ಟ್ರಾಕ್ಟರ್ ಸಾಲಕ್ಕಾಗಿ ಜಮೀನು ಹರಾಜು-ಆ.12ರಂದು ಬ್ಯಾಂಕ್ ಮುಂದೆ ರೈತ ಸಂಘದಿಂದ ಪ್ರತಿಭಟನೆ

ತುಮಕೂರು:ತುರುವೇಕೆರೆ ಪಟ್ಟಣದ ಕರ್ನಾಟಕ ಬ್ಯಾಂಕ್‍ನವರು ರೈತರೊಬ್ಬರು ಟ್ರಾಕ್ಟರ್ ಸಾಲಕ್ಕಾಗಿ ಅಡವಿಟ್ಟ 6.10 ಗುಂಟೆ ಜಮೀನನ್ನು ಒಟಿಎಸ್‍ಗೆ ಅವಕಾಶ ನೀಡದೆ ಈ ಟೆಂಡರ್ ಮೂಲಕ ಅತಿ ಕಡಿಮೆ ಬೆಲೆಗೆ ಹರಾಜು ಮಾಡಿ,ರೈತರನ್ನು ಬೀದಿಗೆ ತಳ್ಳಲು ಹೊರಟಿರುವ ಕ್ರಮವನ್ನು ವಿರೋಧಿಸಿ ಆಗಸ್ಟ 12ರ ಸೋಮವಾರ ಬ್ಯಾಂಕಿನ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.

ತುಮಕೂರು ವಿಜ್ಞಾನ ಕೇಂದ್ರದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2005ರಲ್ಲಿ ತುರುವೇಕೆರೆ ತಾಲೂಕು ತಾಳೆಕೆರೆ ಗ್ರಾಮದ ನಾಗರಾಜು ಎಂಬುವವರು ಟ್ರಾಕ್ಟರ್‍ಗಾಗಿ ತುರುವೇಕೆರೆ ಕರ್ನಾಟಕ ಬ್ಯಾಂಕಿನಿಂದ 4.50 ಲಕ್ಷದ ಸಾಲ ಪಡೆದಿದ್ದು, ಕಟ್ಟಲು ಸಾಧ್ಯವಾಗಿರಲಿಲ್ಲ. ಈಗ ಬ್ಯಾಂಕಿನವರು ಸಾಲದ ಮೇಲಿನ ಬಡ್ಡಿ, ಚಕ್ರ ಬಡ್ಡಿ ಸೇರಿಸಿ 34.80 ಲಕ್ಷ ರೂ ಬಾಕಿ ತೋರಿಸಿ, ಓಟಿಎಸ್‍ಗೂ ಅವಕಾಶ ನೀಡದೆ, ನ್ಯಾಯಾಲಯದ ಡಿಕ್ರಿ ಪ್ರಕಾರ ಈ ಟೆಂಡರ್ ಮೂಲಕ ಮೂರು ಕೋಟಿಗೆ ಹೋಗುವ ಆಸ್ತಿಯನ್ನು ಕೇವಲ 35.40 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದಾರೆ.ಕೇಂದ್ರದ ಸರ್ಫೇಸಿ ಕಾಯ್ದೆಯನ್ನು ಮುಂದಿಟ್ಟುಕೊಂಡು ರೈತರ ಭೂಮಿಯನ್ನು ಈ ಹರಾಜು ಮಾಡಿರುವುದು ಸರಿಯಲ್ಲ.ಇದು ಆರ್.ಬಿ.ಐ ನಿಯಮಗಳಿಗೆ ವಿರುದ್ದವಾದ ನಡೆಯಾಗಿದೆ. ಅಲ್ಲದೆ ರೈತವಿರೋಧಿ ನಡೆಯಾಗಿದೆ.ಹಾಗಾಗಿ ಆಗಸ್ಟ್ 12 ರಂದು ಬ್ಯಾಂಕಿನ ಮುಂದೆ ಬೃಹತ್ ಹೋರಾಟ ನಡಸಲಾಗುತ್ತಿದೆ ಎಂದರು.

ರೈತವಿರೋಧಿ ಕರ್ನಾಟಕ ಬ್ಯಾಂಕಿನ ವಿರುದ್ದದ ಈ ಬೃಹತ್ ರೈತ ಹೋರಾಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ್ಚ, ಕಾರ್ಯಾಧ್ಯಕ್ಷರಾದ ಜೆ.ಎಂ.ವೀರಸಂಗಯ್ಯ, ಎ.ಗೋವಿಂದರಾಜು, ಉಪಾಧ್ಯಕ್ಷರುಗಳಾದ ಎ.ಎಂ. ಮಹೇಶಪ್ರಭು, ಶಿವಾನಂದ ಕುಗ್ವೆ, ಕೆ.ಮಲ್ಲಯ್ಯ, ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಜುಳ.ಎಸ್.ಅಕ್ಕಿ,ಮ ಶ್ರೀಮತಿ ನೇತ್ರಾವತಿ ಸೇರಿದಂತೆ ತುಮಕೂರು, ಮಂಡ್ಯ, ಮೈಸೂರು, ರಾಮನಗರ,ಹಾಸನ., ಕೊಡಗು ಜಿಲ್ಲೆಗಳ ಪದಾಧಿಕಾರಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎ.ಗೋವಿಂದರಾಜು ತಿಳಿಸಿದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಸರ್ಫೇಸಿ ಕಾಯ್ದೆಯ ವ್ಯಾಪ್ತಿಯಿಂದ ಕೃಷಿ ಭೂಮಿಯನ್ನು ಕೈಬಿಡುವಂತೆ ಈಗಾಗಲೇ ಹಲವಾರು ಬಾರಿ ಕೇಂದ್ರ ಸರಕಾರದ ವಿರುದ್ದ ಹೋರಾಟ ನಡೆಸಲಾಗುತ್ತಿದೆ.ಆದರೆ ಸರಕಾರ ಕಿವಿಗೊಟ್ಟಿಲ್ಲ.ಅಲ್ಲದೆ ರೈತರ ಸಾಲಮನ್ನಾ ಮಾಡಿ ಎಂದರೂ ಗಮನಹರಿಸುತ್ತಿಲ್ಲ. ಬದಲಿಗೆ 2014ರಿಂದ ಇಲ್ಲಿಯವರೆಗೆ ಉದ್ದಿಮೆದಾರರ20.40 ಲಕ್ಷ ಕೋಟಿ ರೂ ಸಾಲವನ್ನು ರೈಟ್‍ಅಫ್ ಹೆಸರಿನಲ್ಲಿ ಮನ್ನಾ ಮಾಡಿ,ತನ್ನ ರೈತವಿರೋಧಿ ನೀತಿಯನ್ನು ತೋರಿಸಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಸಾಲ ಸುಸ್ತಿಯಾದಂತಹ ಸಂದರ್ಭದಲ್ಲಿ ಎಸ್.ಬಿ.ಐ,ಕರ್ನಾಟಕ ಗ್ರಾಮೀಣ ಬ್ಯಾಂಕ್ ಇನ್ನಿತರೆ ಬ್ಯಾಂಕುಗಳು ಸಾಧ್ಯವಾದಷ್ಟು ರೈತಪರವಾಗಿ ನಡೆದುಕೊಂಡ ಉದಾಹರಣೆಗಳಿವೆ.ಆದರೆ ಕರ್ನಾಟಕ ಬ್ಯಾಂಕ್ ಮಾತ್ರ ಒಟಿಎಸ್‍ಗೆ ಅವಕಾಶ ನೀಡದೆ,ಬೆಲೆ ಬಾಳುವ ಭೂಮಿಯನ್ನು ಭೂ ಮಾಫೀಯ ಜೊತೆ ಸೇರಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿ, ರೈತರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ಕೂಡಲೇ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಈ ಹರಾಜು ರದ್ದು ಪಡಿಸಿ, ರೈತರ ಸಾಲದ ಅಸಲು ಕಟ್ಟಿಕೊಂಡು, ಬಡ್ಡಿ ಮನ್ನಾ ಮಾಡುವ ಮೂಲಕ ಜಮೀನು ವಾಪಸ್ ನೀಡಬೇಕು ಎಂಬುದು ನಮ್ಮ ಒಕ್ಕೊರಲ ಬೇಡಿಕೆಯಾಗಿದೆ ಎಂದು ಎ.ಗೋವಿಂದರಾಜು ನುಡಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ,ತಾಲೂಕು ಅಧ್ಯಕ್ಷರಾದ ಚಿಕ್ಕಬೋರೇಗೌಡ,ಶ್ರೀನಿವಾಸ್,ತಿಮ್ಮೇಗೌಡ,ಶಬ್ಬೀರ್ ಪಾಷ,ಅಸ್ಲಾಂಪಾಷ,ಮಹೇಶ್,ರಾಮಚಂದ್ರಪ್ಪ, ಈಶ್ವರಣ್ಣ, ರಾಜು.ಡಿ.ಕೆ. ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *