ಮೌಲ್ಯರಹಿತ ಬದುಕಿನಿಂದ ಸ್ವಾತಂತ್ರ್ಯ ಕಳೆದುಕೊಳ್ಳುವ ಆತಂಕ

ತುಮಕೂರು: ದೇಶವು ತಂತ್ರಜ್ಞಾನ, ಆವಿಷ್ಕಾರಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ಆದರೆ, ಯುವಪೀಳಿಗೆಯ ಮೌಲ್ಯರಹಿತ ಬದುಕು, ಕುಸಿದಿರುವ ವ್ಯಕ್ತಿತ್ವ, ದುರ್ನಡತೆಯಿಂದಾಗಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಹುದಾದ ಪರಿಸ್ಥಿತಿಗೆ ಭಾರತ ತಲುಪಬಹುದು ಎಂದು ಹಿರಿಯ ಐಎಎಸ್ ಅಧಿಕಾರಿ ಬಿ. ಆರ್. ಜಯರಾಮ ರಾಜೇ ಅರಸ್ ಆತಂಕ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನ್ನಡತೆಯಿಲ್ಲದ ಈಗಿನ ಯುವಪೀಳಿಗೆ ಸಾಮೂಹಿಕ ಅತ್ಯಾಚಾರ, ಕೊಲೆ, ಸುಲಿಗೆಯಂತಹ ವಿಕೃತ ಕೆಲಸಗಳಲ್ಲಿ ತೊಡಗಿ, ಮೊಬೈಲ್ ವ್ಯಸನಿಗಳಾಗಿ ನೈತಿಕವಾಗಿ ಕುಸಿಯುತ್ತಿದ್ದಾರೆ. ಇದರ ಪರಿಣಾಮ ಭಾರತವು ವಿಕಾಸವಾದದಲ್ಲಿ ನೆಲಕಚ್ಚಿ ಸ್ವಾತಂತ್ರ್ಯದ ಅಂಧಃಪತನವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾವಿರಾರು ವರ್ಷಗಳ ಪರಕೀಯರ ಆಳ್ವಿಕೆಯಲ್ಲಿ ನಲುಗಿ, ಗುಲಾಮಗಿರಿಯನ್ನು, ಸರ್ವಾಧಿಕಾರವನ್ನು ಇಷ್ಟಪಟ್ಟು ಒಪ್ಪಿಕೊಂಡ ದೇಶ ನಮ್ಮದು. ಸ್ವಾತಂತ್ರ್ಯದ ಅರಿವು, ಜವಾಬ್ದಾರಿ ಈಗಿನ ಯುವ ಸಮೂಹದ ಅರಿವಿಗೆ ಎಳ್ಳಷ್ಟು ಬಾರದಿರುವುದು ವಿಪರ್ಯಾಸ ಎಂದರು.
ಸ್ವಾತಂತ್ರ್ಯವೆಂದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಮೌಢ್ಯಗಳಿಂದ, ಧರ್ಮ-ಜಾತಿಗಳ ಬಂಧನದಿಂದ, ಅನಕ್ಷರತೆಯಿಂದ, ಅಸಮಾನತೆಯಿಂದ, ಮೇಲು-ಕೀಳು ಭಾವನೆಯಿಂದ, ನಗರ-ಗ್ರಾಮಗಳ ತಾರತಮ್ಯದಿಂದ, ರೋಗ-ರುಜಿನಗಳಿಂದ ಸ್ವತಂತ್ರವಾಗುವುದು. ಪ್ರಜಾಸೇವಕರನ್ನು ಆರಿಸುವಾಗ ಮತಗಳನ್ನು ಹಣ-ಹೆಂಡಕ್ಕೆ ಮಾರಿಕೊಳ್ಳದೆ ಉತ್ತಮರನ್ನು ಆಯ್ಕೆಮಾಡುವುದು ಎಂದು ಹೇಳಿದರು.

ವರ್ಗೀಸ್ ಕುರಿಯನ್ ಅವರ ಶ್ವೇತ ಕ್ರಾಂತಿ, ಎನ್. ಎಸ್. ಸ್ವಾಮಿನಾಥನ್ ಅವರ ಹಸಿರು ಕ್ರಾಂತಿ, ವಿಶ್ವೇಶ್ವರಯ್ಯ ಅವರ ಕೃಷ್ಣರಾಜಸಾಗರ ಅಣೆಕಟ್ಟು, ಅಂಬೇಡ್ಕರ್ ಅವರ ಸಂವಿಧಾನ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಗ್ರಾಮೋದ್ಧಾರ, ಸಮಾನತೆಯ ಪರ ಹೋರಾಟ, ವಿಜ್ಞಾನಿಗಳ ಆವಿಷ್ಕಾರಗಳು ಭಾರತಕ್ಕೆ ನೀಡಿದ ಅತ್ಯುನ್ನತ ಕೊಡುಗೆಗಳು ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಈಗಿನ ಯುವಕರ ನಡೆಯಿಂದ ಭಾರತದ ಸ್ವಾತಂತ್ರ್ಯಕ್ಕೆ ಆತಂಕದ ಪರಿಸ್ಥಿತಿಯುಂಟಾಗಿದೆ. 90 ವರ್ಷಗಳ ಕಾಲ ಸ್ವಾತಂತ್ರ್ಯವೊಂದೇ ಬದುಕಿನ ಉದ್ದೇಶವೆಂದು ಹೋರಾಡಿದ ಮಹನೀಯರ ತ್ಯಾಗ ಬಲಿದಾನಗಳು ವ್ಯರ್ಥವಾಗುತ್ತಿದೆ. ಹಣ ಸಂಪಾದನೆಯೊಂದೆ ಬದುಕಿನ ಸಾಧನೆ, ಗುರಿಯೆಂದು ಜೀವಿಸುತ್ತಿರುವವರು ಭಾರತದ ಸ್ವಾತಂತ್ರ್ಯ ಉಳಿಸಿಕೊಳ್ಳುವಲ್ಲಿ ವಿಫಲರಾಗುವುದು ನಿಶ್ಚಿತ ಎಂದು ತಿಳಿಸಿದರು.

ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಗುಲಾಮಗಿರಿಯ ನೆನಪುಗಳನ್ನು ಬದಿಗಿಟ್ಟು ‘ಭಾರತ್ ದಿವಸ್’ ಎಂದು ಸ್ವಾತಂತ್ರ್ಯ ದಿನವನ್ನು ಆಚರಿಸೋಣ. ರಾಷ್ಟ್ರಗೀತೆಯಲ್ಲಿ ಬರುವ ಹಲವಾರು ಭಾಗಗಳು ಈಗಿನ ಭಾರತದ ಭೂಪ್ರದೇಶವಾಗಿಲ್ಲ. ಸ್ತಿಮಿತವಿಲ್ಲದ ಬುದ್ಧಿ, ಮನಸ್ಸು, ಸಮತೋಲನವಿಲ್ಲದ ದೇಹ ಹೊಂದಿರುವ ಯುವಕರ ಕೈಯಲ್ಲಿ ಭಾರತ ನಲುಗುತ್ತಿದೆ ಎಂದರು.
ಭಾರತೀಯ ಸೇನಾಪಡೆಯ ವಿಶ್ರಾಂತ ಯೋಧ ಈರಣ್ಣ ಎಂ. ಅವರನ್ನು ಗೌರವಿಸಲಾಯಿತು. ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಹಪ್ರಾಧ್ಯಾಪಕಿ ಡಾ. ಗೀತಾ ವಸಂತ ನಿರೂಪಿಸಿದರು. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಡಾ. ಎ. ಎಂ. ಮಂಜುನಾಥ ವಂದಿಸಿದರು.

Leave a Reply

Your email address will not be published. Required fields are marked *