ತುಮಕೂರು:ಒಕ್ಕಲಿಗ ಸಮುದಾಯಕ್ಕೆ ಘನತೆ, ಗೌರವವಿದ್ದು,ರಾಜಕೀಯ ಕಾರಣಕೋಸ್ಕರ ನಾಯಕರುಗಳು ಮಾತನಾಡುವಾಗ ಎಚ್ಚರಿಕೆ ವಹಿಸಿ, ಸಮಾಜದ ಮನಸ್ಸುಗಳಿಗೆ ನೋವಾಗದಂತೆ ಮಾತನಾಡುವುದು ಸೂಕ್ತ ಎಂದು ಪಟ್ಟನಾಯಕನಹಳ್ಳಿಯ ಶ್ರೀನಂಜಾವಧೂತ ಸ್ವಾಮೀಜಿ ಮಾರ್ಮಿಕವಾಗಿ ಒಕ್ಕಲಿಗ ರಾಜಕೀಯ ನಾಯಕರಿಗೆ ಬುದ್ದಿ ಹೇಳಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಾಜ್ಯ ಒಕ್ಕಲಿಗರ ಸಂಘ ಹಾಗೂ ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜನ್ಮ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು,ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ಕೊಡುಗೆಯೂ ಈ ಸಮಾಜಕ್ಕೆ ಇದೆ.ಹಾಗಾಗಿಯೇ ನೀವುಗಳ ಆಡುವ ಮಾತನ್ನು ಸಮಾಜ ಕೇಳುತ್ತಿದೆ. ಸಮಾಜಕ್ಕೆ ಅಗೌರವ ತರುವಂತಹ,ಮುಜುಗರ ಉಂಟು ಮಾಡುವಂತಹ ಮಾತುಗಳನ್ನು ಆಡಬೇಡಿ,ಸಮಾಜದ ಹೊರತಾಗಿ ನ್ಯಾವಾರು ಅಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಶ್ರೀನಂಜಾವಧೂತ ಸ್ವಾಮೀಜಿ ನೀಡಿದರು.
ಇಂದು ಕರ್ನಾಟಕ ಒಟ್ಟಾರೆ ಬಜೆಟ್‍ಗೆ ಶೇ65ರಷ್ಟು ತೆರಿಗೆಯನ್ನು ನೀಡುತ್ತಿರುವುದು ಬೆಂಗಳೂರು. ಇಂತಹ ಬೆಂಗಳೂರು ನಗರವನ್ನು ಕಟ್ಟಿದ ಮಹಾರಾಜ ಕೆಂಪೇಗೌಡರು,ಅವರ ಆಡಳಿತ ವೈಖರಿ ಇಡೀ ದೇಶಕ್ಕೆ ಮಾದರಿ,ಎಲ್ಲ ವರ್ಗದ ಸಮದಾಯಗಳ ಅರ್ಥಿಕ,ಸಾಮಾಜಿಕ,ಶೈಕ್ಷಣಿಕ ಬೆಳವಣಿಗೆಯ ದೂರದೃಷ್ಟಿ ಹೊಂದಿದ್ದ ಕೆಂಪೇಗೌಡರು,ಕೆರೆ ಕಟ್ಟೆಗಳು, ದೇವಾಲಯಗಳು,ಪೇಟೆಗಳನ್ನು ಕಟ್ಟಿ,ಹಿಂದುಳಿದ,ಕಾಯಕ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದ್ದರು.ಕೆಂಪೇಗೌಡರು ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತದ ಸಾಂಸ್ಕøತಿಕ ರಾಯಭಾರಿ ಇದ್ದಂತೆ, ಮೊದಲ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಪೇಗೌಡ ಜಯಂತಿ ಆಚರಣೆಗೆ ತಂದರು. ಅಲ್ಲದೆ ಒಕ್ಕಲಿಗರ ಸಂಘದ ಎಲ್ಲಾ ಬೇಡಿಕೆಗಳಿಗೂ ಮನ್ನಣೆ ನೀಡಿ,ಸಮಾಜದ ಏಳಿಗೆಗೆ ಬೇಕಾದ ಅಗತ್ಯ ನೆರವನ್ನು ಆಳಿದ ಎಲ್ಲಾ ಪಕ್ಷಗಳೂ ನೀಡಿವೆ.ತುಮಕೂರು ಒಕ್ಕಲಿಗರ ಸಂಘದ ಬೇಡಿಕೆಯಂತೆ ತುಮಕೂರು ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಶ್ರೀಕೆಂಪೇಗೌಡರ ಹೆಸರನ್ನು ಇಡಲು ಜಿಲ್ಲಾಡಳಿತ ಮುಂದಾಗಬೇಕು. ಈ ಇಟ್ಟಿನಲ್ಲಿ ಸರಕಾರದೊಂದಿಗೆ ಸಹ ಮಾತುಕತೆ ನಡೆಸಲಾಗುವುದು ಎಂದು ಶ್ರೀನಂಜಾವಧೂತ ಸ್ವಾಮೀಜಿ ನುಡಿದರು.
ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಎನ್.ಬಾಲಕೃಷ್ಣ ಮಾತನಾಡಿ,ರಾಜ್ಯದಲ್ಲಿ ಸುಮಾರು 1.30 ಕೋಟಿ ಒಕ್ಕಲಿಗರಿದ್ದಾರೆ.ಆದರೆ ಕಾಂತರಾಜು ಅಯೋಗದ ವರದಿಯಲ್ಲಿ ಉಪಪಂಗಡಗಳ ಹೆಸರಿನಲ್ಲಿ ಒಕ್ಕಲಿಗ ಜನಾಂಗದ ಸಂಖ್ಯೆಯನ್ನು ಅತಿ ಕಡಿಮೆ ತೋರಿಸಲಾಗಿದೆ.ಆ ವರದಿಯನ್ನು ಕೈಬಿಟ್ಟು ಹೊಸದಾಗಿ ನಿಜವಾದ ಜಾತಿ ಗಣಿತಿಯನ್ನು ಮಾಡಬೇಕು ಎಂಬುದು ಸರಕಾರಕ್ಕೆ ನಮ್ಮ ಒತ್ತಾಯವಾಗಿದೆ ಎಂದ ಅವರು, ತುಮಕೂರು ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆಡಳಿತ ಅಧಿಕಾರಿ ನೇಮಕವಾಗಿರುವುದು ತಲೆ ತಗ್ಗಿಸುವಂತಹ ವಿಚಾರವಾಗಿದೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಆರ್.ಹನುಮಂತರಾಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚಗಿರಿ ಶಾಖಾ ಮಠದ ಶ್ರೀಮಂಗಳನಾಥಸ್ವಾಮೀಜಿ, ಕುಣಿಗಲ್‍ನ ಅರೆ ಶಂಕರಮಠದ ಶ್ರೀಸಿದ್ದರಾಮಚೈತನ್ಯ ಸ್ವಾಮೀಜಿಗಳು ವಹಿಸಿದ್ದರು.ವೇದಿಕೆಯಲ್ಲಿ ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಆಶ್ವಥಕುಮಾರ್, ಮಾಜಿ ಶಾಸಕ ಹೆಚ್.ನಿಂಗಪ್ಪ,ಮುರುಳೀಧರ ಹಾಲಪ್ಪ ಮಾತನಾಡಿದರು.ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರಕಾಶ್, ಒಕ್ಕಲಿಗರ ಸಂಘದ ಕಾನೂನು ವಿಭಾಗದ ಅಧ್ಯಕ್ಷ ಡಿ.ಲೋಕೇಶ್ ನಾಗರಾಜಯ್ಯ,ಎಎಸ್ಪಿ ಮರಿಯಪ್ಪ, ಡಿಎಫ್‍ಓ ಅನುಪಮ, ಆರ್.ಎಫ್.ಓ ದೇವರಾಜು, ಡಾ.ಅಂಜನಪ್ಪ, ವೀರಕ್ಯಾತಯ್ಯ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ನಗರಸಭೆ ಮಾಜಿ ಅಧ್ಯಕ್ಷ ದೇವಿಕ ಸಿದ್ದಲಿಂಗೇಗೌಡ,ಮಾಜಿ ಉಪಮೇಯರ್ ಟಿ.ಆರ್.ನಾಗರಾಜು,ಪಾಲಿಕೆ ಮಾಜಿ ಸದಸ್ಯರಾದ ಜೆ.ಕುಮಾರ್, ಧರಣೇಂದ್ರಕುಮಾರ್, ಮನೋಹರಗೌಡ, ಶ್ರೀನಿವಾಸಮೂರ್ತಿ, ಎಂ.ಕೆ.ಮನು ಸೇರಿದಂತೆ ಹಲವರು ಭಾಗವಹಿಸಿದ್ದರು. ಮಕ್ಕಳಿಗೆ ಪ್ರತಿಭಾಪುರಸ್ಕಾರ ನಡೆಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ನಗರದ ಬಿ.ಜಿ.ಎಸ್.ವೃತ್ತದಿಂದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ವಿವಿಧ ಜನಪದ ಕಲಾ ಮೇಳಗಳ ಪ್ರದರ್ಶನದೊಂದಿಗೆ ಮೆರವಣಿಗೆಯಲ್ಲಿ ಕಲಾಕ್ಷೇತ್ರಕ್ಕೆ ತರಲಾಯಿತು.