ತುಮಕೂರು : ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಾನವ ಸರಪಳಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ದಾಖಲೆ ನಿರ್ಮಿಸಿತು.
ಕೈ ಕೈ ಹಿಡಿದು ಸಚಿವರು, ಶಾಸಕರು, ಅಧಿಕಾರಿಗಳು ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಿದರು.
ಶಿರಾ ತಾಲ್ಲೂಕಿನ ತಾವರೆಕೆರೆ ಗಡಿಯಿಂದ ತುಮಕೂರು ತಾಲ್ಲೂಕಿನ ಹಿರೇಹಳ್ಳಿಯ ತನಕ ಬೆಳಿಗ್ಗೆ 10ಗಂಟೆಗೆ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಮಾನವ ಸರಪಳಿಯಲ್ಲಿ ಸಚಿವರು, ಶಾಸಕರುಗಳು, ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾನವ ಸರಪಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಶಿರಾ ತಾಲ್ಲೂಕು ಉಜ್ಜಿನಕುಂಟೆಯಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೆಹಲಿ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ., ಹೆಚ್ಚು ವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಜಿ.ಪಂ. ಸಿಇಒ ಪ್ರಭು.ಜಿ., ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ಕೆಂಚಮಾರಯ್ಯ, ಮುಂತಾದವರು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು..
ಜಿಲ್ಲೆಯಲ್ಲಿ 90 ಕಿ.ಮೀ. ಮಾನವ ಸರಪಳಿಯನ್ನು ರಚಿಸಲಾಗಿತ್ತು.
ಮಕ್ಕಳಿಗೆ ನೀರು ಹಂಚಿದ ಸಾಹಿತಿ : ಮಾನವ ಸರಪಳಿಯಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳಿಗೆ ಸಾಹಿತಿ ಡಾ.ಓ.ನಾಗರಾಜು ಅವರು ತುಮಕೂರಿನ ವಿಶ್ವವಿದ್ಯಾಲಯದ ಮುಂಭಾಗ ನೀರು ಹಂಚಿ, ಮಾನವ ಸರಪಳಿಯಲ್ಲಿ ಭಾಗವಹಿಸಿದರು, ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಕಾಮಯ್ಯ ಸಹ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು.
ಜಾತಿ, ಧರ್ಮ, ವರ್ಗಗಳ ಭೇದವಿಲ್ಲದೆ ಎಲ್ಲ ಜನರೂ ಒಟ್ಟಾಗಿ ಬೀದರ್‍ನಿಂದ ಚಾಮರಾಜನಗರದವರೆಗೆ 2,500 ಕಿ.ಮೀ ಉದ್ದದವರೆಗೂ ಕೈಕೈ ಹಿಡಿದು ಮಾನವ ಸರಪಳಿಯು ವಿಶ್ವ ದಾಖಲೆ ಬರೆದಿದೆ.
ಅಸ್ಪೃಶ್ಯತೆ ನಿವಾರಣೆ ಮಾಡಿ, ಭ್ರಾತೃತ್ವ ಬೆಳೆಸಲು ಎಲ್ಲರೂ ಒಂದಾಗಿ ಸಮಾನತೆಗಾಗಿ ವಿಶ್ವ ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಸಂವಿಧಾನದ ಪ್ರಸ್ತಾವನೆ ಓದಲಾಯಿತು.