ಡಿಜಿಟಲ್ ರೂಪಾಂತರ ಎರಡು ಅಲಗಿನ ಕತ್ತಿ: ಪ್ರೊ. ಕೆ. ವಿ. ನಾಗರಾಜ್

ತುಮಕೂರು: ಡಿಜಿಟಲ್ ರೂಪಾಂತರವು ಆಡಳಿತ ಮತ್ತು ಶಿಕ್ಷಣದಲ್ಲಿ ಸುಧಾರಣೆಗಳನ್ನು ತರುವ ಭರವಸೆ ನೀಡಬಹುದು. ಆದರಿದು ಸಾರ್ವತ್ರಿಕ ಪರಿಹಾರವಲ್ಲ. ಇದರಿಂದ ತಂತ್ರಜ್ಞಾನದ ಮೇಲೆ ಅತಿಯಾದ ಅವಲಂಬನೆಯ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಸಹ ಕುಲಪತಿ ಪ್ರೊ. ಕೆ. ವಿ. ನಾಗರಾಜ್ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಭಾರತೀಯ ಸಂವಹನ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿಕಸಿತ್ ಭಾರತ್@2047: ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಡಿಜಿಟಲ್ ರೂಪಾಂತರ ಮತ್ತು ಮಾಧ್ಯಮ ಸಂಗಮದ ಪಾತ್ರ’ ಕುರಿತ ನವದೆಹಲಿಯ ಭಾರತೀಯ ಸಮಾಜ ವಿಜ್ಞಾನ ಸಂಶೋಧನ ಪರಿಷತ್ (ಐಸಿಎಸ್‍ಎಸ್‍ಆರ್) ಪ್ರಾಯೋಜಿತ ಬಹುಶಿಸ್ತೀಯ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಮಾಧ್ಯಮದ ಪಾತ್ರ ಸಂವಹನ ಮತ್ತು ಮಾಹಿತಿ ಪ್ರವೇಶದಲ್ಲಿನ ಅಂತರವನ್ನು ನಿವಾರಿಸುವುದಾಗಿದೆ. ಸಾಂಪ್ರದಾಯಿಕ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳ ಏಕೀಕರಣದಿಂದ ಮಾಧ್ಯಮ ಸಂಗಮವಾದರೂ, ಇದರಿಂದ ಮಾಧ್ಯಮ ತನ್ನ ಮೂಲ ಕ್ರಿಯೆಯನ್ನು ಕಳೆದುಕೊಳ್ಳಬಹುದು ಎಂದರು.

ವಾಣಿಜ್ಯೋದ್ಯಮದ ಒತ್ತಡಗಳಿಂದ ಮಾಧ್ಯಮ ಸಂಗಮದ ರಾಜಿಯನ್ನು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ಪತ್ರಿಕೋದ್ಯಮದ ಬಹುಮುಖ್ಯ ಪಾತ್ರವೇ ಸಂವಹನಕಾರರಾಗಿ, ಮಾಧ್ಯಮದ ಸಮಗ್ರತೆಯನ್ನು ಕಾಪಾಡಿಕೊಂಡು ಸಮಾಜದ ವಿಕಸನಕ್ಕಾಗಿ ದುಡಿಯುವುದು ಎಂದು ತಿಳಿಸಿದರು.

ಮಾಧ್ಯಮದ ವಾಣಿಜ್ಯೀಕರಣದ ಒತ್ತಡದಿಂದಾಗಿ ಪತ್ರಿಕೋದ್ಯಮದ ನೈತಿಕತೆ ಹಾಗೂ ಮಾನದಂಡಗಳು ಗಾಳಿಗೆ ತೂರಿದಂತಾಗಿದೆ. ಆದ್ದರಿಂದ, ಅಂತರ್ಗತ ಡಿಜಿಟಲ್ ರೂಪಾಂತರದ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿ, ತಂತ್ರಜ್ಞಾನದ ಪ್ರಯೋಜನಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕಿದೆ ಎಂದರು.

ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ, ಭಾರತೀಯ ಸಂವಹನ ಒಕ್ಕೂಟದ ಕಾರ್ಯನಿರ್ವಾಹಕ ಅಧ್ಯಕ್ಷ ಪ್ರೊ. ಬಿ. ಕೆ. ರವಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *