ತುಮಕೂರು:ಆಂಗ್ಲಭಾಷೆಯಲ್ಲಿ ಎಷ್ಟು ಹಿಡಿತಹೊಂದಿದ್ದರೂ ಸಹ ಕನ್ನಡದಲ್ಲಿ ಹಿಡಿತ ಹೊಂದಿರಬೇಕು,ಎಲ್ಲರೂ ಕನ್ನಡದ ಮೇಲೆ ಭಾಷಾಭಿಮಾನ ಬೆಳೆಸಿಕೊಳ್ಳಬೇಕು,ಮಕ್ಕಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಓದಿನ ಮೇಲೆ ನಿಗಾ ಇಡಬೇಕೆಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ನೂರುನ್ನೀಸರವರು ತಿಳಿಸಿದರು.
ನಗರದ ಕನ್ನಡಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು,ತುಮಕೂರು ನಗರ ಘಟಕ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದರು.
ಕನ್ನಡದಲ್ಲಿ ಬರೆಯುವುದು ಓದುವುದು ಮಾಡಿದಾಗ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ,ಮಕ್ಕಳಿಗೆ ಅಂಕಗಳಿಗಿಂತ ಸಂಸ್ಕಾರ ಮುಖ್ಯ,ಉತ್ತಮ ಸಂಸ್ಕಾರವಂತರಾದಾಗ ತಂದೆ-ತಾಯಿಗಳಿಗೂ ಹೆಸರು ಬರುತ್ತದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್,ಕೆಎಎಸ್ ಇತರೆ ಎಲ್ಲವನ್ನೂ ಕನ್ನಡದಲ್ಲಿ ಬರೆಯಬಹುದು,ಕನ್ನಡದ ಮೇಲೆ ಪ್ರೀತಿ ಗೌರವ ಹೊಂದಿರಬೇಕು,ಪೋಷಕರು ಮಕ್ಕಳಿಗೆ ನಾಡು ನುಡಿಯ ಬಗ್ಗೆ ಸದಾ ತಿಳಿಸಿಕೊಡಬೇಕು,ಉತ್ತಮ ವ್ಯಕ್ತಿತ್ವ ಹೊಂದಿದಾಗ ಮನುಷ್ಯನಿಗೆ ಗೌರವ ಹೆಚ್ಚಾಗುತ್ತದೆ,ಪೋಷಕರು ಸಹ ಮೊಬೈಲ್ ಗೀಳಿನಿಂದ ಹೊರಬರಬೇಕು,ಇಂದು ಎಲ್ಲರೂ ಮೊಬೈಲ್ಗೆ ದಾಸರಾಗಿದ್ದಾರೆ ಇದೊಂದು ದುರಂತ,ಚಿಕ್ಕ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ ಪೋಷಕರು ತಮ್ಮ ಮಕ್ಕಳ ಮೇಲೆ ಸದಾ ಜಾಗ್ರತೆ ವಹಿಸಬೇಕೆಂದು ತಿಳಿಸಿದರು.
ನಗರ ಘಟಕದ ಅಧ್ಯಕ್ಷರಾ ಗೀತಾ ನಾಗೇಶ್ ಮಾತನಾಡಿ ಕನ್ನಡದ ಅಸ್ತಿತ್ವ ಇರುವುದೇ ಮಕ್ಕಳಲ್ಲಿ ಎಲ್ಲರೂ ಕನ್ನಡವನ್ನು ಪ್ರೀತಿಸಬೇಕು,ಹೆಚ್ಚು ಮಾತನಾಡಬೇಕು ಇಂಗ್ಲೀಷ್ ಬಂದರೂ ನಮ್ಮ ರಾಜ್ಯದಲ್ಲಿ ಎಲ್ಲರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು,ಕನ್ನಡ ಎಲ್ಲರ ಉಸಿರಾಗಲಿ,ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳು ಕನ್ನಡದಲ್ಲಿಯೇ ಇರಬೇಕು ಇದು ನಮ್ಮ ಹಕ್ಕೋತ್ತಾಯ,ಕನ್ನಡದಲ್ಲಿ 100ಕ್ಕೆ 100 ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇಂದು ಸ್ವತಃ ನ್ಯಾಯಾಧೀಶರೇ ಪುರಸ್ಕರಿಸಿರುವುದು ನಮ್ಮೆಲ್ಲರೂ ಸಂತೋಷ ತಂದಿದೆ ಎಂದು ಹೇಳಿದರು.
ಶಶಿಹುಲಿಕುಂಟೆಮಠ್ ಮಾತನಾಡಿ ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಪ್ರಥಮ ಆಧ್ಯತೆ ನೀಡಬೇಕು,ಕನ್ನಡವೇ ವ್ಯವಹಾರ ಭಾಷೆಯಾಗಬೇಕು,ಯಾರಿಗೆ ಎಷ್ಟು ಭಾಷೆ ಬಂದರೂ ಕನ್ನಡದಲ್ಲಿಯೇ ಮಾತನಾಡಬೇಕು,ಇಂಗ್ಲೀಷ್ ವ್ಯಾಮೋಹ ಬಿಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಪ್ರೊ.ಕೆ.ಎಸ್.ಸಿದ್ಧಲಿಂಗಪ್ಪ,ಸಾ.ಚಿ.ರಾಜಕುಮಾರ್,ಚಿಕ್ಕಬೆಳ್ಳಾವಿಶಿವಕುಮಾರ್,ಶ್ರೀಮತಿ ನಂದಿನಿ,ಶ್ರೀಮತಿಜ್ಯೋತಿ,ಇತರರು ಉಪಸ್ಥಿತರಿದ್ದರು.