ತುಮಕೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರಖ್ಯಾತ ಕಲಾವಿದರು ಸೇರಿದಂತೆ ಕಲಾವಿದರುಗಳಿಗೆ ಸಿಗಬೇಕಾದ ಗೌರವ ದೊರೆಯುತ್ತಿಲ್ಲ. ಇದು ದುರಾದೃಷ್ಟದ ಸಂಗತಿ. ಕೇವಲ ನಾಡಗೀತೆ, ಟ್ಯಾಬ್ಲೋ ಮೆರವಣಿಗೆಗೆ ಮಾತ್ರ ಬಳಕೆಯಾಗುತ್ತಿರುವುದು ದುರಂತದ ಸಂಗತಿ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಹಾಲಪ್ಪ ಪ್ರಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತುಮಕೂರು, ಹಾಲಪ್ಪ ಪ್ರತಿಷ್ಠಾನ ತುಮಕೂರು ಹಾಗೂ ಕರ್ನಾಟಕ ಸಾಂಸ್ಕøತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿರುವ ತುಮಕೂರು ಜಿಲ್ಲೆಯ ಕಲಾವಿದರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕಾರಣಿಗಳ ಬರುವಿಕೆಗಾಗಿಯೇ ಕಾದು ಕುಳಿತುಕೊಳ್ಳುವ ಅಧಿಕಾರಿಗಳು, ಅವರು ಬಂದಾಕ್ಷಣ ದೀಪ ಹಚ್ಚಿಸಿ, ಭಾಷಣ ಮಾಡಿಸಿ ಕಳುಹಿಸಿಕೊಡುತ್ತಾರೆ. ಕಲೆ ಪ್ರದರ್ಶನಕ್ಕೆ ಅವಕಾಶಗಳೇ ದೊರೆಯುವುದಿಲ್ಲ. ಇದು ಬದಲಾಗಬೇಕು. ನಿಮ್ಮಲ್ಲಿರುವ ಪ್ರತಿಭೆ ಸಹ ವೇದಿಕೆಯ ಮೇಲೆ ಪ್ರದರ್ಶನಗೊಂಡರೆ, ಅದು ಮತ್ತಷ್ಟು ವಿಸ್ತಾರವಾಗಿ, ದೊಡ್ಡ ಮಟ್ಟದ ವೇದಿಕೆಗಳಲ್ಲಿ ಕಾರ್ಯಕ್ರಮಗಳ ನೀಡಲು ಸಹಕಾರಿಯಾಗುತ್ತದೆ ಎಂದರು.

ತುಮಕೂರು ಜಿಲ್ಲೆ ಕಲಾವಿದರ ಕಣಜ, ಕಲಾವಿದರಿಗೆ ಕೊರತೆಯಿಲ್ಲ. ಹಿರಿಯ ಮತ್ತು ಕಿರಿಯ ಕಲಾವಿದರ ಒಂದೆಡೆ ಸೇರಿ, ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಿ ಸಹಕರಿಸುವಂತೆ ಮನವಿ ಮಾಡಿದರೆ ಖಂಡಿತ ಅವರಿಗೆ ನಿಮಗೆ ಬೇಕಾದ ಸಹಕಾರ ದೊರೆಯುವುದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ನಿಮ್ಮೊಂದಿಗೆ ನಾವು ಕೈಜೋಡಿಸುತ್ತೇವೆ. ಇದು ನಿಮ್ಮ ನಂತರದ ಯುವ ಪೀಳಿಗೆಗೆ ಸಹಕಾರಿಯಾಗಲಿದೆ. ಈ ಬಾರಿಯ ನಾಟಕ ಅಕಾಡೆಮಿ ಪ್ರಶಸ್ತಿಯಲ್ಲಿ ತುಮಕೂರು ಜಿಲ್ಲೆಗೆ ಹೆಚ್ಚಿನ ಅದ್ಯತೆ ದೊರೆತಿದೆ. ಇದು ಸಂತೋಷದ ವಿಷಯ. ನೀವು ಕೇವಲ ಜಿಲ್ಲಾ ಕೇಂದ್ರಕ್ಕೆ ಸಿಮೀತವಾಗದೆ ತಾಲೂಕುಗಳಿಗೆ ಹೋಗಬೇಕು. ಶಾಲಾ, ಕಾಲೇಜುಗಳಲ್ಲಿ ಮಕ್ಕಳನ್ನು ಒಳಗೊಂಡಂತೆ ಕಾರ್ಯಕ್ರಮ ನಡೆದರೆ, ನಿಮ್ಮಲ್ಲಿರುವ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು, ಅವರನ್ನು ನಿಮ್ಮ ವಾರಸುದಾರರನ್ನಾಗಿ ಮಾಡಲು ಸಾಧ್ಯ ಎಂದು ಮುರುಳೀಧರ ಹಾಲಪ್ಪ ನುಡಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ, ಉತ್ತರ ಕರ್ನಾಟಕ ವೃತ್ತಿ ರಂಗಭೂಮಿ, ಕರಾವಳಿಯಲ್ಲಿ ಯಕ್ಷಗಾನದ ರೀತಿ ತುಮಕೂರು ಜಿಲ್ಲೆ ಪೌರಾಣಿಕ ನಾಟಕಗಳಿಗೆ ಹೆಸರುವಾಸಿ. ಮುಂದಿನ ಆರು ತಿಂಗಳ ಕಾಲ ಗುಬ್ಬಿ ವೀರಣ್ಣ ಕಲಾಕ್ಷೇತ್ರ ಶನಿವಾರ, ಭಾನುವಾರ ಬುಕ್ ಆಗಿದೆ. ಪೌರಾಣಿಕ ರಂಗಭೂಮಿಯ ಹೊಸ ದುನಿಯಾ ಆರಂಭವಾಗಿರುವುದರ ಸಂಕೇತ. ರಾಜ್ಯದ ಆರು ರಂಗಾಯಣಗಳ ಜೊತೆಗೆ, ಬೆಂಗಳೂರು ವಿಭಾಗದಲ್ಲಿ ಮತ್ತೊಂದು ರಂಗಾಯಣ ತೆರೆಯುವ ಪ್ರಸ್ತಾಪವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಪೌರಾಣಿಕ ನಾಟಕಗಳು ಇಂದಿಗೂ ಗ್ರಾಮೀಣ ಭಾಗದ ಮನರಂಜನೆಯ ಪ್ರಮುಖ ಪ್ರಕಾರಗಳಾಗಿವೆ. ನಾಟಕಗಳ ಪ್ರಕಾರಗಳು ಬದಲಾದರೂ ಪೌರಾಣಿಕ ನಾಟಕಗಳು ನೀಡಿದ ರಸಾನುಭವ ಬೇರೊಂದಿಲ್ಲ. ಮಹಿಳಾ ಕಲಾವಿದರ ಹೊಂದಾಣಿಕೆ ಇವೆಲ್ಲರೂ ನಾಟಕದ ಜೀವಾಳ. ಇಂತಹ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುವಂತಾಗಬೇಕು. ಆ ಮೂಲಕ ಮತ್ತೊಮ್ಮೆ ರಂಗಭೂಮಿ ಗತವೈಭವವನ್ನು ತೋರುವಂತಾಗಲಿ ಎಂದರು.
ನಾಟಕ ಅಕಾಡೆಮಿ ಸದಸ್ಯರಾದ ರವೀಂದ್ರ ಸಿರಿವರ, ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್ ಮಾತನಾಡಿದರು.
ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಶಿವಕುಮಾರ್, ಮಯಾ ಬ್ರಹ್ಮಾಚಾರ್ ಗುಬ್ಬಿ, ಸತ್ಯನಾರಾಯಣ, ಹೇಮಮಾಲಿನಿ ತುಮಕೂರು ಹೆಚ್.ಎಲ್. ರಂಗನಾಥಪ್ಪ, ಎಸ್.ಎಮ್.ಖಾನ್ ಶಿರಾ, ಡಾ.ಕೆ.ಪಿ.ಆಶ್ವಥನಾರಾಯಣ ಮಧುಗಿರಿ, ಮುರೂಡಯ್ಯ ಚಿಕ್ಕನಾಯಕನಹಳ್ಳಿ, ತುಮಕೂರು, ನಾಟಕ ಅಕಾಡೆಮಿ ಸದಸ್ಯರಾದ ಉಗಮಶ್ರೀನಿವಾಸ್, ರವೀಂದ್ರ ಸಿರಿವರ ಅವರುಗಳನ್ನು ಅಭಿನಂದಿಸಲಾಯಿತು. ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ, ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಸಿ.ಜಯಕುಮಾರ್, ಕಾರ್ಯದರ್ಶಿ ಬಸವರಾಜು ಐನಾಪುರ ಮತ್ತಿತರರು ವೇದಿಕೆಯಲ್ಲಿದ್ದರು.