ತುಮಕೂರು : ಆ ಹಕ್ಕಿಯು ಬಂದವರ ಕಣ್ಣನ್ನು ಕುಕ್ಕುತ್ತಿದ್ದರೆ, ಮತ್ತೊಂದು ಕಡೆ ರಾಜ-ರಾಣಿಯರ ಹಿಂದೆ ಜನವೋ ಜನ, ಆ ಮಿಲಿಟರಿ ಹಕ್ಕಿಯನ್ನು ಕೆಕ್ಕರಿಸಿಕೊಂಡು ಕಣ್ಣಗಲಿಸಿ ನೋಡುತ್ತಿದವರು, ಅಯ್ಯೋ ಒಮ್ಮೆ ಕುಳಿತುಕೊಂಡು ಒಂದು ರೌಂಡ್ ಹೋಗಿದ್ದರೆ ಹೇಗಿರುತಿತ್ತು ಎಂಬ ಭಾವನೆಗಳು ಪ್ರೇಕ್ಷಕರಲ್ಲಿ ಮೂಡುತ್ತಿದ್ದವು.
ಅಕ್ಟೋಬರ್ 12 ಬೆಳಿಗ್ಗೆ 8ಗಂಟಯಿಂದಲೇ ಜೂನಿಯರ್ ಕಾಲೇಜು ಮೈದಾನದತ್ತ ಜನ ಸಾಗರ ಮಕ್ಕಳೊಂದಿಗೆ ಇರುವೆ ಸಾಲಿನಂತೆ ಸಾಲು ಸಾಲಾಗಿ ಬರತೊಡಗಿದರು, ಇದೇನು ಹಿಂಗೆ ಹೋಗುತ್ತಿದ್ದಾರೆ, ಅಲ್ಲೇನು ವಿಶೇಷ ಅಂತ ದಾರಿಯಲ್ಲಿ ಹೋಗುತ್ತಿದ್ದವರೆಲ್ಲಾ ವಾಹನಗಳನ್ನು ಪಕ್ಕಕ್ಕೆ ಹಾಕಿ ಅವರೂ ಜೂನಿಯರ್ ಕಾಲೇಜು ಮೈದಾನದೊಳಗೆ ದಾಪುಗಾಲು ಹಾಕುತ್ತಿದ್ದರು.
ಬೆಂಗಳೂರಿನಿಂದ ಬಂದಿದ್ದ ಒಂದಾನೊಂದು ಕಾಲದಲ್ಲಿ ರಾಜ-ರಾಣಿ ಎಂದು ಕರೆಸಿಕೊಳ್ಳುತ್ತಿದ್ದ ಹಳೆಯ ವಿಂಟೇಝ್ ಕಾರುಗಳು ಮದುವಣಗಿತ್ತಿಯಂತೆ ಲಕ-ಲಕನೇ ನಗುತ್ತಾ ನಿಂತಿದ್ದವು.

ಅವುಗಳನ್ನು 1910ರಿಂದ ಹಿಡಿದು 90ರ ದಶಕದವರೆವಿಗೂ ಇದ್ದ ಕಾರುಗಳು ತುಮಕೂರು ದಸರಾ ಪ್ರಯುಕ್ತ ಬೆಂಗಳೂರಿನಿಂದ ತರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು, ಈ ಸುದ್ದಿ ಜಾಲತಾಣ, ಪತ್ರಿಕೆಗಳು ಮತ್ತು ಬಂದವರು ತಮ್ಮ ಸಂಬಂಧಿಗಳಿಗೆ, ಗೆಳೆಯರಿಗೆ ಸುದ್ದಿ ಮುಟ್ಟಿಸಿದ್ದೇ ತಡ ವಿಜಯದಶಮಿ ಹಬ್ಬ ಮಾಡುವುದನ್ನೂ ಬಿಟ್ಟು ಎದ್ದೆವೋ-ಬಿದ್ದೆವೋ ಎಂಬಂತೆ ಜೂನಿಯರ್ ಕಾಲೇಜ್ ಮೈದಾನಕ್ಕೆ ಉಸುರಿಗಟ್ಟಿಕೊಂಡು ಜನರು ಪಿಳ್ಳೆ-ಪಿಸಕಗಳನ್ನು ಹೆಗಲಲ್ಲಿ ಇರಿಕಿಕೊಂಡು ಬರುತ್ತಿವುದು ಕಂಡು ಬಂದಿತು.
ಕಾರುಗಳ ಪಕ್ಕದಲ್ಲೇ ಗುಬ್ಬಿಯ ಬಿದರೆಹಳ್ಳ ಕಾವಲ್ನಿಂದ ತರಿಸಲಾಗಿದ್ದ ಹೆಚ್ಎಎಲ್ನಿಂದ ತರಿಸಲಾಗಿದ್ದ ಮಿಲಿಟರಿ ಹೆಲಿಕಾಪ್ಟರ್ ಎಲ್ಲರ ಕಣ್ಣುಕುಕ್ಕಿ, ಕಣ್ಮನ ಸೆಳೆಯಿತು. ಹೆಲಿಕಾಪ್ಟರ್ ಮಿರ ಮಿರ ಮಿಂಚುವುದನ್ನು ಕಂಡ ಜನರು ಒಮ್ಮೆ ಇದರಲ್ಲಿ ಕೂತು ಒಂದು ರೌಂಡ್ ಹೋಗುವಂತಿದ್ದರೆ ಎಷ್ಟು ಚೆಂದ ಇತ್ತು ಅಂತ ಕೆಲವರು ಲೊಚಗುಟ್ಟಿದರೆ, ಮತ್ತೆ ಕೆಲವರು ಜನರು ನೋಡಿ ಆನಂದಗೊಳ್ಳಲು ಎರಡು ರೌಂಡ್ ಹಾರಾಟ ನಡೆಸಿದ್ದರೆ ತುಮಕೂರು ಜನ ಮತ್ತಷ್ಟು ಪುಳಕಿತರಾಗುತ್ತಿದ್ದರು ಎನ್ನುತ್ತಿದ್ದರು.

ಮಿಲಿಟರಿ ಹೆಲಿಕಾಪ್ಟರ್ ಇಟ್ಟಿದ್ದ ಸ್ಥಳದಲ್ಲಿ ಹೆಲಿಕಾಪ್ಟರ್ ತಯಾರಿಸುವ ಬಿಡಿ ಭಾಗಗಳು, ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಯುದ್ಧದಲ್ಲಿ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಡೆಮೋವನ್ನು ತೋರಿಸಲಾಗುತ್ತಿತ್ತು.
ದೊಡ್ಡವರು-ಯುವಕರು, ಯುವತಿಯರು ಮಕ್ಕಳು ಕಾರುಗಳ ಮುಂದೆ, ಹೆಲಿಕಾಪ್ಟರ್ ಮುಂದೆ ಖುಷಿಯಿಂದ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು. ಯುವಕ-ಯುವತಿಯರು ಜೊತೆ-ಜೊತೆಯಾಗಿ ಪೋಟೋ ತೆಗೆಸಿಕೊಂಡು ನಗುತ್ತಾ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದರು, ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಯಾವುದೇ ಹಮ್ಮು-ಬಿಮ್ಮುಗಳಿಲ್ಲದೆ, ಮಕ್ಕಳು-ಮಹಿಳೆಯರೊಂದಿಗೆ ಪೋಟೋಗೆ ನಗುತ್ತಲೇ ಪೋಸು ಕೊಡುತ್ತಿದ್ದರು.

ಇದಲ್ಲದೆ ಕರ್ತವ್ಯಕ್ಕೆ ಹಾಜರಿದ್ದ ಪೊಲೀಸರೂ ಸಹ ಕಾರು ಹೆಲಿಕಾಪ್ಟರ್ ಮುಂದೆ ಇರಲಿ ಎಂದು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು. ಅಲ್ಲಿದ್ದ ಮೇಲಾಧಿಕಾರಿ ಪೊಲೀಸರೊಬ್ಬರು ಜನ ಕಂಟ್ರೋಲ್ ಮಾಡಿ ಅಂದ್ರೆ ನೀವೇ ಸೆಲ್ಫಿ ತಗೊಳ್ತಾ ಇದ್ದೀರ ಅಂತ ಉರಿದುಕೊಳ್ಳುತ್ತಿದ್ದವರು, ತಮ್ಮ ಮೆಚ್ಚಿನ ರಾಜಕಾಣಿಯೊಬ್ಬರು ಬಂದ ಕೂಡಲೇ ಅವರೇ ಸೆಲ್ಫಿಗೆ ಪೋಸು ಕೊಟ್ಟಿದ್ದು ಪೊಲೀಸರಿಗೆ ನಗು ತರಿಸಿತ್ತು.

ರಾತ್ರಿ ಹತ್ತು ಗಂಟೆಯಾದರೂ ಮಿಲಿಟರಿ ಹಕ್ಕಿಯನ್ನು ಮತ್ತು ರೋಡ್ ರೋಮಿಯೋ ರಾಜ-ರಾಣಿಯರನ್ನು ಕಣ್ಣು ತುಂಬಿಕೊಳ್ಳುತ್ತಾ ಕಿವಿಗೆ ರಸಸಂಜೆಯ ಹಾಡುಗಳ ಇಂಪನ್ನು ಸವಿಯುತ್ತಾ ಅಲ್ಲಿದ್ದ ರಾಜ-ರಾಣಿ ಕಾರುಗಳಿಗೆ ಡಿಕ್ಕಿ ಹೊಡೆಯುವಂತೆಯೇ ತಲೆ ತೂಗಿದರೆ, ಮಿಲಿಟರಿ ಹಕ್ಕಿಯನ್ನು ಒಮ್ಮೆಯಾದರೂ ಮುಟ್ಟಬೇಕಲ್ಲ ಎಂಬ ಆಸೆ ಹಾಗೆ ಐಸ್ ಕ್ರೀಮಿನಂತೆ ಕರಗಿ ನೀರಾಗುತ್ತಿತ್ತು.