ಕಳೆಯಿತು ವರುಷದ ನೆರವಿ, ಒಳಗಿಳಿಯಲು ಒಂದು ದಿನ ಇರಲಿ

ಕಳೆಯಿತು ವರುಷದ ನೆರವಿ,

ಒಳಗಿಳಿಯಲು ಒಂದು ದಿನ ಇರಲಿ

ಎಂದು

ನರೆಗೂದಲುದುರಿದ ಸದ್ದೂ

ನಿಶ್ಶಬ್ದ ಕಲಕದಂತೆ

ಮರದೆದುರು ಮರವಾಗಿ ನಿಂತೆ.

ಕಳೆದ ಮಳೆಗಾಲ ಅದೋ ಅಲ್ಲಿದ್ದ ಹೆಮ್ಮರ ಬಿದ್ದಿದೆ.

ಖಾಲಿಯೊಳಗಣ ಬೆಳಕ ಹೀರಲು ಎಲೆ ಬೆರಳುಗಳತ್ತತ್ತಲೇ ಚಾಚಿವೆ.

ವ್ಯರ್ಥವಲ್ಲ ಯಾವ ಖಾಲಿಯೂ ಸಹ,

ತುಂಬಿದ ಬಳಿಕ ಶೂನ್ಯದ ತಹತಹ.

ಹೂತಿದೆಯೊಂದು ಅಂಟುವಾಳದ ಮರ

ಮುತ್ತಿವೆ ನುಸಿ ನಸರಿ ಚಿಟ್ಟೆ ಜೇನ್ನೊಣ.

ಹಗಲು ಹರಿದಾಗಿನಿಂದ ಕಂತುವ ತನಕ

ಒಂದೇಸಮ ಮುತ್ತುವ ಹಸಿದ ಗಡಣ.

ಎಲ್ಲರಿಗೂ ಮೊಗೆಮೊಗೆದು ಕೊಡುವಷ್ಟು ಮಧುವ

ಅದೆಲ್ಲಿ ಬಚ್ಚಿಟ್ಟಿರುವಳೋ ಅಂಟುವಾಳ ಅಕ್ಕ!?

ಅಡ್ಡತಿಡ್ಡ ಹಾರಿ ಜೇನ್ವೇಂಟೆಕಾರರ ಗುಳುಮುವ ಹುಳಗುಳಕ

ಹೊಂಚು ಹಾಕಿ ಕುಟ್ಟಿ ಕುಕ್ಕಿ ತಿನುವ ಕದುಗ.

ಅವರವರ ಬೆವರಿಗೆ ತಕ್ಕ ಪಾಲೆಂಬ ಹಸಿರು ನ್ಯಾಯ

ಕೆಳಗೆ, ಮಧುದಾಹಿಗಳು ಕೆಡವಿದ ಹೂ ಪಕಳೆ ಹಾಸಿಗೆ

ಬೆಳ್ಳಕ್ಕಿಯ ಕೊಕ್ಕಿಗೆ ಮೈಯನೊಪ್ಪಿಸಿ ಸಮಾಧಿ ತಲುಪಿದ ಎಮ್ಮೆ

ಮೆಲ್ಲ ಸರಿಯಿತು ಹಸಿರು ಹಾವು ಗೊತ್ತೇ ಆಗದ ಹಾಗೆ

ಕಿವಿಯೊಳಗೇ ಉಲಿದಂತೆ ಗುಂಯ್ಞ್‌ರವ ಕೇಳುತಿದೆ.

ರಾಗಿ ಕೊನರಿನಷ್ಟು ಪುಟ್ಟ ಹೂವೇಕೆ ಮಸುಕಾಗಿ ಕಂಡಿದೆ?

ಯಾವ ತೆರೆ ನನ್ನ ನಿನ್ನ ನಡುವೆ ಹೂವೇ?

‘ಮರುಳೇ, ಬೀಳುವುದು ಋತುವಿಗೊಂದು ಕಾಲ ಹಾಲ ಹನಿ ಕಣ್ಣೊಳಗೆ.

ಒಂದು ಸಾಲದೆಂದೇ ಎರಡು ಇದೆ. ಎರಡೂ ಸಾಲದೆಂದು ಐದಕೈದಿವೆ.

ತೆರೆದುಕೊ ಎಲ್ಲಎಲ್ಲವ ಹೊರಗಣಕೆ.’

ಶರಣು ಶರಣು ಲೋಕ ಗುರುವೃಂದಕೆ

ಹನಿದು ಬಸಿದು ನದಿಯಾಗಲಿ ಜೀವದೊರತೆ.

ಕಳೆಯಿತು ವರುಷದ ನೆರವಿ, ಒಳಗಿಳಿಯಲು ಒಂದು ದಿನ ಇರಲಿ

ಉಸಿರೆಳೆದರೂ ಸದ್ದು ಕೇಳುವಷ್ಟು ನಿಶ್ಶಬ್ದದ ನಡುವೆ

ನಿಂತಿರುವೆ ಮರದೆದುರು ಇರುವೆಯಾಗಿ.

                                                                  ಡಾ. ಎಚ್. ಎಸ್. ಅನುಪಮಾ

Leave a Reply

Your email address will not be published. Required fields are marked *