ಜೆಡಿಎಸ್ ಪಕ್ಷವನ್ನು ಮುಂದಿನ ದಿನಗಳಲ್ಲಿ ಕೇಡರ್ ಬೇಸ್ಡ್ ಪಕ್ಷವನ್ನಾಗಿ ಕಟ್ಟಲಾಗುವುದು-ನಿಖಿಲ್ ಕುಮಾರಸ್ವಾಮಿ

ತುಮಕೂರು : ರಾಜ್ಯದಲ್ಲಿ ಲೀಡರ್ ಬೇಸ್ಡ್ ಪಾರ್ಟಿಯಾಗಿರುವ ಜೆಡಿಎಸ್ ಪಕ್ಷವನ್ನು ಮುಂದಿನ ದಿನಗಳಲ್ಲಿ ಕೇಡರ್ ಬೇಸ್ಡ್ ಪಕ್ಷವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ತುಮಕೂರಿನ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಮತ್ತು ಬೂತ್ ಕಮಿಟಿಗಳ ಸದಸ್ಯರ ನೇಮಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಕನಸನ್ನು, ಈಗ ಕೇಂದ್ರ ಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ನನಸು ಮಾಡಿದ್ದಾರೆ. ಲೀಡರ್ ಬೇಸ್ಡ್ ಪಾರ್ಟಿಯನ್ನು ಕೇಡರ್ ಬೇಸ್ ಪಾರ್ಟಿಯನ್ನಾಗಿ ಮಾಡಿ ಮುಂದಿನ ಚುನಾವಣೆಗಳಲ್ಲಿ ವಿವಿಧ ಕೇಡರ್‍ಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಪಾರ್ಟಿಯ ಒಳಗೆ ಗುರುತಿಸಿ, ಅವಕಾಶ ಕಲ್ಪಿಸುವ ಮಹತ್ವ ಹೆಜ್ಜೆ ಇದಾಗಿದೆ ಎಂದರು.

ಸಂಸದರಾಗಿ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರದ ಮಂತ್ರಿಯಾದ ನಂತರ ರಾಜ್ಯದ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉರುಪು, ಉತ್ಸಾಹ ಬಂದಿದೆ. ಇದೇ ಹುಮ್ಮಸ್ಸು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಪಾಲಿಕೆ ಚುನಾವಣೆಗಳಲ್ಲಿ ತೋರಿಸಿದರೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದ್ದು, ಪಕ್ಷ ಸಂಘಟನೆ ಪಕ್ಷದ ಅಂತರಿಕ ವಿಚಾರವಾಗಿದೆ. ಈಗಾಗಲೇ ಮುಂಬರುವ ಚುನಾವಣೆಗಳಿಗೆ ಬಿಜೆಪಿ ಸಹ ಸಂಘಟನೆಯಲ್ಲಿ ತೊಡಗಲಿದೆ. ಹಾಗೆಯೇ ಜೆಡಿಎಸ್ ಕೂಡ ಸಂಘಟನೆಗೆ ಮುನ್ನುಡಿ ಬರೆದಿದ್ದು, ಮುಂದಿನ 2 ತಿಂಗಳಲ್ಲಿ ಎಲ್ಲಾ ಬೂತ್ ಸಮಿತಿಗಳ ಸದಸ್ಯರ ನೇಮಕ ಮಾಡಿ, ಹೊಸ ಭಾಷ್ಯ ಬರೆಯಲಿದೆ ಎಂದು ತಿಳಿಸಿದರು.

ಜೆಡಿಎಸ್ ವಿಧಾನಸಭೆ ವಿರೋಧಪಕ್ಷದ ನಾಯಕ ಸಿ.ಬಿ.ಸುರೇಶಬಾಬು ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದಲ್ಲಿ ಆದ್ವಾನಗಳನ್ನು ಸೃಷ್ಟಿ ಮಾಡಿದೆ. ಹಣಕಾಸನ್ನು ಸರಿದೂಗಿಸಲಾಗದೆ ದಲಿತರ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ನಿಯಮ ಮೀರಿ ಬಳಕೆ ಮಾಡಿಕೊಂಡಿದೆ. ಇಂತಹ ಸರ್ಕಾರ ತೊಲಗಿ, ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರ ಬರಬೇಕೆಂದರೆ ನೀವುಗಳ ಈಗಿನಿಂದಲೇ ತಯಾರಿ ನಡೆಸಬೇಕು. ಸ್ಥಳೀಯವಾಗಿ ಬಲಾಢ್ಯರಾದರೆ ಹೆಚ್ಚು ಶಾಸಕ ಸ್ಥಾನಗಳನ್ನು ಗೆಲ್ಲಲು ಸಾಧ್ಯವೆಂದು ತಿಳಿಸಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ವಿಧಾನಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಎಂ.ಎಲ್.ಸಿ. ಮಂಜಣ್ಣ, ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ವೀರಭದ್ರಯ್ಯ, ಸುಧಾಕರಲಾಲ್, ತಿಮ್ಮರಾಯಪ್ಪ, ಮುಖಂಡರಾದ ಕೆ.ಟಿ.ಶಾಂತಕುಮಾರ್, ನಾಗರಾಜು, ಉಗ್ರೇಶ್, ಎಸ್.ಆರ್.ಗೌಡ, ಮಾಜಿ ಶಾಸಕ ಹೆಚ್.ನಿಂಗಪ್ಪ, ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ಗೌರವಾಧ್ಯಕ್ಷ ಟಿ.ಆರ್.ನಾಗರಾಜು, ಕುಂಭಯ್ಯ, ವಿಜಯಗೌಡ ಇದ್ದರು.

Leave a Reply

Your email address will not be published. Required fields are marked *