ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ವಿರುದ್ಧ ಸೊಗಡು ಶಿವಣ್ಣ ನೇತೃತ್ವದಲ್ಲಿ ನಾಲೆಗೆ ಮಣ್ಣು ಹಾಕುವ ಮೂಲಕ ಭಾರಿ ಪ್ರತಿಭಟನೆ

ತುಮಕೂರು:ಜಿಲ್ಲೆಯ ಕುಡಿಯುವ ನೀರಿನ ಜೀವನಾಡಿಯಾಗಿರುವ ಹೇಮಾವತಿ ನಾಲೆಗೆ ಪ್ರತ್ಯೇಕ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಮೂಲಕ ಮಾಗಡಿಗೆ ನೀರು ಕೊಂಡೊಯ್ಯಲು ಕೈಗೊಂಡಿರುವ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಗುಬ್ಬಿ ತಾಲೂಕಿನ ಡಿ.ರಾಂಪುರದ ಹೇಮಾವತಿ ಶಾಖಾ ನಾಲೆ ಬಳಿ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ನೂರಾರು ರೈತರು,ವಿವಿಧ ಮಠಾಧೀಶರು,ವಿವಿಧ ರಾಜಕೀಯ ಪಕ್ಷಗಳ ನಾಯಕರು,ವಿವಿಧ ಸಂಘಟನೆಗಳ ಕಾರ್ಯಕರ್ತರು ಪಕ್ಷಾತೀತವಾಗಿ ಸಾಂಕೇತಿಕವಾಗಿ ನಾಲೆಗೆ ಮೂರು ಹಿಡಿ ಮಣ್ಣು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸಭೆಯಲ್ಲಿ ಪಾಲ್ಗೊಂಡಿರುವ ಮಠಾಧೀಶರುಗಳು, ಜನಪ್ರತಿನಿಧಿಗಳು, ರೈತರು.

ಮಾಜಿ ಸಚಿವರಾದ ಸೊಗಡು ಶಿವಣ್ಣ, ಶಾಸಕರಾದ ಎಂ.ಟಿ.ಕೃಷ್ಣಪ್ಪ,ಸುರೇಶ್‍ಗೌಡ,ಜ್ಯೋತಿಗಣೇಶ್,ಮಾಜಿ ಶಾಸಕರಾದ ಮಸಾಲೆ ಜಯರಾಮ್, ಹೆಚ್.ನಿಂಗಪ್ಪ,ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ ಸೇರಿದಂತೆ ಇನ್ನಿತರೆ ಮುಖಂಡರ ನೇತೃತ್ವದಲ್ಲಿ ಹೇಮಾವತಿ ಶಾಖಾ ನಾಲೆಯ 70ನೇ ಕಿ.ಮೀ.ಸ್ಥಳವಾದ ಡಿ. ರಾಂಪುರದ ಬಳಿ ತುರುವೇಕೆರೆ, ತಿಪಟೂರು, ಗುಬ್ಬಿ, ತುಮಕೂರು ಗ್ರಾಮಾಂತರ, ತುಮಕೂರು ನಗರದ ನೂರಾರು ಸಂಖ್ಯೆಯಲ್ಲಿ ರೈತರು, ಹೋರಾಟಗಾರರು ಜಮಾಯಿಸಿ ಪ್ರತಿಭಟಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ನಮ್ಮ ನೀರು, ನಮ್ಮ ಹಕ್ಕು ಹೋರಾಟದ ಕುರಿತು ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ,ಪೈಪ್‍ಲೈನ್ ಮೂಲಕ ಮಾಗಡಿ,ರಾಮನಗರಕ್ಕೆ (843.71 ಎಂಸಿಎಫ್‍ಟಿ) ನೀರು ತೆಗೆದುಕೊಂಡು ಹೋಗುವುದರಿಂದ ಜಿಲ್ಲೆಯ ಜನರಿಗೆ ತೀವ್ರ ಅನ್ಯಾಯವಾಗುತ್ತದೆ. ಇಲ್ಲಿನ ಜನರಿಗೆ ಕುಡಿಯುವ ನೀರು ಸಿಗದಂತಾಗುತ್ತದೆ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಜತಸ್ತೋಮ.

ಹೇಮಾವತಿಯಿಂದ ಜಿಲ್ಲೆಗೆ 24.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ.ಹಂಚಿಕೆ ಮಾಡಿರುವಷ್ಟು ನೀರು ಜಿಲ್ಲೆಗೆ ಯಾವ ವರ್ಷವೂ ಹರಿದು ಬಂದಿಲ್ಲ.ಜಿಲ್ಲೆಗೆ ಹಂಚಿಕೆ ಮಾಡಿರುವ ನೀರಿನಲ್ಲೇ ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ.ಜಿಲ್ಲೆಯಲ್ಲಿ 23 ಕುಡಿಯುವ ನೀರಿನ ಯೋಜನೆಗಳು ಜಾರಿಯಲ್ಲಿದ್ದು,ಮಾಗಡಿ ಭಾಗಕ್ಕೆ ನೀರು ಹರಿಸಿದರೆ ಜನರಿಗೆ ಕುಡಿಯುವ ನೀರು ಸಿಗದಾಗುತ್ತದೆ.ಈ ಯೋಜನೆ ಜಾರಿಯಾದರೆ ತುಮಕೂರು ಜಿಲ್ಲೆಗೆ ಮರಣ ಶಾಸನವಾಗಲಿದೆ ಎಂದರು.

ತುಮಕೂರು ಗ್ರಾಮಾಂತರ ಶಾಸಕ ಸುರೇಶ್‍ಗೌಡ ಮಾತನಾಡಿ, ಇಂದು ಸಾಂಕೇತಿಕವಾಗಿ ಹೋರಾಟ ಆರಂಭಿಸಿದ್ದೇವೆ. ಎಲ್ಲಾ ಪಕ್ಷದ ರಾಜಕೀಯ ಮುಖಂಡರು,ಸಂಘ ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ದ್ದಾಗ ಈ ಯೋಜನೆ ಪ್ರಾರಂಭವಾಯಿತು. ನಂತರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯೋಜನೆ ಸ್ಥಗಿತಗೊಳಿಸಿತ್ತು. ಮತ್ತೆ ಈಗ ಕಾಂಗ್ರೆಸ್ ಸರಕಾರ ಈ ಯೋಜನೆ ಜಾರಿಗೆ ತಂದಿದೆ.ಈ ಯೋಜನೆಗೆ ಗುದ್ದಲಿ ಪೂಜೆ ಮಾಡದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜಿ.ಪಂ. ಕೆಡಿಪಿ ಸಭೆಯಲ್ಲಿ ನಾವೆಲ್ಲಾ ಇದನ್ನು ವಿರೋಧಿಸಿದ್ದೆವು. ಆದರೆ ಜಿಲ್ಲೆಯಲ್ಲಿರುವ ಇಬ್ಬರು ಸಚಿವರು ಡಿ.ಕೆ. ಶಿವಕುಮಾರ್ ರವರಿಗೆ ಹೆದರಿ ಸಚಿವ ಸಂಪುಟದಲ್ಲಿ ಈ ಯೋಜನೆ ವಿರೋಧಿಸಿಲ್ಲ. ಗೃಹ ಸಚಿವ ಪರಮೇಶ್ವರ್ ಅವರಿಗೆ ಜಿಲ್ಲೆಯ ಜನರ ಬಗ್ಗೆ ಕಳಕಳಿ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ. ಜಿಲ್ಲೆಯ ಜನರ ಹಿತ ಕಾಪಾಡದೆ ಅಧಿಕಾರದಲ್ಲಿದ್ದರೆ ಏನೂ ಪ್ರಯೋಜನವಿಲ್ಲ ಎಂದರು.

ಕುಣಿಗಲ್ ಶಾಸಕ ಡಾ. ರಂಗನಾಥ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರಿಗೆ ಶಾಶ್ವತವಾಗಿ ಅಧಿಕಾರ ಕೊಡಿಸುವ ಸಲುವಾಗಿ ಈ ಯೋಜನೆ ಜಾರಿ ಮಾಡಲಾಗಿದೆ.ಷಡ್ಯಂತರ ಮಾಡಿ ಮಾಗಡಿಗೆ ನೀರು ತೆಗೆದುಕೊಂಡು ಹೋಗುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಎಂದು ದೂರಿದ ಅವರು, ಏನೇ ಆಗಲಿ, ನಮ್ಮ ರಕ್ತ ಕೊಟ್ಟೇವು ಒಂದು ಹನಿ ನೀರನ್ನು ಮಾತ್ರ ಬಿಡುವುದಿಲ್ಲ ಎಂದರು.

ಕಾಮಗಾರಿ ನಡೆಯುತ್ತಿರುವ ನಾಲೆ ರಕ್ಷಣೆಗೆ ನಿಂತಿರುವ ಪೊಲೀಸರು.

ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ,ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.ತುಮಕೂರಿನಲ್ಲಿರುವ ಸಚಿವರುಗಳಾದ ಕೆ.ಎನ್.ರಾಜಣ್ಣ ಹಾಗೂ ಡಾ.ಜಿ.ಪರಮೇಶ್ವರ್ ಈ ಕೂಡಲೇ ರಾಜೀನಾಮೆ ನೀಡಬೇಕು.ಇಲ್ಲದಿದ್ದರೆ ಪರಮೇಶ್ವರ್ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು. ಜನ ತೀರ್ಮಾನಿಸಿದರೆ ಸರಕಾರ ಬರುತ್ತದೆ, ಹೋಗುತ್ತದೆ. ಆದ್ದರಿಂದ ಸರಕಾರ ಜನರಿಗೆ ಅನ್ಯಾಯ ಮಾಡಿದರೆ ಉಳಿವು ಸಾಧ್ಯವಿಲ್ಲ. ಈ ಯೋಜನೆಯ ಕಾಮಗಾರಿ ಕೈಗೊಳ್ಳಲು ಸರಕಾರದ ಆದೇಶ ಇಲ್ಲ. ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಆದರೂ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.ತುಮಕೂರು ಜಿಲ್ಲೆಯ ರೈತರು, ಜನರ ಹಿತ ಕಾಪಾಡುವುದು ನಮ್ಮ ಉದ್ದೇಶ. ಇದರಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ, ನಮಗೆ ಅದು ಅಗತ್ಯವೂ ಇಲ್ಲ ಎಂದರು.

ಶಾಸಕ ಜ್ಯೋತಿಗಣೇಶ್ ಮಾತನಾಡಿ, 2018 ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ನಿರ್ಣಯ ತೆಗೆದುಕೊಂಡಿದ್ದರು. ಅಂದು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹೋರಾಟ ಮಾಡಿದ್ದರು. ಬಳಿಕ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು.ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಮಾಡಿದರೆ ತುಮಕೂರು ಜಿಲ್ಲೆಗೆ ಮರಣ ಶಾಸನ ಕಟ್ಟಿಟ್ಟಬುತ್ತಿ.ಹಾಗಾಗಿ ಇಂದೇ ಈ ಯೋಜನೆಯನ್ನು ಸ್ಥಗಿತಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಮಸಾಲೆ ಜಯರಾಂ ಮಾತನಾಡಿ,ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನಿಗಧಿ ಮಾಡಿರುವ ನೀರೇ ಸಮರ್ಪಕವಾಗಿ ಹರಿಯುತ್ತಿಲ್ಲ.ಇಂತಹ ಸಂದರ್ಭದಲ್ಲಿ ನಮ್ಮ ಜಿಲ್ಲೆಗೆ ಮಂಜೂರಾದ ನೀರನ್ನು ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋಗುವುದು ಸರಿಯಲ್ಲ. ಇಂತಹ ದೌರ್ಜನ್ಯದ ಕೆಲಸಕ್ಕೆ ನಮ್ಮ ಜಿಲ್ಲೆಯ ಜನರು ಎಂದಿಗೂ ಬೆಂಬಲ ನೀಡುವುದಿಲ್ಲ.ಈಗಾಗಲೇ ಎಲ್ಲಾ ಕಡೆ ಕೆಲಸ ನಿಂತಿದೆ.ಚುನಾವಣೆ ನೀತಿ ಸಂಹಿತೆ ಮುಗಿಯುವವರೆಗೂ ಜನರು ನಾಲೆ ಕೆಲಸಕ್ಕೆ ಅವಕಾಶ ನೀಡಬಾರದು.

ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರಾದ ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರ ಸ್ವಾಮೀಜಿ, ಗೋಡೆಕೆರೆ ಮಠದ ಶ್ರೀಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ,ತಮ್ಮಡಿಹಳ್ಳಿ ಮಠದ ಸ್ವಾಮೀಜಿ,ಸರಪಳಿ ಮಠದ ಶ್ರೀಜ್ಞಾನಾನಂದಪುರಿ ಸ್ವಾಮೀಜಿ,ಶ್ರೀನೀಲಕಂಠಾ ಚಾರ್ಯ ಸ್ವಾಮೀಜಿ, ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀವಿದ್ಯಾಶಂಕರ ದೇಶೀಕೇಂದ್ರ ಸ್ವಾಮೀಜಿ, ವಿವಿಧ ಪಕ್ಷಗಳ ಮುಖಂಡರಾದ ಬಿ.ಎಸ್.ನಾಗರಾಜು,ದಿಲೀಪ್‍ಕುಮಾರ್,ಲೋಕೇಶ್ವರ್,ಡಾ.ಪರಮೇಶ್,ಕುಮಾರಸ್ವಾಮಿ, ಬ್ಯಾಟರಂಗೇ ಗೌಡ,ಗೂಳೂರು ನವೀನ್‍ಗೌಡ,ಟಿ.ಆರ್.ಸದಾಶಿವಯ್ಯ,ಸೇರಿದಂತೆ ನೂರಾರು ಮಂದಿ ರೈತರು,ವಿವಿಧ ಸಂಘಟನೆಗಳ ಕಾರ್ಯಕರ್ತರು, ಹೋರಾಟಗಾರರು ಭಾಗಿಯಾಗಿದ್ದರು.

ತುಮಕೂರಿನ ಟೌನ್‍ಹಾಲ್ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಣಕುಶವಯಾತ್ರೆಯನ್ನು ಆಂಬ್ಯುಲೆನ್ಸ್ ಮುಖಾಂತರ ಡಿ. ರಾಂಪುರಕ್ಕೆ ಕೊಂಡೊಯ್ದು ಹೇಮಾವತಿ ನಾಲೆಗೆ ಎಸೆದು ಮಣ್ಣು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರೀತಿಯ ಅಬ್ಬರದ ಪ್ರತಿಭಟನೆಗೆ ಅವಕಾಶವಾಗದಂತೆ ಹೇಮಾವತಿ ನಾಲೆ ಬಳಿ ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿಗಳಾದ ಮರಿಯಪ್ಪ, ಅಬ್ದುಲ್ ಖಾದರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *