾಗೂ ವಾಯುವಿಹಾರಕ್ಕೆ ತೆರಳುವ ಜನರ ಮೇಲೆ ದಾಳಿ ಮಾಡುತ್ತಿವೆ. ಇದುವರೆಗೂ ಹತ್ತಾರು ಜನರು ಬೀದಿ ನಾಯಿಗಳ ಹಾವಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ನಾಯಿ ಕಡಿತಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆಯೂ ದೊರೆಯದೆ ಪರಿತಪಿಸುತ್ತಿರುವ ಉದಾಹರಣೆ ನಮ್ಮ ಮುಂದಿದೆ.

ತುಮಕೂರು ನಗರದ ಮೂವತ್ತೈದು ವಾರ್ಡುಗಳಲ್ಲಿಯೂ ಬೀದಿ ನಾಯಿಗಳ ಹಾವಳಿ ಇದೆ. ಅದರಲ್ಲಿಯೂ ನಗರದ ಹೊರಲವಯದ ರಸ್ತೆಯ ಇಕ್ಕೆಲಗಳಲ್ಲಿ ಕೋಳಿ, ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ಜನರು ಬೀಸಾಡುವುದರಿಂದ, ಅಲ್ಲಿಗೆ ಆಹಾರ ಹುಡುಕಿಕೊಂಡು ಬರುವ ಬೀದಿ ನಾಯಿಗಳು, ಹಗಲು, ರಾತ್ರಿ ಎನ್ನದೆ ರಸ್ತೆಯಲ್ಲಿ ಓಡಾಡುವ ಜನರಲ್ಲದೆ, ದ್ವಿಚಕ್ರವಾಹನ, ಸೈಕಲ್ ಮೇಲೆ ಸಂಚರಿಸುವ ಜನರ ಮೇಲೆ ದಾಳಿ ಮಾಡಿ, ಕಚ್ಚಿ ಗಾಯಗೊಳಿಸುತ್ತಿವೆ.

ನಗರದ ಮಂಜುನಾಥ ನಗರದ ಸಂಪರ್ಕ ರಸ್ತೆ, ಅಕ್ಕ-ತಂಗಿ ಕೆರೆ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ, ಪುಟ್ಟಸ್ವಾಮಯ್ಯನ ಪಾಳ್ಯ, ಜಗನ್ನಾಥಪುರ, ಸತ್ಯಮಂಗಲ, sಶಿರಾಗೇಟ್ ಸೇರಿದಂತೆ ಹೊರವಲಯಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ಇಲ್ಲಿ ಓಡಾಡುವುದೇ ಕಷ್ಟವಾಗಿದೆ. ಬೆಳಗಿನ ಹೊತ್ತು ಪೇಪರ್ ಹಾಕುವ ಹುಡುಗರ ಪಾಡು ಹೇಳ ತೀರದಾಗಿದೆ. ಹಾಗಾಗಿ ಜಿಲ್ಲಾಡಳಿತ ಮತ್ತು ನಗರಪಾಲಿಕೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಡಾ. ರಫೀಕ್ ಅಹಮದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *