ತುಮಕೂರು : ರಾಜ್ಯದಲ್ಲಿ ಅಂಗನವಾಡಿ ಮಕ್ಕಳಿಗೆ ಪೂರೈಸುತ್ತಿರುವ ಆಹಾರವು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು ಇಂತಹ ಆಹಾರವನ್ನು ಸೇವಿಸುತ್ತಿರುವ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಸಿಬಿಐ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಆಗ್ರಹಿಸಿ ಬಿಜೆಪಿ ಶಾಸಕ ಬಿ ಸುರೇಶ್ ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಹಿಂದುಳಿದ ಮತ್ತು ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂದು (ಎಂಎಸ್‍ಪಿಸಿ) ಮಹಿಳೆಯರು ಮತ್ತು ಮಕ್ಕಳಿಗೆ ಪೋಷಕಾಂಶ ಪೂರೈಸುವ ಯೋಜನೆಯನ್ನು ರೂಪಿಸಲಾಗಿತ್ತು ಎಂದರು.
ಮೊದಲು ಈ ಯೋಜನೆ ಶಾಸಕರ ನೇತೃತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿತ್ತು. ಈಗಿನ ಸರ್ಕಾರ ಶಾಸಕರ ನೇತೃತ್ವದ ಸಮಿತಿಯ ಹೊಣೆಯನ್ನು ಕಿತ್ತು ಹಾಕಿ ಕ್ರಿಸ್ಟಿ ಎಂಬ ಸಂಸ್ಥೆಗೆ ಈ ಯೋಜನೆಯನ್ನು ವಹಿಸಿಕೊಟ್ಟಿದೆ. ಅವರೇ ಎಲ್ಲ ವಸ್ತುಗಳನ್ನು ತರುತ್ತಾರೆ. ಅದನ್ನು ಎಂಎಸ್‍ಪಿಸಿಗೆ ಕೊಡುತ್ತಾರೆ. ಆ ಸಂಸ್ಥೆ ಕೇವಲ ಪೊಟ್ಟಣ ಕಟ್ಟಿಕೊಡುವ ಮಟ್ಟಕ್ಕೆ ಇಳಿದಿದೆ. ಇದು ತಿಂಗಳಿಗೆ ಒಂದು ತಾಲ್ಲೂಕಿಗೆ 30 ಲಕ್ಷ ರೂಪಾಯಿಗಳ ವಹಿವಾಟು ಇದೆ ಎಂದ ಅವರು ಈಗ ಏನು ಸಮಸ್ಯೆಯಾಗಿದೆಯೋ ತಿಳಿಯದು. ಅಂಗನವಾಡಿ ಮಕ್ಕಳಿಗೆ ಆಹಾರ ಪೂರೈಕೆ ಆಗುತ್ತಿಲ್ಲ. ಸೆಪ್ಟೆಂಬರ್ 12 ನೇ ತಾರೀಕು ಆದರೂ ಇದುವರೆಗೆ ಆಹಾರ ಪೂರೈಕೆ ಆಗಿಲ್ಲ ಎಂದರು.
ಈ ಸರ್ಕಾರದಲ್ಲಿ ಯಾವುದಕ್ಕೂ ದುಡ್ಡಿಲ್ಲ ಬರೀ ಗ್ಯಾರಂಟಿ ಯೋಜನೆಗಳು ಎಂದು ಬಾಯಿ ಬಡಿದುಕೊಂಡವರು ಈಗ ಮಕ್ಕಳಿಗೂ ಆಹಾರ ಕೊಡದ ಸ್ಥಿತಿಗೆ ತಂದು ಈ ರಾಜ್ಯವನ್ನು ನಿಲ್ಲಿಸಿದ್ದಾರೆ.
ಟೆಂಡರ್ ಪಡೆದ ಸಂಸ್ಥೆ ಕಳೆದ ಆರು ತಿಂಗಳಿಂದ ಪೊಟ್ಟಣ ಕಟ್ಟಿದ ಎಂಎಸ್‍ಪಿಸಿ ಸಿಬ್ಬಂದಿಗೆ ಸಂಬಳ ಪಾವತಿ ಮಾಡಿಲ್ಲ. ಹೀಗಾಗಿ ಅವರೂ ಆ ಕೆಲಸ ಮಾಡುವುದನ್ನು ನಿಲ್ಲಿಸಿದ್ದಾರೆ. ಜತೆಗೆ ಈತ ಹೆಸರುಕಾಳು, ತೊಗರಿ ಬೇಳೆ ಮುಂತಾದ ಪೌಷ್ಟಿಕ ಧಾನ್ಯಗಳನ್ನು, ಮಸಾಲೆ ಉಪ್ಪಿಟ್ಟಿನ ಮಿಶ್ರಣವನ್ನು ಪೂರೈಕೆ ಮಾಡಿಲ್ಲ. ಅವನು ಪೂರೈಸುವ ಆಹಾರದಲ್ಲಿ ಗುಣಮಟ್ಟವೂ ಇಲ್ಲ, ಪೋಷಕಾಂಶಗಳೂ ಇಲ್ಲ ಎಂದು ಅಧಿಕಾರಿಗಳು ದೂರುತ್ತಿದ್ದಾರೆ. ಇದು ಕೇವಲ. ತುಮಕೂರು ಜಿಲ್ಲೆಯ ಸಮಸ್ಯೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಇದೇ ಸ್ಥಿತಿಯಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಈ ಕಡೆ ಗಮನ ಹರಿಸಿ ವ್ಯವಸ್ಥೆಯಲ್ಲಿ ಆಗಿರುವ ಲೋಪವನ್ನು ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಇದು ಒಂದು ಬಹುಕೋಟಿ ಹಗರಣ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸರ್ಕಾರಕ್ಕೆ ಇಂಥ ಹಗರಣಗಳ ಕುರಿತು ವಿಚಾರಣೆ ಮಾಡಲು ಮನಸ್ಸು ಇಲ್ಲ. ಅವರು ಸೇಡಿನ ರಾಜಕಾರಣದಲ್ಲಿ ತೊಡಗಿದ್ದಾರೆ. ಅದಕ್ಕಾಗಿಯೇ ಇದನ್ನು ಲೋಕಾಯುಕ್ತಕ್ಕೆ ದೂರು ನೀಡಿ, ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣನವರ ಮೂಲಕ ಸಿ.ಬಿ.ಐ ತನಿಖೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಯಾವುದೇ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಹೀಗೆಯೇ ಅಗುತ್ತದೆ. ಅದನ್ನು ವಿಕೇಂದ್ರೀಕರಣ ಮಾಡಬೇಕು. ಮೊದಲಿನ ಹಾಗೆ ಶಾಸಕರ ನೇತೃತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಅದು ಸಮರ್ಪಕವಾಗಿ ಜಾರಿಯಾಗುತ್ತದೆ ಮಾತ್ರವಲ್ಲ. ಅದಕ್ಕೆ ಉತ್ತರದಾಯಿತ್ವವೂ ಬರುತ್ತದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶಂಕರ್, ತಾಲ್ಲೂಕು ಬಿಜೆಪಿ ಘಟಕದ ಉಪಾಧ್ಯಕ್ಷ ರಾಜಶೇಖರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಿದ್ದೇಗೌಡ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ ಉಪಸ್ಥಿತರಿದ್ದರು.