ಸಾಮಾಜಿಕ ಪಿಡುಗಳಿಂದ ಮುಕ್ತಿ ಪಡೆಯಲು ಪತ್ರಿಕೋದ್ಯಮದ ಪಾತ್ರ ಬಹುಮುಖ್ಯ-ಹಿರೇಹಳ್ಳಿ ದೇವರಾಜು

ತಿಪಟೂರು: ಸಮಾಜದಲ್ಲಿನ ಸಾಮಾಜಿಕ ಪಿಡುಗುಗಳು, ಸಂಕೋಲೆಗಳ ಬಂಧನದಿಂದ ಮುಕ್ತಿಗೊಳಿಸುವಲ್ಲಿ ಪತ್ರಿಕೋದ್ಯಮದ ಪಾತ್ರ ಬಹು ಮುಖ್ಯವಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್‌ನ ಹಿರಿಯ ವರದಿಗಾರರಾದ ಹಿರೇಹಳ್ಳಿ ದೇವರಾಜು ಅವರು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ‍್ಯ ಪೂರ್ವದಿಂದ ಇಂದಿನವರೆಗೂ ಪತ್ರಿಕೋದ್ಯಮ ಬೆಳೆದು ಬಂದಿದೆ. ಪತ್ರಿಕೋದ್ಯಮದ ರೂಪುರೇಷೆ ಮೊದಲಿಗಿಂತ ಇಂದು ತುಂಬಾ ಬದಲಾಗಿದೆ. ತಂತ್ರಜ್ಞಾನ ಬೆಳೆದಂತೆ ಪತ್ರಿಕೆಗಳನ್ನು ಕೊಂಡು ಓದುವ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಡಿಜಿಟಲ್ ಮಾಧ್ಯಮದ ಮೂಲಕ ಇಂದು ತಮ್ಮ ಮೊಬೈಲ್‌ಗಳಿಂದಲೇ ಪತ್ರಿಕೆಗಳನ್ನು ಓದುತ್ತಿದ್ದಾರೆ. ವಿದ್ಯಾರ್ಥಿಗಳು ಮಾತೃಭಾಷೆ ಜತೆಗೆ ಉಳಿದ ಭಾಷೆಗಳನ್ನು ಕಲಿಯಬೇಕು. ಕೃತಕ ಬುದ್ಧಿಮತ್ತೆ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ತಮ್ಮಿಂದ ಕಸಿದುಕೊಳ್ಳುತ್ತಿದೆ. ಬೇರೆ ಬೇರೆ ಅವಕಾಶಗಳಿಂದ ವಂಚಿತರಾಗದೇ ದಿನನಿತ್ಯ ಪತ್ರಿಕೆಗಳಲ್ಲಿ ಪ್ರತಿನಿತ್ಯ ಸಂಪಾದಕೀಯಗಳನ್ನು ಓದುವ ಮೂಲಕ ನಿಮ್ಮ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್. ಬಿ. ಕುಮಾರಸ್ವಾಮಿ ಮಾತನಾಡಿ, ಪತ್ರಿಕೋದ್ಯಮ ಇಂದು ಉತ್ತಮವಾದ ಉದ್ಯಮವಾಗಿದೆ. ಇಂದು ನಾವು ಒಳ್ಳೆಯ ಗುಣಗಳನ್ನು ರೂಢಿಸಿಕೊಂಡರೆ ಮುಂದೆ ನಮಗೆ ಸಹಾಯವಾಗುತ್ತದೆ. ಗ್ರಂಥಾಲಯ ನಮ್ಮ ಜ್ಞಾನವನ್ನು ಹೆಚ್ಚಿಸಲು ಉಪಯೋಗವಾಗಿರುವುದರಿಂದ ದಿನಪತ್ರಿಕೆಗಳನ್ನು ಓದಿ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪತ್ರಕರ್ತರಾದ ತಿಪಟೂರು ಕೃಷ್ಣ ಮಾತನಾಡಿ, ಇಂದು ನಾವು ಸಮಸ್ಯೆಗಳ ನಡುವೆ ಇದ್ದರೂ ಆ ಸಮಸ್ಯೆಗಳ ನಡುವೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕಾಗಿದೆ. ಪ್ರಯತ್ನ ಪಡದೆ ಯಾವುದೂ ನಮಗೆ ದೊರಕುವುದಿಲ್ಲ. ಆದರ್ಶ ವ್ಯಕ್ತಿಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು, ಮನಸ್ಸನ್ನು ವಿಚಲಿತಪಡಿಕೊಳ್ಳದೆ ನಿಮ್ಮ ಅಧ್ಯಯನವನ್ನು ಮುಂದುವರಿಸಿ ಎಂದು ಹೇಳಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ವೆಂಕಟಾಚಲಯ್ಯ ಟಿ. ಮಾತನಾಡಿ, ಪತ್ರಿಕೋದ್ಯಮ ಸರ್ಕಾರದ ನಾಲ್ಕನೇ ಸ್ತಂಭವಾಗಿ ಕೆಲಸ ಮಾಡುತ್ತಿದೆ. ಪ್ರಪಂಚದಲ್ಲಿ ಪತ್ರಿಕೆ ಇಂದು ದೊಡ್ಡ ಮಾರುಕಟ್ಟೆಯಾಗಿ ಬೆಳೆದಿದೆ. ಪತ್ರಿಕೆಗಳನ್ನು ಓದುವುದರಿಂದ ನಾವು ಸಾಕಷ್ಟು ಮಾಹಿತಿಯನ್ನು ಪಡೆಯುತ್ತೇವೆ. ಪತ್ರಿಕೋದ್ಯಮದಲ್ಲಿ ಬಹಳಷ್ಟು ಅವಕಾಶ ಇರುವುದರಿಂದ ನೀವು ಅದನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಇದೇ ಸಂದರ್ಭದಲ್ಲಿ ನಿವೃತ್ತರಾದ ಪ್ರಾಧ್ಯಾಪಕ ಡಾ. ಜಯರಾಮಯ್ಯ ಅವರಿಗೆ ವಿದ್ಯಾರ್ಥಿಗಳಿಂದ ಆತ್ಮೀಯವಾಗಿ ಗೌರವ ವಂದನೆಗಳನ್ನು ಸಲ್ಲಿಸಲಾಯಿತ್ತು.
ಕಾರ್ಯಕ್ರಮದಲ್ಲಿ ಪ್ರೋ.ಶಿವಕುಮಾರ್,ಡಾ.ಶ್ರೀನಿವಾಸ್,ಡಾ.ರಾಜಶೇಖರ್,ಎಲ್.ಎಂ.ಹೇಮಲತಾ,ಪತ್ರಿಕೋದ್ಯಮ ಉಪನ್ಯಾಸಕರಾದ ದೇವರಾಜು.ಸಿ., ಶಂಕರಪ್ಪ ಹಾರೋಗೆರೆ,ಡಾ.ರವಿಗಂಗಾಧರ್ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *