ತುಮಕೂರು: ದೀಪದಂತಿದ್ದ ಅಪ್ಪ ಬದುಕಿನಲ್ಲಿ ಸಾರ್ಥಕತೆ ಕಂಡರು, ಆ ದೀಪದ ಬೆಳಕಿನಲ್ಲಿ ವ್ಯಕ್ತಿತ್ವ ಪೂರ್ಣವಾಗಿ ಬೆಳೆದು ಅವರ ಹೆಸರು ಉಳಿಸುತ್ತೇನೆ ಎಂದು ಸಾಹಿತಿ ಡಾ.ಬಿ.ಸಿ.ಶೈಲಾ ನಾಗರಾಜ್ ಅವರು ತಮ್ಮ ತಂದೆ ಬಿ.ಚನ್ನಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿರುವ ವಚನ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಬುಧವಾರ ನಗರದ ಡಾ.ಶೈಲಾ ನಾಗರಾಜ್ ಸಾಹಿತ್ಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ಅವರಿಗೆ ಬಿ.ಚನ್ನಪ್ಪ ಗೌರಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ತಂದೆಯ ಸ್ಮರಣೆ ಮಾಡಿದರು.
ತಮ್ಮ ತಂದೆ ಅನನ್ಯ ರಾಜಕೀಯ ಚಿಂತಕರು, ಒಳ್ಳೆಯ ಓದುಗರು, ಪ್ರಗತಿಪರ ಧೋರಣೆ ಇಟ್ಟುಕೊಂಡಿದ್ದರು. ಮಂತ್ರ ಹೇಳದೆ ನಿತ್ಯ ವಚನಗಳನ್ನು ಹೇಳಿ ಪೂಜೆ ಮಾಡುತ್ತಿದ್ದರು. ಇಂಗ್ಲೀಷ್ ಭಾಷೆ ಶಿಕ್ಷಕರಾಗಿ, ವೃತ್ತಿ ಜೀವನದಲ್ಲಿ ಒಳ್ಳೆಯ ಶಿಕ್ಷಕರೆಂದು ಹೆಸರು ಪಡೆದಿದ್ದರು. ದೀಪದಂತಹ ಅಪ್ಪನ ಬೆಳಕಿನಲ್ಲಿ ವ್ಯಕ್ತಿತ್ವ ರೂಪಿಸಿಕೊಂಡು ಅವರ ಹೆಸರು ಉಳಿಸುತ್ತೇನೆ ಎಂದು ಡಾ.ಶೈಲಾ ನಾಗರಾಜು ತಂದೆಯ ಸ್ಮರಣೆ ಮಾಡಿದರು.
ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ ಅವರು ಎಂ.ಜಿ.ಸಿದ್ಧರಾಮಯ್ಯನವರಿಗೆ ಬಿ.ಚನ್ನಪ್ಪ ಗೌರಮ್ಮ ವಚನ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಈಗಿನವರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೋಹದಲ್ಲಿ ಪುಸ್ತಕ ಓದುವ ಆಸಕ್ತಿ ಕುಸಿಯುತ್ತಿದೆ. ಜಾಲತಾಣದಲ್ಲಿ ಇನ್ನೊಂದು ಪ್ರಾಕಾರದ ಸಾಹಿತ್ಯ ಬೆಳೆಯುವುದೇನೋ ನೋಡಬೇಕು. ವಚನ ಸಾಹಿತ್ಯ ಜಗತ್ತಿಗೆ ದೊಡ್ಡ ಕೊಡುಗೆ ನೀಡಿದೆ. ಮಾನವೀಯ ಮೌಲ್ಯಗಳನ್ನು, ಸಾಮರಸ್ಯದ ಬದುಕನ್ನು ಸಾರಿ ಹೇಳುವ ವಚನ ಸಾಹಿತ್ಯದ ಆಶಯಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಟಿ.ಮುರಳಿಕೃಷ್ಣಪ್ಪ, ಶೈನಾ ಅಧ್ಯಯನ ಕೇಂದ್ರ ಅಧ್ಯಕ್ಷ ದೊಂಬರನಹಳ್ಳಿ ನಾಗರಾಜ್, ಕದಳಿ ವೇದಿಕೆ ಅಧ್ಯಕ್ಷೆ ಎಂ.ಎಸ್.ಸ್ವರ್ಣಗೌರಿ, ಸಮಾಜ ಸೇವಕಿ ಸರ್ವಮಂಗಳ ಶಿವರುದ್ರಪ್ಪ, ಬಿ.ಸಿ.ಸೋಮಪ್ರಸಾದ್, ಬಿ.ಸಿಪ್ರಭುಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.