ತುಮಕೂರು-ಪಾಪ ಆ ಎಮ್ಮೆ ಬಾಲ ಬೀಸಿಕೊಂಡು ಬೆಳಿಗ್ಗೆಯೇ ಮಳೆಗೆ ಬಂದು ಖುಷಿಯಿಂದ ಮಳೆಯಲ್ಲಿ ಯಾರೇ ಕೂಗಾಡಲಿ-ಊರೇ ಮುಳುಗೋಗಲಿ ನಾನು ಆನಂದದಿ ನೆನೆಯುವೆ, ನೆಗೆಯುವೆ ಅಂತ ಬೆಳಗಿನಿಂದ ಜಿಟಿ ಜಿಟಿ ಮಳೆಯಲ್ಲಿ ಕುಣಿಯುತ್ತಿದ್ದರೆ, ಅದೆಲ್ಲಿದ್ದನೋ ಅದರ ಮಾಲೀಕ ನಡೆ ಮನೆಗೋಗಣ ಅಂತ ಆನಂದದಲ್ಲಿ ತೇಲುತ್ತಿದ್ದ ಎಮ್ಮೆಯ ಹೊಡಕೊಂಡೆ ಮಳೆಗೆ ಛತ್ರಿ ಇಡಕೊಂಡು ಹೊಂಟೆ ಬಿಟ್ಟ.
ಹುಲ್ಲು ಮೇಯದೇ ಆಯಾದ ಈ ಸೋನೆ ಮಳೆಯಲ್ಲಿ ತಂಪಾದ ಹನಿಗಳ ಅಂತ ರೋಡ್ ರೋಮಿಯೋ ಆಗಿ ಅರವೈ ಅರವೈ ಮಾನವ ನಿನಗೇನು ದಾಡಿ ಮಳೆ ಬಂದರೆ ಎಂದು ಹಾಡಿ ನಲಿಯುತ್ತಾ ನೆನೆಯುತ್ತಿದ್ದ ಎಮ್ಮೆಗೆ ಹಗ್ಗ ಹಾಕಿ ಆತ ಆತುರವಾಗಿ ಎಳಕೊಂಡು ಹೊಂಟ.
ಎಮ್ಮೆ ಅಯ್ಯೋ ನಿನ್ನ ಆಟ ಇಷ್ಟೇ ಕಣಯ್ಯ, ಮನುಷ್ಯ ನಮ್ಮನ್ನು ಖುಷಿಯಿಂದ ಹಾಡಿ ಕುಣಿಯಲು ಬಿಡಲ್ಲ ಎಂದು ಮನೆ ಕಡೆ ಅದೂ ಜಕ್ಕಣ ಜಕ್ಕಣ ಅಂತ ಚಂಗನೆ ಹೊರಟಿತು.
ಎಮ್ಮೆಗೆ ನೀರು ತೋರಿಸಬಾರದಂತೆ ನಾಯಿಗೆ ರುಚಿ ತೋರಿಸಬಾರಂದತೆ ಎಮ್ಮೆ ನೀರೆಂದರೆ ಅದಕ್ಕೆ ಏನೋ ಒಂದು ತರಹ ಆನಂದ ಖುಷಿ ವ್ಹಾ ಅಂತ ನೀರೊಳಗೆ ಬಿದ್ದರೆ ಎದ್ದೇಳುವುದು ಕಷ್ಟ ಅಂತಹ ಎಮ್ಮೆಗೆ ಜಡಿ ಮಳೆ ಬಂದರೆ ಖುಷಿಯಾಗುವುದಿಲ್ಲವೇ.
ಆದರೆ ಅದನ್ನು ಸಾಕಿದ ಮಾಲೀಕ ಅದರ ಖುಷಿ ಕಿತ್ತುಕೊಂಡರು, ಕಲ್ಪತರು ನಾಡಿನ ಜನ-ಜೀವನ ಮಳೆಯಿಂದ ಅಸ್ತವ್ಯಸ್ಥಗೊಂಡು, ರೇಜಿಗಿಡಿಸಿತು.
ಕಲ್ಪತರುನಾಡಿನಲ್ಲಿ ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜನಸಾಮಾನ್ಯರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಪ್ರಯಾಸಪಡುವಂತಾಗಿದೆ.
ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಧ್ಯರಾತ್ರಿಯಿಂದ ಸೋನೆ ಮಳೆ ಹಾಗೂ ಒಮ್ಮೆಮ್ಮೆ ಜೋರು ಮಳೆಯಾಗುತ್ತಿರುವುದರಿಂದ ಜನ ಮನೆಯಿಂದ ಹೊರಬಾರದೆ ಮನೆಯಲ್ಲಿಯೇ ಉಳಿದಿದ್ದಾರೆ.
ಇಂದು ಮುಂಜಾನೆ ಟ್ಯೂಷನ್‍ಗೆ ತೆರಳುವ ವಿದ್ಯಾರ್ಥಿಗಳು, ಬೆಳಗಿನ ಪಾಳಿ ಕೆಲಸಕ್ಕೆ ತೆರಳುವ ಕಾರ್ಖಾನೆ ನೌಕರರು, ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯಿಂದ ಹೊರ ಬರಲಾಗದೆ ಛತ್ರಿ, ಜರ್ಕಿನ್‍ಗಳ ಮೊರೆ ಹೋಗಿದ್ದು ಕಂಡು ಬಂತು.

ಬೆಳಿಗ್ಗೆ 8 ಗಂಟೆಯ ನಂತರ ಮಳೆ ಬಿಡುವು ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ವರುಣ ಮತ್ತಷ್ಟು ಆರ್ಭಟಿಸುತ್ತಿರುವುದು ಎಲ್ಲ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ. ಕೆಲವರು ಕೆಲಸಗಳಿಗೆ ಹೋಗಲಾಗದೆ ರಜೆ ಹಾಕಿ ಮನೆಯಲ್ಲಿದ್ದರೆ, ಇನ್ನು ಕೆಲವರು ದ್ವಿಚಕ್ರ ವಾಹನಗಳನ್ನು ಬಿಟ್ಟು ಆಟೋ ರಿಕ್ಷಾಗಳನ್ನು ಆಶ್ರಯಿಸಿ ಕೆಲಸಗಳಿಗೆ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಡಾಂಬರು ಕಾಣದ ರಸ್ತೆಗಳು, ನಗರ ಪ್ರದೇಶಗಳಲ್ಲಿನ ಕೆಲ ಬಡಾವಣೆಗಳ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿವೆ. ಇದರಿಂದ ಜಿಟಿ ಜಿಟಿ ಮಳೆ ಕಿಚಿಪಿಚಿ ಕೆಸರು ಎನ್ನುವಂತಾಗಿದೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ರೈತರ ಕೃಷಿ ಕೆಲಸಗಳಿಗೂ ತೊಡಕಾಗಿದ್ದು, ಸದ್ಯ ಮಳೆ ಬಿಡುವು ಕೊಟ್ಟರೆ ಸಾಕು ಎಂದು ದೇವರಲ್ಲಿ ಮೊರೆಯಿಡುವಂತಾಗಿದೆ.

ನಗರ ಪ್ರದೇಶಲ್ಲಿ ವಿದ್ಯಾರ್ಥಿಗಳು, ನೌಕರರು ಹಾಗೂ ಇತರೆ ಕೂಲಿ ಕಾರ್ಮಿಕರು ದ್ವಿಚಕ್ರ ವಾಹನಗಳಲ್ಲಿ ಹೋಗಲು ಸಾಧ್ಯವಾಗದೆ ಆಟೋ ರಿಕ್ಷಾಗಳಿಗೆ ಮುಗಿ ಬೀಳುತ್ತಿದ್ದು, ಇದರಿಂದ ಆಟೋಗಳಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ.
ಮಧುಗಿರಿ-ಕೊರಟಗೆರೆ ತಾಲ್ಲೂಕಿನಲ್ಲಿರುವ ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದು, ಈಗಾಗಲೇ ನದಿ ಪಾತ್ರದಲ್ಲಿ ಎಚ್ಚರಿಕೆಯಿಂದ ಓಡಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ಹಳ್ಳಿಗಳಲ್ಲಿ ಹಸು, ಕರು, ಎಮ್ಮೆ, ಮೇಕೆ, ಕುರಿಗಳನ್ನು ಮೇಯಿಸಲು ರೈತರು ಪರದಾಡುವಂತಾಗಿದ್ದು, ಜಾನುವಾರುಗಳಿಗೆ ಮೇವು ಒದಗಿಸಲು ತುಂಬಾ ಕಷ್ಟಪಡುವಂತಾಗಿದೆ.
ಮೋಡ ಕವಿದ ವಾತಾವರಣ ಮುಂದುವರೆದಿದೆ. ಇನ್ನು 5 ದಿನಗಳ ಕಾಲ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಮಳೆ ಹೆಚ್ಚು ಬೀಳುವ ಸೂಚನೆ ಅರಿತು ಈಗಾಗಲೇ ಜಿಲ್ಲಾಡಳಿತ ಆರೆಂಜ್, ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.