ತುಮಕೂರು : ಸರ್ಕಾರಗಳು ಯಾವುದೇ ಸಬೂಬು ಹೇಳದೆ ಒಳ ಮೀಸಲಾತಿಯನ್ನು ಜಾರಿಗೊಳಿಸಿ ಶೋಷಿತ ಸಮಾಜಗಳಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಚಿಂತಕರು ಹಾಗೂ ಹೋರಾಟಗಾರರಾದ ಕೆ.ದೊರೈರಾಜ್ ಅವರು ಆಗ್ರಹಿಸಿದರು.
ಅವರಿಂದು ಮೈತ್ರಿನ್ಯೂಸ್ನೊಂದಿಗೆ ಸುಪ್ರೀಂಕೋರ್ಟ್ ನೀಡಿರುವ ಒಳಮೀಸಲಾತಿ ತೀರ್ಪಿನ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಭಾರತದ ಸಪ್ರೀಂಕೋರ್ಟ್ನ ಇತ್ತೀಚಿನ ತೀರ್ಪು ಪರಿಶಿಷ್ಠ ಜಾತಿಯ ಒಳಮೀಸಲಾತಿ ವರ್ಗೀಕರಣದ ಬಗ್ಗೆ ಕೊಟ್ಟಂತಹ ತೀರ್ಪು ಐತಿಹಾಸಿಕವಾದ ತೀರ್ಪು ಆಗಿದ್ದು, ಜನರ ಹೋರಾಟಕ್ಕೆ ಸಂಧ ಜಯ ಎಂದು ಭಾವಿಸುವುದಾಗಿ ಚಿಂತಕ ಕೆ.ದೊರೈರಾಜ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬಹಳ ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಸುಮಾರು 3 ದಶಕಗಳಿಂದ ದಕ್ಷಿಣ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳು ಒಳ ಮೀಸಲಾತಿಗಾಗಿ ಬಹಳ ತೀವ್ರವಾದ ಹೋರಾಟಗಳು ನಡೆಸುತ್ತಾ ಇವೆ. ಬಹಳಷ್ಟು ಜನ ಈ ಒಳ ಮೀಸಲಾತಿಯ ಹೋರಾಟದಲ್ಲಿ ಜೀವನವನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ನೀಡಿರುವ ಒಳಮೀಸಲಾತಿಯ ತೀರ್ಪು ಆಂಧ್ರಪ್ರದೇಶದ ತೀರ್ಪುಗಳು ಸೇರಿದಂತೆ ಇಡೀ ದಕ್ಷಿಣ ಭಾರತದ ಎಲ್ಲಾ ಒಳ ಮೀಸಲಾತಿಯ ತೀರ್ಪುಗಳಿಗೆ ತಿಲಾಂಜಲಿ ಇಡಲಾಗಿದೆ, ಸುಪ್ರೀಂಕೋರ್ಟ್ ತೀರ್ಪಿನಿಂದ ಇ.ವಿ.ಚಿನ್ನಯ್ಯಕೇಸ್ ಕೂಡ ರದ್ದಾಗಿದ್ದರಿಂದ, ಇ.ವಿ.ಚೆನ್ನಯ್ಯ ತೀರ್ಪು ಸರಿಯಿಲ್ಲ ಎಂದು ತೀರ್ಪು ಕೊಟ್ಟಿದ್ದರಿಂದ ಮೂರೂ ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿ ಮೋಡಲು ಅನುಕೂಲವನ್ನು ಮಾಡಿ ಕೊಟ್ಟಿದೆ.
ಅದಕ್ಕಾಗಿ ಸುಪ್ರೀಂಕೋರ್ಟ್ನ ತೀರ್ಪನ್ನು ಸ್ವಾಗತಿಸಬೇಕು, ಒಳಮೀಸಲಾತಿಗೆ ಹೋರಾಡಿದ ಎಲ್ಲಾ ಹೋರಾಟಗಾರರಿಗೆ ಅಭಿನಂದಿಸುವುದಾಗಿ ಕೆ.ದೊರೈರಾಜ್ ಹೇಳಿದರು.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ಕೊಡುವಂತಹ ಅಧಿಕಾರ ಇಲ್ಲ ಅಂತ ಇದುವರೆವಿಗಿನ ತೀರ್ಪು ಆಗಿತ್ತು. ಇ.ವಿ.ಚಿನ್ನಯ್ಯ ತೀರ್ಪು ಸಹ ಒಳಮೀಸಲಾಗಿಗೆ ಅವಕಾಶವಿಲ್ಲ ಎಂದು ಹೇಳಿತ್ತು, ಈಗ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗಿದೆ ಎಂದು ತೀರ್ಪು ಬಂದಿರುವುದರಿಂದ ಯಾವ ರಾಜ್ಯಗಳಲ್ಲಿ ಒಳ ಮೀಸಲಾತಿಗಾಗಿ ಹೋರಾಟ ನಡೆಯುತ್ತಿತ್ತು ಅವುಗಳಿಗೆ ನ್ಯಾಯವನ್ನು ದೊರಕಿಸಿ ಕೊಡುವಂತಹವುದನ್ನು ರಾಜ್ಯ ಸರ್ಕಾರಗಳು ಯಾವುದೇ ಸಬೂಬು ಹೇಳದೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಒಳ ಮೀಸಲಾತಿಗಾಗಿ 3 ದಶಕಗಳಿಂದ ಹೋರಾಟ ಮಾಡಿದ್ದು, ಕೊನೆಗೆ ಸುಪ್ರೀಂಕೋರ್ಟೇ ಒಳ ಮೀಸಲಾತಿ ಒದಗಿಸಬಹುದು ಎಂದು ಹೇಳಿದ್ದು, ಈಗ ರಾಜ್ಯ ಸರ್ಕಾರಗಳು ಒಳಮೀಸಲಾತಿ ಜಾರಿಗೊಳಿಸಲು ತೀರ್ಮಾನ ತೆಗೆದುಕೊಳ್ಳದಿದ್ದರೆ ಲಕ್ಷಾಂತರ ಮಂದಿ ಅವಕಾಶ ವಂಚಿತರಿಗೆ ದ್ರೋಹ ಬಗೆದಂತಾಗುತ್ತದೆ ಎಂದ ಅವರು, ಬಹಳಷ್ಟು ಚುನಾವಣೆ ಕಾಲದಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೆ ಕೋರ್ಟ್ ತೀರ್ಮಾನವಿಲ್ಲ, ಕಾನೂನುಗಳು ಅಡ್ಡಿ ಇವೆ ಎಂದು ಹೇಳುತ್ತಿದ್ದರು. ಈಗ ಆ ಸಬೂಬುಗಳನ್ನು ಹೇಳಲು ಅವಕಾಶವೇ ಇಲ್ಲ, ಹಾಗಾಗಿ ಎಲ್ಲಾ ರಾಜ್ಯ ಸರ್ಕಾರಗಳು ಎಲ್ಲೆಲ್ಲಿ ಒಳಮೀಸಲಾತಿಗಾಗಿ ಹೋರಾಟಗಳು ನಡೆಯುತ್ತಿದ್ದವು ಆ ಬೇಡಿಕೆಗೆ ಅನುಗುಣವಾಗಿ ಜಾರಿಗೆ ತರಬೇಕು, ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದರಿಂದ ಕೂಡಲೇ ಒಳಮೀಸಲಾತಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಎರಡನೇಯದಾಗಿ ಈ ತೀರ್ಪಿನ್ನು ಒಟ್ಟಾರೆ 7ಜನ ನ್ಯಾಯಾಧೀಶರು ತೀರ್ಪು ಕೊಟ್ಟಿದ್ದಾರೆ, ಅದನ್ನು ಅಧ್ಯಯನವನ್ನು ಸಹ ಮಾಡಬೇಕು. ಆ ತೀರ್ಪನ್ನು ಅಧ್ಯಯನ ಮಾಡಿ ಒಟ್ಟಾರೆ ಮೀಸಲಾತಿಯ ಬಗ್ಗೆ, ಮೀಸಲಾತಿಯ ತಾತ್ವಿಕತೆ ಮತ್ತು ಒಳ ಮೀಸಲಾತಿ ಕೊಡುವುದರಿಂದ ಆಗುವ ಸಾಮಾಜಿಕ ನ್ಯಾಯ, ಅದರ ಅನುಕೂಲಗಳನ್ನು ಅಧ್ಯಯನ ಮಾಡಬೇಕು, ಏಕೆಂದರೆ ಕೆಲವೊಂದು ವಿಷಯಗಳು ಗೊಂದಲವುಂಟು ಮಾಡುವಂತಹ ವಿಷಯಗಳು ಇವೆ ಎಂದರು.
ಅವುಗಳನ್ನೆಲ್ಲಾ ಕೂಲಂಕುಷವಾಗಿ ತಜ್ಞರ ಜೊತೆ ಚರ್ಚೆ ಮಾಡಿ ಈ ಜನರ ಬೇಡಿಕೆಗಳೇನಿದೆ, ಆ ಜನರ ಬೇಡಿಕೆಗಳಅನುಗುಣವಾಗಿ ಸರ್ಕಾರಗಳು ಆದೇಶ ಮಾಡಬೇಕು ಎಂದ ಅವರು, ಗೊಂದಲಗಳನ್ನೇ ನೆಪ ಮಾಡಿಕೊಂಡು ಒಳ ಮೀಸಲಾತಿ ಜಾರಿಗೆ ತಡ ಮಾಡುವುದಾಗಲಿ, ಕಾಲ ತಳ್ಳಿಕೊಂಡು ಜನರಿಗೆ ಮೋಸ ಮಾಡುವುದಾಗಲಿ ಕೆಲಸವನ್ನು ಸರ್ಕಾರಗಳು ಮಾಡಬಾರದು ತಜ್ಞರ ಜೊತೆ ಕೂತು ಚರ್ಚೆ ಮಾಡಿ ತೀರ್ಪಿನಲ್ಲಿ ಒಳಮೀಸಲಾತಿ ಜಾರಿಗೆ ಪರವಾಗಿರುವ ಅಂಶಗಳೇನಿವೆ, ವಿರೋಧವಾದ ಅಂಶಗಳು ಏನೇನು ಇವೆ ಎಂಬೆಲ್ಲವನ್ನೂ ಕೂಡ ಪರಿಶೀಲನೆ ಮಾಡಿ, ಜನಗಳ ಪರವಾಗಿರುವಂತಹ ಅಂಶಗಳನ್ನು ಜಾರಿಗೆ ತರುವ ಆದೇಶವನ್ನು ಸರ್ಕಾರಗಳು ಕೂಡಲೇ ಮಾಡಬೇಕೆಂದು ಒತ್ತಾಯಿಸಿದರು.
ಹಾಗೆ ಮಾಡುವುದರಿಂದ ಪರಿಶಿಷ್ಟ ಜಾತಿಯ ಎಲ್ಲಾ ಜಾತಿಯ 101 ಜಾತಿಗಳಿಗೆ ಸಮಾನವಾಗಿ ಮೀಸಲಾತಿ ಹಂಚಿಕೆಯಾಗಿ ಒಂದು ಸಾಮಾಜಿಕ ನ್ಯಾಯ ಏರ್ಪಡುತ್ತದೆ, ಜಾತಿ ಸಂಘರ್ಷಗಳು ನಿಂತು ಹೋಗುತ್ತವೆ, ಇದರಿಂದ ಆರ್ಥಿಕವಾಗಿ ರಾಜಕೀಯವಾಗಿ ಗೊಂದಲಗಳು ತಪ್ಪುತ್ತವೆ, ದಯವಿಟ್ಟು ಸರ್ಕಾರಗಳು ಮಾತ್ರ ಯಾವುದೇ ಸಬೂಬು ಹೇಳದೆ ಸುಪ್ರೀಂಕೋರ್ಟ್ ತೀರ್ಪನ್ನು ಅನುಸರಿಸಿ ಒಳಮೀಸಲಾತಿ ಜಾರಿಯ ಆದೇಶವನ್ನು ತಕ್ಷಣ ಜಾರಿಗೆ ತರಬೇಕೆಂದು ಚಿಂತಕ ಹಾಗೂ ಹೋರಾಟಗಾರ ಕೆ.ದೊರೈರಾಜ್ ಒತ್ತಾಯಿಸಿದರು.
ಸುದ್ದಿ : ಮೈತ್ರಿನ್ಯೂಸ್, ತುಮಕೂರು.