
ತುಮಕೂರು: ನಮ್ಮ ಗ್ರಾಮೀಣ ಪ್ರದೇಶದ ಹಳ್ಳಿಗಲಿಗೆ, ಅಲ್ಲಿರುವ ಶಾಲಾ- ಕಾಲೇಜು, ದೇವಸ್ಥಾನ ಸೇರಿದಂತೆ ಪ್ರತಿಯೊಂದು ಸ್ಥಳಗಳಿಗೆ ಅದರದೇಯಾದ ಇತಿಹಾಸವಿರುತ್ತದೆ. ಅದೇ ರೀತಿ ಎಲ್ಲಾ ಕ್ಷೇತ್ರದಲ್ಲಿನ ಪ್ರತಿಯೊಂದು ಜೀವಿಗೂ ಅದರದೇ ಆದಂತಹ ಇತಿಹಾಸ ಸೃಷ್ಟಿ ಆಗಿರುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹೇಶ್ಕುಮಾರ್ ಡಿ.ಎಚ್. ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಎಚ್.ಎಮ್.ಗಂಗಾಧರಯ್ಯ ಸಭಾಂಗಣದಲ್ಲಿ ಐಕ್ಯೂಎಸಿ ,ವಾಣಿಜ್ಯ ಮತ್ತು ಇತಿಹಾಸ ವಿಭಾಗದ ಸಂಯುಕ್ತಾಕ್ಷರದಲ್ಲಿ ಏರ್ಪಡಿಸಲಾಗಿದ್ದ “ಊರಿಗೊಂದು ಪುಸ್ತಕ” ಕಾರ್ಯಗಾರವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ಊರಿಗೊಂದು ಹೆಸರು ಬರಲು ವ್ಯಕ್ತಿಗತ ನಾಮ ಇತಿಹಾಸ ಕಾರಣ. ನಮ್ಮೂರುಗಳ ಇತಿಹಾಸವನ್ನು ನಾವೇ ಹುಡುಕಿ-ಸಂಶೋಧಿಸಿ ಬರೆದರೆ ‘ಊರಿಗೊಂದು ಪುಸ್ತಕ’ಕ್ಕೆ ಅರ್ಥವಿದೆ. ಇತಿಹಾಸವನ್ನು ತಮ್ಮದೇ ಆದ ರೀತಿಯಲ್ಲಿ ವಿದ್ಯಾರ್ಥಿಗಳು ಪುನರ್ ಅಧ್ಯಯನ ಮಾಡಿ, ಇನ್ನಷ್ಟು ಹೊಸ ವಿಷಯಗಳ ಬಗ್ಗೆ ಬೆಳಕು ಚೆಲ್ಲಬಹುದು ಎಂದು ತಿಳಿಸಿದರು.
ಇತಿಹಾಸ ಎಂದರೆ ರಾಜಪುರಾವೆಗಳು ಮತ್ತು ಪ್ರಮುಖ ವ್ಯಕ್ತಿಗಳನ್ನು ಓದುವುದಲ್ಲ. ಭೌಗೋಳಿಕ ಪ್ರದೇಶಗಳು ವ್ಯಕ್ತಿಗತ ನಾಮಗಳ ಸ್ಥಳಗಳನ್ನು ಒಳಗೊಂಡಿದರುವ ಕೆಲವು ಹಳ್ಳಿಗಳಿವೆ. ಪ್ರತಿಯೊಂದು ಹಳ್ಳಿಗಳ ಇತಿಹಾಸವನ್ನು ಹುಡುಕಬೇಕು ಹಳ್ಳಿಗಳ ಹುಟ್ಟು ಬೆಳವಣಿಗೆ ಮತ್ತು ವಿಶೇಷತೆಯನ್ನು ಸಂಶೋಧಿಸಬೇಕು ಎಂದು ಮಹೇಶ್ಕುಮಾರ್ ಡಿ.ಎಚ್. ಅವರು ಕರೆ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಹೇಮಲತಾ ಅವರು, ಊರಿನ ಇತಿಹಾಸವನ್ನು ಮೆಲುಕು ಹಾಕುತ್ತಾ ಊರಿನವರ ಜೊತೆ ಸಂಪರ್ಕ ಬೆಳೆಸಿ ಇತಿಹಾಸ ಸೃಷ್ಟಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗಬೆಕು. ಹಲವಾರು ದೃಷ್ಟಿಕೋನಗಳಿಂದ ಊರಿನ ಪುರಾವೆಗಳನ್ನು ಕಂಡುಕೊಳ್ಳಬೇಕು. ಇದು ನಮ್ಮ ಜೀವನಕ್ಕೆ ಹೆಚ್ಚು ಉಪಯುಕ್ತವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ಜ್ಞಾನ ಬೆಳೆಯುತ್ತದೆಂದು ಎಂದರು.
ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿಗಳು ಡಾ.ಮಹೇಶ್ಕುಮಾರ್ ಅವರನ್ನು ಸನ್ಮಾನಿಸಿದರು. ಪ್ರಾಧ್ಯಾಪಕರಾದ ಪ್ರೊ. ಜಿ. ಹನುಮಂತ ರಾಯಪ್ಪ, ಪ್ರೊ. ರಮೇಶ್ ಮಣ್ಣೆ, ಪ್ರೊ. ವಿನಯ್ ಕುಮಾರ್ ಎಂ, ಪ್ರೊ ಸೈಯದ್ ಬಾಬು, ಪ್ರೊ. ಶಮಂತ ಹೆಚ್.ಎಂ. ಸೇರಿದಂತೆ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.