ತುಮಕೂರು: ಓರ್ವ ವ್ಯಕ್ತಿಗೆ ನಿಜವಾದ ಸಮಸ್ಯೆಗಳ ಅರಿವಾಗುವುದೇ ಪದವಿ ನಂತರ.ನೀವು ಕಲಿತಿರುವ ವಿದ್ಯೆಯನ್ನು ಬಳಕೆ ಮಾಡಿಕೊಂಡು ಆ ಸಮಸ್ಯೆಯನ್ನು ಪರಿಹರಿಸಿ, ಮುನ್ನೆಡೆದರೆ ಆಗಾಧವ ಅವಕಾಶಗಳು ನಿಮ್ಮ ಮುಂದಿವೆ ಎಂದು ಹೆಚ್.ಎ.ಎಲ್. ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಸುನಿಲ್ ಡಿ.ಕೆ. ಅಭಿಪ್ರಾಯಪಟ್ಟರು.
ನಗರದ ಶ್ರೀಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 16ನೇ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಪ್ರತಿಭಾವಂತರಿಗೆ ಚಿನ್ನದ ಪದಕ,ನಗದು ಬಹುಮಾನ ವಿತರಿಸಿ,ಘಟಿಕೋತ್ಸವ ಭಾಷಣ ಮಾಡಿದ ಅವರು, ಗ್ರಾಜುಯೇಷನ್ ಡೇ ಎನ್ನುವುದು ವಿದ್ಯಾರ್ಥಿಗಳು ತಮ್ಮ ಇದುವರೆಗಿನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಡೆದ ದಿನ.ಇದು ವಿದ್ಯಾರ್ಥಿ ಮತ್ತು ಅವರ ಪೋಷಕರು ಇಬ್ಬರ ಪಾಲಿಗೂ ಶುಭ ದಿನ ಎಂದರು.
ಪದವಿಗೆ ಎಲ್ಲವೂ ಮುಗಿಯುವುದಿಲ್ಲ.ಸ್ನಾತಕೋತ್ತರ ಶಿಕ್ಷಣದ ಜೊತೆಗೆ,ಸಂಶೋಧನೆಯ ಕಡೆಗೂ ತಮ್ಮ ಗಮನಹರಿಸಬೇಕು. ಆ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ತಂತ್ರಜ್ಞರಾಗುವತ್ತ ಹೆಜ್ಜೆ ಇಡಬೇಕೆಂದು ಸಲಹೆ ನೀಡಿದರು.
ಒಂದು ಹೆಲಿಕ್ಯಾಪ್ಟರ್ ತಯಾರಾಗಲು ಹೇಗೆ ಹಲವರು ಪರಿಶ್ರಮ ಬೇಕೋ, ಅದೇ ರೀತಿ,ಹತ್ತಾರು ವಿಷಯಗಳಲ್ಲಿ ಪರಿಣಿತಿ ಹೊಂದಿದರೆ ಮಾತ್ರ ಇಂದಿನ ಪೈಪೋಟಿ ಯುಗದಲ್ಲಿ ಯಶಸ್ವಿಯಾಗಲು ಸಾಧ್ಯ. ಹಾಗಾಗಿ ಬಹುಶಿಸ್ತಿಯ ಅಧ್ಯಯನದತ್ತ ಎಲ್ಲರೂ ಮುಂದಾಗಬೇಕು.ನಾವು ನಾಲ್ಕು ಗೋಡೆಗಳ ಮದ್ಯೆ ಕಲಿತಿದ್ದಕ್ಕೂ,ಕೈಗಾರಿಕೆಗಳ ಬೇಡಿಕೆಗಳಿಗೂ ಸಾಕಷ್ಟು ವೆತ್ಯಾಸವಿದೆ.ಇವುಗಳನ್ನು ಸರಿದೂಗಿಸಿಕೊಂಡು ಹೋಗುವ ಚಾಕುಚಕತ್ಯೆ ಬೆಳೆಸಿಕೊಳ್ಳಬೇಕೆಂದು ಡಾ.ಸುನಿಲ್ .ಡಿ.ಕೆ.ನುಡಿದರು.

ಒಂದು ವಿಷಯದ ಸಮಗ್ರ ತಿಳುವಳಿಕೆ ಮತ್ತು ತಾವು ತಿಳಿದಿರುವ ವಿಷಯದ ಮೇಲಿನ ವಿಶ್ವಸಾರ್ಹತೆ ಹಾಗೂ ಅದನ್ನು ಅದನ್ನು ಅಳವಡಿಸಿಕೊಳ್ಳುವ ಮನೋಭಾವನೆ ಈ ಮೂರು ಅಂಶಗಳು ಬಹುಮುಖ್ಯವಾದವು.ಅಲ್ಲದೆ ಒಂದಕ್ಕೊಂದು ಪೂರಕವಾದವು.ಕ್ಷಣ ಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ನಾವು ಬದಲಾಗಬೇಕಾಗುತ್ತದೆ.ಕೃತಕ ಬುದ್ದಿಮತ್ತೆ (ಎಐ)ಇಂದು ಹೆಚ್ಚು ಬಳಕೆಯಾಗುತ್ತಿದೆ.ಆದರೆ ಸುಮಾರು ಶೇ37ರಷ್ಟು ತಂತ್ರಜ್ಞರು ಎಐ ಮನುಷ್ಯನ ಮೇಲೆ ಸವಾರಿ ಮಾಡುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇಂತಹ ವಿಚಾರಗಳ ಬಗ್ಗೆಯೂ ನಾವುಗಳು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಸ್ವಯಂ ಚಾಲಿತ(ಚಾಲಕ ರಹಿತ)ಉಪಕರಣಗಳ ಯುಗ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.ಅಪರೇಷನ್ ಸಿಂಧೂರದಲ್ಲಿ ಫೈಲೇಟ್ ರಹಿತ ಪೈಟರ್ ಜೆಟ್‍ಗಳೇ ಹೆಚ್ಚು ಕೆಲಸ ಮಾಡಿರುವ ಉದಾಹರಣೆ ನಮ್ಮ ಕಣ್ಣಮುಂದೆ ಇದೆ.ಚಾಲಕ ರಹಿತ ಕಾರುಗಳು, ಮೆಟ್ರೋ ರೈಲುಗಳ ಸಂಖ್ಯೆ ಸಹ ಹೆಚ್ಚುತ್ತಿದೆ. ಇವುಗಳ ಸಮಗ್ರ ನೋಟ ನಮ್ಮ ಅರಿವಿಗೆ ಇರಬೇಕು.ನಿಮಗೆ ಇಷ್ಟಪಟ್ಟ ಕ್ಷೇತ್ರದಲ್ಲಿ ಮುಂದುವರಿಯಿರಿ ಎಂಬ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ಮಾತನಾಡಿ,ಪದವಿ ಎಂಬುದು ವಿದ್ಯಾರ್ಥಿಗಳ ಜೀವನದ ಒಂದು ಮೈಲಿಗಲ್ಲು,ಹಲವಾರು ದಿನದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕದಿನ.ಇಂದು ಪದವಿ ಪಡೆಯುತ್ತಿರುವ ಮಕ್ಕಳಲ್ಲಿ ಶೇ40 ರಷ್ಟು ಹೆಣ್ಣು ಮಕ್ಕಳಿದ್ದಾರೆ.ಇದು ಖುಷಿಯ ವಿಚಾರ. ಸಿದ್ದಗಂಗಾ ಮಠದ ಗುರಿಯೂ ಅದೇ ಆಗಿದೆ.ಅಗತ್ಯ ಇರುವವರಿಗೆ ಶಿಕ್ಷಣ ದೊರೆಯುಬೇಕೆಂಬ ಮಹತ್ವಾಕಾಂಕ್ಷೆ ಪೂಜ್ಯ ಶ್ರೀಶಿವಕುಮಾರಸ್ವಾಮೀಜಿಗಳ ಆಶಯವಾಗಿತ್ತು.ಇಂಜಿನಿಯರಿಂಗ್ ಪದವಿಧರರ ಕೇವಲ ತಂತ್ರಜ್ಞರಾದರೆ ಸಾಲದು, ಮಾನವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮಾರ್ಗದರ್ಶಕರಾಗಬೇಕು.ಕ್ಲಾಸ್ ರೂಮ್ ಮತ್ತು ಮಾರುಕಟ್ಟೆ ನಡುವಿನ ಜ್ಞಾನದ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೀವೆಲ್ಲರೂ ಶ್ರಮಿಸಬೇಕೆಂದರು.
ಕಾರ್ಯಕ್ರಮದಲ್ಲಿ 764 ಬಿ.ಇ,29 ಬಿ.ಆರ್ಕ್,27 ಎಂ.ಟೆಕ್ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.26 ವಿದ್ಯಾರ್ಥಿಗಳಿಗೆ 64 ಚಿನ್ನದ ಪದಕಗಳನ್ನು ವಿತರಿಸಲಾಯಿತು.ನಾಲ್ಕು ವರ್ಷದ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಅದ್ವಿತೀಯ ಸಾಧನೆ ಮಾಡಿದ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಗಿರೀಶ್ ಎಂ.ಎಲ್.ಅವರಿಗೆ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಎಸ್.ಐ.ಟಿ. ನಿರ್ದೇಶಕರಾದ ಡಾ.ಶಿವಕುಮಾರಯ್ಯ,ಎಸ್.ಐ.ಟಿ. ಪ್ರಾಂಶುಪಾಲರಾದ ಡಾ.ದಿನೇಶ್, ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ,ಪರೀಕ್ಷಾಂಗ ನಿಯಂತ್ರಕರಾದ ಡಾ.ಪೂರ್ಣೀಮ,ಹೆಚ್.ಎ,ಎಲ್.ನ ಡಿಎಜಿಎಂ ಪ್ರಕ್ಷಿತ್ ಶರ್ಮ, ಎಜಿಎಂ ಅಮಿತ್ ಶರ್ಮ,ಎಸ್.ಐ.ಟಿ ಆಡಳಿತ ಮಂಡಳಿ ಸದಸ್ಯರುಗಳು,ಉಪನ್ಯಾಸಕರುಗಳು ಉಪಸ್ಥಿತರಿದ್ದರು.