ತುಮಕೂರು : ಪ್ರತಿ ಕ್ಷೇತ್ರದಲ್ಲೂ ಶಿಕ್ಷಣ ಮಹತ್ವ ಪಡೆದಿದ್ದು, ಯಾವುದೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳು ಹಾಗೂ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿ ಮುಂಭಾಗದ ಕ್ರೀಡಾಂಗಣದಲ್ಲಿಂದು ಜರುಗಿದ ವಿಶ್ವವಿದ್ಯಾನಿಲಯದ 17ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪ್ರಾಚೀನ ಕಾಲದಲ್ಲಿ ನಮ್ಮ ಭಾರತ ದೇಶವನ್ನು ವಿಶ್ವ ಗುರು ಎಂದು ಕರೆಯಲಾಗುತ್ತಿತ್ತು. ನಳಂದ, ತಕ್ಷಶಿಲಾ, ವಿಕ್ರಮಶಿಲಾ ಮುಂತಾದ ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಿದ್ದವು. ಈ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಭಾರತ ಮತ್ತು ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ತಾಂತ್ರಿಕ ಶಿಕ್ಷಣವು ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಮೂಲಕ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ತಂತ್ರಜ್ಞಾನವು ಊಹಿಸುವುದಕ್ಕಿಂತ ವೇಗವಾಗಿ ಬದಲಾಗುತ್ತಿದೆ. ಒನ್ ಇಂಡಿಯಾ, ಬೆಸ್ಟ್ ಇಂಡಿಯಾ ಮತ್ತು ಡೆವಲಪ್ಡ್ ಇಂಡಿಯಾಗಾಗಿ ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಗುರಿಯನ್ನು ಸಾಧಿಸುವಲ್ಲಿ ಯುವಜನತೆ ಕೊಡುಗೆ ನೀಡಬೇಕಲ್ಲದೆ, ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಕೊಡುಗೆಯನ್ನು ನೀಡುತ್ತಿವೆ. ದೇಶದ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಸಕ್ರಿಯ ಪ್ರಯತ್ನಗಳು ನಡೆಯಬೇಕು. ನಮ್ಮ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ವೇಗದಲ್ಲಿ ಸಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ದೇಶವನ್ನು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಗೆ ತರಲು ನಾವೆಲ್ಲರೂ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿದ ಅವರು, ಗೌರವ ಡಾಕ್ಟರೇಟ್ ಪಡೆದ ಸಾಧಕರ ಸಾಧನೆ ಯುವಪೀಳಿಗೆಗೆ ಸ್ಫೂರ್ತಿಯಾಗಲಿದೆ. ಸಾಧಕರ ಸೇವೆ ಸಮಾಜಕ್ಕಾಗಿ ನಿರಂತರವಾಗಿರಲಿ ಎಂದು ಹಾರೈಸಿದರು.
ದೇಶ ಮತ್ತು ಪ್ರಪಂಚದಲ್ಲಿ ಪರಿಸರ ಅಸಮತೋಲನದ ಗಂಭೀರ ಸಮಸ್ಯೆ ಇದ್ದು, ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬರೂ ತಮ್ಮ “ತಾಯಿಯ ಹೆಸರಿನಲ್ಲಿ ಒಂದು ಮರ” ನೆಡುವ ಮೂಲಕ, ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ತಾಯಿ ಹೇಗೆ ಮಕ್ಕಳನ್ನು ಪೋಷಿಸುತ್ತಾರೋ ಹಾಗೆ ನೆಟ್ಟ ಸಸಿಗಳನ್ನು ಪೆÇೀಷಿಸಿ ಸಂರಕ್ಷಿಸಬೇಕು ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು ವಿಶ್ವ ವಿದ್ಯಾನಿಲಯದ ಸಹ-ಕುಲಾಧಿಪತಿ ಡಾ: ಎಂ.ಸಿ. ಸುಧಾಕರ್ ಮಾತನಾಡಿ ಯಶಸ್ಸು ಸುಲಭವಾಗಿ ದೊರಕುವುದಿಲ್ಲ. ಸೋಲುಗಳನ್ನು ಜಯದ ಮೆಟ್ಟಿಲುಗಳನ್ನಾಗಿ ಮಾಡಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ವಿದ್ಯಾರ್ಥಿ ಹಂತದಲ್ಲಿ ತಮ್ಮ ವೃತ್ತಿಯ ಗುರಿಯನ್ನು ಹೊಂದಿರಬೇಕು. ಪದವೀಧರರಾಗುವುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಪದವಿಗಳನ್ನು ಪಡೆದ ನಂತರ ಬದುಕಿನ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ವೃತ್ತಿ ಕೌಶಲ್ಯಗಳನ್ನು ಕಲಿಸುವುದು ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಗುರಿಯಾಗಿದೆ. ಪ್ರತಿಯೊಂದು ಪದವಿ ಕಾಲೇಜಿನ ವಿವಿಧ ವಿಷಯಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಕಡ್ಡಾಯಗೊಳಿಸಿದ್ದು, ವಿದ್ಯಾರ್ಥಿಗಳು ಉದ್ಯೋಗಗಳನ್ನು ಪಡೆಯಲು ಅನುಕೂಲವಾಗಿದೆ. ಎಲ್ಲಾ ವಿಶ್ವ ವಿದ್ಯಾನಿಲಯಗಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಖಾಲಿ ಇರುವ ಬೋಧಕ ಸಿಬ್ಬಂದಿಗಳ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ತುಮಕೂರು ವಿಶ್ವ ವಿದ್ಯಾನಿಲಯದ 17ನೇ ಘಟಿಕೋತ್ಸವದ ಭಾಷಣ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ವಿಶ್ರಾಂತ ಅಧ್ಯಕ್ಷ ಡಾ: ಎ.ಎಸ್. ಕಿರಣ್ ಕುಮಾರ್ ಅವರು, ನಿಮ್ಮ ಆಯ್ಕೆಗಳೇ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ. ನಿಮ್ಮ ಕೌಶಲ್ಯ, ಕಾರ್ಯ ಕ್ಷಮತೆ ಮತ್ತು ವಿವೇಕದಿಂದ ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು. ತಮ್ಮ ಸುತ್ತ ಮುತ್ತಲು ನಡೆಯುತ್ತಿರುವ ಪ್ರಚಲಿತ ಘಟನೆಗಳ ಬಗ್ಗೆ ಅರಿತುಕೊಂಡಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿಲ್ಲಿ ಬದುಕಲು ಸಾಧ್ಯ. ನೀವು ಕಲಿತಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವ ಅವಕಾಶಗಳನ್ನು ಹುಡುಕಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ರಾಕೆಟ್ ಮತ್ತು ಉಪಗ್ರಹಗಳನ್ನು ಉತ್ಪಾದಿಸುವ ಜಗತ್ತಿನ ಬೆರಳೆಣಿಕೆ ದೇಶಗಳಲ್ಲೊಂದಾಗಿ ಭಾರತ ಹೊರಹೊಮ್ಮಿದ್ದು, ರಾಕೆಟ್ ರೂಪಾಂತರಗಳನ್ನು ನಿರ್ಮಿಸುವ ಮೂಲಕ 34 ದೇಶಗಳ 400 ಉಪಗ್ರಹಗಳನ್ನು ಉಡಾಯಿಸಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಾಗತಿಕ ಮನ್ನಣೆಯನ್ನು ಪಡೆದುಕೊಂಡಿದೆ. ಪ್ರಪಂಚವು ನಿರಂತರವಾಗಿ ಮತ್ತು ವೇಗವಾಗಿ ಬದಲಾವಣೆಗಳನ್ನು ಹೊಂದುತ್ತಾ ಸಾಗುತ್ತಿದೆ. ಕೃತಕ ಬುದ್ಧಿಮತ್ತೆ(ಂi)ಯಲ್ಲಾಗುತ್ತಿರುವ ಪ್ರಗತಿಯು ಕೆಲಸ ಮಾಡುವ ವಿಧನಗಳನ್ನೇ ಬದಲಾಯಿಸುತ್ತಿದೆ. ಆರೋಗ್ಯ, ವಾಣಿಜ್ಯ, ಸಂವಹನ, ಸಾರಿಗೆ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟಿರುವ ಕೃತಕ ಬುದ್ಧಿಮತ್ತೆಯಿಂದ ಹೊಸ ಕ್ರಾಂತಿಯೇ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ಶೈಕ್ಷಣಿಕ ಪ್ರಗತಿ ಮಾಹಿತಿ ಹಂಚಿಕೊಂಡ ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿ ಪೆÇ್ರ: ಎಂ.ವೆಂಕಟೇಶ್ವರಲು ಅವರು, ನಗರದ ಹೊರವಲಯದ ಬಿದರಕಟ್ಟೆಯಲ್ಲಿ 240 ಎಕರೆ ವಿಸ್ತೀರ್ಣದಲ್ಲಿ ವಿಶ್ವ ವಿದ್ಯಾನಿಲಯದ ಹೊಸ ಕ್ಯಾಂಪಸ್ ನಿರ್ಮಿಸಿದ್ದು. ಶೀಘ್ರ ಕಾರ್ಯಾರಂಭ ಮಾಡಲು ಅಗತ್ಯ ಸಿದ್ಧತೆಗಳು ನಡೆಯುತ್ತಿದೆ ಎಂದು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ 38,214 ಸ್ನಾತಕ ವಿದ್ಯಾರ್ಥಿಗಳು ಮತ್ತು 4325 ಸ್ನಾತಕೋತ್ತರ ವಿದ್ಯಾರ್ಥಿಗಳು ವಿಶ್ವ ವಿದ್ಯಾನಿಲಯದಲ್ಲಿ ಪ್ರವೇಶಾತಿ ಪಡೆದಿದ್ದು, ಈ ವರ್ಷದಿಂದ ಮಾಸ್ಟರ್ ಆಫ್ ಲಾ, ಕೈಗಾರಿಕಾ ಗಣಿತಶಾಸ್ತ್ರ, ಮತ್ತು ಅನ್ವಯಿತ ಗಣಕ ವಿಜ್ಞಾನದಲ್ಲಿ ಎಂ.ಎಸ್ಸಿ, ಬ್ಯಾಚುಲರ್ ಆಫ್ ಕಂಪ್ಯೂಟರ್ ಸೈನ್ಸ್, ಶೈಕ್ಷಣಿಕ ಬರವಣಿಗೆ ಮತ್ತು ಪ್ರಕಟಣೆ, ಮಾಹಿತಿ ತಂತ್ರಜ್ಞಾನ ಅಧಿನಿಯಮ, ಮಾನವ ಸಂಪನ್ಮೂಲ ನಿರ್ವಹಣೆ, ಬೌದ್ಧಿಕ ಆಸ್ತಿ ಹಕ್ಕುಗಳು ಎಂಬ ಹೊಸ ವಿಶೇಷ ವಿಷಯಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ., ವಿಶ್ವವಿದ್ಯಾನಿಲಯದ ಕುಲಸಚಿವ(ಆಡಳಿತ) ನಾಹಿದಾ ಜಮ್ ಜಮ್, ಕುಲಸಚಿವ(ಮೌಲ್ಯಮಾಪನ) ಪ್ರಸನ್ನ ಕುಮಾರ್ ಕೆ., ಬೋಧಕ-ಬೋಧಕೇತರ ವರ್ಗ, ಸಿಂಡಿಕೇಟ್ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಘಟಿಕೋತ್ಸವದಲ್ಲಿ ಡಾ. ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ರಾಮು ಎಂಬ ವಿದ್ಯಾರ್ಥಿಗೆ 6 ಚಿನ್ನದ ಪದಕ, ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಾಗೇಂದ್ರ ಅವರಿಗೆ 2 ಚಿನ್ನದ ಪದಕ, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಗೋಪಾಲ ವೈ.ಆರ್ ಸೇರಿದಂತೆ 74 ವಿದ್ಯಾರ್ಥಿಗಳಿಗೆ 98 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ ಕ್ರೀಡೆ ಮತ್ತು ಸಂಸ್ಕøತಿ ವಿಭಾಗದಲ್ಲಿ ಜಲಕ್ರೀಡಾ ಸಾಹಸಿಗ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಸುಗ್ಗನಪಾಳ್ಯದ ಎಸ್.ಸಿ. ನಾಗಾನಂದಸ್ವಾಮಿ; ಸಮಾಜ ಸೇವಾ ವಿಭಾಗದಲ್ಲಿ ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್; ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವಾ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸೇರಿ 3 ಮಂದಿಗೆ ಗೌರವ ಡಾಕ್ಟರೇಟ್ ಹಾಗೂ 36 ಅಭ್ಯರ್ಥಿಗಳಿಗೆ ಪಿಎಚ್.ಡಿ ಪ್ರದಾನ ಮಾಡಲಾಯಿತಲ್ಲದೆ, 3 ಅಭ್ಯರ್ಥಿಗಳಿಗೆ ಡಿ.ಲಿಟ್ ಪದವಿ, 1758 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 10,230 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಸೇರಿದಂತೆ ಒಟ್ಟು 11988 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.