ತುಮಕೂರು: ಭಾರತದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಿರಂಗಾ ಯಾತ್ರಾ ಸಮಿತಿ ಇದೇ 15ರಂದು ಸಂಜೆ ನಗರದಲ್ಲಿ ನಮ್ಮ ದೇಶದ ಸಂಸ್ಕøತಿ, ಪರಂಪರೆ ಬಿಂಬಿಸುವ ಸಂಭ್ರಮದ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಪ್ರೇಮ ಸಾರುವ ತಿರಂಗಾ ಯಾತ್ರೆ ಆಯೋಜಿಸಲಾಗಿದೆ ಎಂದು ತಿರಂಗಾ ಯಾತ್ರೆ ಸಮಿತಿ ಸಂಚಾಲಕ ಎಚ್.ಎಸ್.ರವಿಶಂಕರ್ ಹೆಬ್ಬಾಕ ತಿಳಿಸಿದ್ದಾರೆ.
ಭಾರತ ಮಾತೆಯ ಭಾವಚಿತ್ರದ ಮೆರವಣಿಗೆಯ ತಿರಂಗಾ ಯಾತ್ರೆಯಲ್ಲಿ ರಾಷ್ಟ್ರ ಧ್ವಜ ಪ್ರದರ್ಶನದೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ, ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನವಿರುತ್ತದೆ. ರಾಷ್ಟ್ರ ಪ್ರಶಸ್ತಿ ಪುರಸ್ಕøತರಾದ ಕೋಲಾರದ ಮುನಿವೆಂಕಟಪ್ಪ ಮತ್ತು ಅವರ ತಂಡದ ತಮಟೆ ವಾದನ ವಿಶೇಷ ಆಕರ್ಷಣೆಯಾಗಿದೆ. ಹರೆ, ತಮಟೆ, ಕೋಲಾಟ, ಮೈಸೂರು ನಗಾರಿ, ಕೇರಳದ ಚಂಡೆ, ಪೂಜಾಪದ, ಡೊಳ್ಳು ಕುಣಿತ, ನಾಸಿಕ್ ಬ್ಯಾಂಡ್, ವೀರಗಾಸೆ ಸೇರಿದಂತೆ ವಿವಿಧ ಹೆಸರಾಂತ ಕಲಾತಂಡಗಳ ಕಲಾ ಪ್ರದರ್ಶನ ತಿರಂಗಾ ಯತ್ರೆಯ ಸಂಭ್ರಮ ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು, ಮಾಜಿ ಯೋಧರು, ಶಾಲಾ ವಿದ್ಯಾರ್ಥಿಗಳು, ಸಾಹಿತಿಗಳು, ಕಲಾವಿದರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ತಿರಂಗಾ ಯಾತ್ರೆಯಲ್ಲಿ ಭಾಗವಹಿಸುವರು. ಸಂಜೆ 4 ಗಂಟೆಗೆ ಬಿಜಿಎಸ್ ವೃತ್ತದಿಂದ ಹೊರಟ ಯಾತ್ರೆ ಎಂ.ಜಿ.ರಸ್ತೆ, ರಾಮಪ್ಪ ವೃತ್ತದ ಮೂಲಕ ಸ್ವತಂತ್ರ್ಯ ಚೌಕ ತಲುಪಲಿದೆ. ಸಾರ್ವಜನಿಕರು ತಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಡಿಸಿ ತಿರಂಗಾ ಯಾತ್ರೆಯಲ್ಲಿ ಭಾಗವಹಿಸುವಂತೆ ಸಂಚಾಲಕ ರವಿಶಂಕರ್ ಹೆಬ್ಬಾಕ ಮನವಿ ಮಾಡಿದ್ದಾರೆ.