ಜಮೀನು ನೀಡಲು ಬ್ಯಾಂಕ್ ಒಪ್ಪಿಗೆ, ಪ್ರತಿಭಟನೆ ಹಿಂಪಡೆದ ರೈತ ಸಂಘ

ತುಮಕೂರು:ತುರುವೇಕೆರೆ ತಾಲೂಕು ತಾಳೆಕೆರೆ ಗ್ರಾಮದ ಕೃಷ್ಣಪ್ಪ ಎಂಬುವವರ ಭೂಮಿಯನ್ನು ಕರ್ನಾಟಕ ಬ್ಯಾಂಕನವರು ಸರ್ಫೇಸಿ ಕಾಯ್ದೆ ಅನ್ವಯ ಈ ಟೆಂಡರ್ ಮೂಲಕ ಹರಾಜು ಹಾಕಿದ್ದ ಭೂಮಿಯ ಟೆಂಡರ್ ರದ್ದು ಪಡಿಸಿ,ರೈತರಿಗೆ ಜಮೀನು ನೀಡಲು ಒಪ್ಪಿರುವ ಹಿನ್ನೆಲೆಯಲ್ಲಿ ಆಗಸ್ಟ್ 12 ರಂದು ಕರೆದಿದ್ದ ಪ್ರತಿಭಟನೆಯನ್ನು ಹಿಂಪಡೆಯ ಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗು ತುಮಕೂರು ಜಿಲ್ಲಾಧ್ಯಕ್ಷ ಎ..ಗೋವಿಂದರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ ಅವರು,ತುಮಕೂರು ನಗರದ ಕರ್ನಾಟಕ ಬ್ಯಾಂಕಿನ ವಲಯ ಕಚೇರಿಯಲ್ಲಿ ಶುಕ್ರವಾರ ರಾತ್ರಿ ನಡೆದ ಬ್ಯಾಂಕಿನ ಜಿ.ಎಂ.ಕೆ.ಸುಬ್ರಾಮ್ ಮತ್ತು ಎಜಿಎಂ ಮಲ್ಲನಗೌಡ ಅವರುಗಳು,ಲೀಡ್ ಬ್ಯಾಂಕ್ ಸಮ್ಮುಖದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ,ರೈತರ ಭೂಮಿಯನ್ನ ಹರಾಜು ಹಾಕಿರುವುದು ತಪ್ಪಾಗಿದೆ.ಹಾಗಾಗಿ ಮುಂದಿನ ಎರಡು ತಿಂಗಳ ಒಳಗೆ ರೈತರ ಜಮೀನು ಹರಾಜನ್ನು ರದ್ದುಪಡಿಸಿ,ರೈತರಿಗೆ ವಾಪಸ್ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.ಇದು ರೈತ ಸಂಘದ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ.ಹಾಗಾಗಿ ಆಗಸ್ಟ್ 12 ರಂದು ತುರುವೇಕೆರೆಯ ಬ್ಯಾಂಕ್ ಕಚೇರಿ ಮುಂದೆ ಕರೆದಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದರು.

ಕರ್ನಾಟಕ ಬ್ಯಾಂಕಿನ ಜಿ.ಎಂ ಮತ್ತು ಎಜಿಎಂ ಅವರುಗಳು ರೈತರೊಂದಿಗೆ ನಡೆದ ಸಭೆಯಲ್ಲಿ,ರೈತ ಮುಖಂಡರು ಬ್ಯಾಂಕಿನ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದು,ಬ್ಯಾಂಕ್ ಅಧಿಕಾರಿಗಳು ಒಟಿಎಸ್‍ಗೆ ಅವಕಾಶ ನೀಡದೆ. ಸುಮಾರು 3.50 ಕೋಟಿ ಬೆಲೆ ಬಾಳುವ ಭೂಮಿಯನ್ನು ಕೇವಲ 35.80 ಲಕ್ಷ ರೂಗಳಿಗೆ ಈ ಟೆಂಡರ್ ಮೂಲಕ ಹರಾಜು ನಡೆಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು,ಇನ್ನೂ ಮುಂದೆ ಈಗಾಗದಂತೆ ಎಚ್ಚರಿಕೆ ವಹಿಸಬೇಕು.ಅಲ್ಲದೆ ಒಟಿಎಸ್‍ಗೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯವನ್ನು ಮಾಡಿದ್ದು,ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ರೈತ ಕೃಷ್ಣಪ್ಪ ಅವರಿಗೆ ಭೂಮಿ ಹಿಂದಿರುಗಿಸಿದ ನಂತರ,ರೈತರು ತೆಗೆದುಕೊಂಡಿರುವ ಸಾಲದ ಅಸಲನ್ನು ಕಟ್ಟಿಸಿಕೊಂಡು,ಬಡ್ಡಿ ಮನ್ನಾ ಮಾಡುವಂತೆ ಸಹ ಬ್ಯಾಂಕಿನ ಅಧಿಕಾರಿಗಳ ಮುಂದೆ ಬೇಡಿಕೆ ಇಡಲಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ತುರುವೇಕೆರೆ ಶ್ರೀನಿವಾಸಗೌಡ,ಕೆ.ಎನ್.ವೆಂಕಟೇಗೌಡ, ಅಸ್ಲಾಂಪಾಷ, ತಿಮ್ಮೇಗೌಡ,ರಹಮತ್‍ವುಲ್ಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್,ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ,ಶೇಖರ್, ಪುರುಷೋತ್ತಮ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *