ಲಡಾಖ್ : ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಲಡಾಖ್‌ನಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು ಅದರ ಅಂಗವಾಗಿ ಶುಕ್ರವಾರ ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿಂನೆಂಟ್ ಗವರ್ನರ್ ಬ್ರಿಗೇಡಿಯರ್ ಡಾ.ಬಿ.ಡಿ ಶರ್ಮ ಅವರನ್ನು ಸಮಿತಿ ಸದಸ್ಯರು ರಾಜಭವನದಲ್ಲಿ (ರಾಜ್ ನಿವಾಸ್) ಭೇಟಿ ಮಾಡಿ ಅಲ್ಲಿನ ಅನೇಕ ಸಂಗತಿಗಳ ಜತೆಗೆ ಚರ್ಚಿಸಲಾಯಿತು ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಸಮಿತಿಯ ಎಲ್ಲ ಸದಸ್ಯರ ಜೊತೆಗೆ ಲಡಾಖ್‌ನಲ್ಲಿ ಅಧ್ಯಯನ ಪ್ರವಾಸಕ್ಕೆ ತೆರಳಿದ್ದಾರೆ. ಲಡಾಖ್‌ನ ರಾಜಭವನದಲ್ಲಿ ಸಮಿತಿಯ ಅಧ್ಯಕ್ಷರಾದ ಸಿ.ಸಿ. ಪಾಟೀಲ್ ಅವರು ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದರು. ಲೆಫ್ಟಿಂನೆಂಟ್ ಗವರ್ನರ್ ಡಾ.ಶರ್ಮ ಅವರು ಸೇನೆಯಲ್ಲಿ ಬ್ರಿಗೇಡಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಮೈಸೂರು ಸಂಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದುದನ್ನು ನೆನಪಿಸಿಕೊಂಡರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಮೈಸೂರು ಮಹಾಸಂಸ್ಥಾನದ ಒಡನಾಟದ ಬಗ್ಗೆ ತಮ್ಮ ನೆನಪುಗಳನ್ನು ಸಮಿತಿ ಸದಸ್ಯರ ಜತೆಗೆ ಹಂಚಿಕೊಂಡರು.
ಲೆಫ್ಟಿಂನೆಂಟ್ ಗವರ್ನರ್ ಸಲಹೆಗಾರರಾದ ಡಾ. ಪವನ್ ಕೊತ್ವಾಲ್ ಅವರು ಮಾತನಾಡಿ ಲಡಾಖ್ ಕೇಂದ್ರಾಡಳಿತ ಪ್ರದೇಶದ ಕಾರ್ಯ ಚಟುವಟಿಕೆ, ಆರ್ಥಿಕ ಪರಿಸ್ಥಿತಿ, ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ವಿವರಿಸಿದರು.
ಅಲ್ಲಿನ ಪೊಲೀಸ್ ಮಹಾ ನಿರ್ದೇಶಕರಾದ ಡಾ.ಎಸ್.ಡಿ. ಸಿಂಗ್ ಜಂವಾಲ್ ಅವರು ಲಡಾಖ್‌ನ ಕಾನೂನು ಸುವ್ಯವಸ್ಥೆ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಸದಸ್ಯರುಗಳಾದ ಲಕ್ಷ್ಮಣ ಸಂಗಪ್ಪ ಸವದಿ, ಜಿ.ಟಿ.ದೇವೇಗೌಡರ, ಗುಬ್ಬಿ ಶ್ರೀನಿವಾಸ್, ಹೆಚ್.ಸಿ.ಬಾಲಕೃಷ್ಣ, ಎಸ್.ಆರ್.ವಿಶ್ವನಾಥ್. ಬಿ.ಕೆ.ಹರಿಪ್ರಸಾದ್, ರಾಘವೇಂದ್ರ ಹಿಟ್ನಾಳ್, ಶಶಿಲ್ ನಮೋಶಿ, ಶರವಣ, ಪ್ರತಾಪ್ ಸಿಂಹ ನಾಯಕ್ ಅವರಲ್ಲದೇ ಸಮಿತಿಯ ಉಪ ಕಾರ್ಯದರ್ಶಿ ಶ್ರೀನಿಧಿ, ಅಧೀನ ಕಾರ್ಯದರ್ಶಿ ಬಾಲ ಸುಬ್ರಮಣ್ಯ, ಶಾಖಾಧಿಕಾರಿ ಶ್ರೀ ಗಂಗಾಧರ್ ಸಭೆಯಲ್ಲಿ ಹಾಜರಿದ್ದರು.