ಯಮರಾಜ ನಿನಗೆ ಹೃದಯವಿಲ್ಲವೇ? ಆ ತಾಯಿ-ಎಳೆಯ ಕಂದನ ಜೀವವೇ ಬೇಕಿತ್ತೇ

ತುಮಕೂರು : ಈ ದಿನ ಮತ್ತೊಂದು ದುಃಖದ ಸುದ್ದಿಯನ್ನು ಬರೆಯಬೇಕಾಗ ಬಹುದು ಎಂದುಕೊಂಡೇ ಇರಲಿಲ್ಲ, ಆ ತಾಯಿ ಮತ್ತು ಎಳೆಯ ಕಂದ ಅಪಘಾತದಲ್ಲಿ ಸಾವನ್ನಪ್ಪಿರುವುದನ್ನು ಕಂಡು ಹೃದಯ ಹೊಡೆದು ಹೋಯಿತು, ಯಮರಾಜನಿಗೆ ಹೃದಯವೇ ಇಲ್ಲವೇ?, ಆ ತಾಯಿ ಮಗುವೇ ಬೇಕಿತ್ತೇ.

ನಾವು ಚಿಕ್ಕವರಿದ್ದಾಗ ಯಾರಾದರೂ ಸಾವನ್ನಪ್ಪಿದರೆ ನಮ್ಮ ಅಪ್ಪ-ಅಮ್ಮನನ್ನು ಕೇಳಿದರೆ ಯಮರಾಜ, ಯಮಧರ್ಮರಾಯ ಕೋಣದ ಮೇಲೆ ಬಂದು ಯಾರ ಆಯಸ್ಸು ಮುಗಿದಿರುತ್ತದೋ ಅವರ ಕೊರಳಿಗೆ ಹಗ್ಗ ಹಾಕಿ ಪ್ರಾಣ ತೆಗೆದುಕೊಂಡು ಹೋಗುತ್ತಾನೆ ಎಂದು ಹೇಳುತ್ತಿದ್ದರು.

ಇದಕ್ಕೆ ಪೂರಕ ಎಂಬಂತೆ ನಮಗೆ ಇಟ್ಟಿದ್ದ ಪಠ್ಯ ಪುಸ್ತಕಗಳ ಕತೆಗಳಲ್ಲಿ ಕೋಣನ ಮೇಲೆ ಹಗ್ಗ ಹಿಡಿದು ದಪ್ಪಮೀಸೆ ಬಿಟ್ಟುಕೊಂಡಿರುವ ಚಿತ್ರವಿರುತಿತ್ತು. ನಮಗೆ ಆ ಚಿತ್ರ ತೋರಿಸಿ ನಮ್ಮ ಪ್ರಾಣ ತೆಗೆದುಕೊಂಡು ಹೋಗುವ ಯಮ ಇವನೇ ಎಂದು ಹೇಳುತ್ತಿದ್ದರು.

ಮತ್ತೆ ಕೆಲವರು ದೀರ್ಘ ನಿದ್ದೆ ಮಾಡಿ ಎದ್ದವರು ನನ್ನ ಯಮ ಕರೆದುಕೊಂಡು ಹೋಗಿದ್ದ, ಚಿತ್ರಗುಪ್ತ ಹೆಸರು ನೋಡಿ ಒಬ್ಬರೇ ಹೆಸರಿನವರು ಇಬ್ಬರಿದ್ದಾರೆ ಇವನಲ್ಲ ಎಂದು ಯಮನಿಗೆ ಹೇಳಿದ್ದರಿಂದ ನನ್ನ ಪ್ರಾಣ ಪಕ್ಷಿಯನ್ನು ಹಿಂದಕ್ಕೆ ಕಳುಹಿಸಿದ ಎಂದು ಕತೆ ಕಟ್ಟುತ್ತಿದ್ದರು.

ನಾನು ಪತ್ರಕರ್ತನಾದ ಮೇಲೆ ಅಪಘಾತವಾದರೆ ಯಮ ಸ್ವರೂಪಿಯಾಗಿ ಬಂದ ಬಸ್ಸು, ಯಮ ಸ್ವರೂಪಿಯಾಗಿ, ಜವರಾಯನ ರೂಪದಲ್ಲಿ ಬಂದ ಲಾರಿ, ಕಾರು, ಬೈಕು ಎಂದೆಲ್ಲಾ ಹೆಡ್ಡಿಂಗ್ ಕೊಟ್ಟು ಸುದ್ದಿ ಬರೆಯುತ್ತಿದ್ದೆವು.

ರಾತ್ರಿ ಕುಂಟಮ್ಮನ ತೋಟದ ಶಾಂತಲಕ್ಷ್ಮೀ(30), ಎಂಬುವವರು ತನ್ನ ಮಕ್ಕಳಾದ ಚಿನ್ಮಯಿ(5) ಮತ್ತು ಮಗನಾದ ತನ್ಮಯ್(11) ಅವರುಗಳು ತುಮಕೂರಿನ ಬಿ.ಹೆಚ್.ರಸ್ತೆಯ ಗುಬ್ಬಿ ರಸ್ತೆಯಲ್ಲಿರುವ ಬಂಡಿಮನೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಮದುವೆಗೆ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಮುದ್ದಾದ ಮಕ್ಕಳೊಂದಿಗೆ ಖುಷಿ-ಖುಷಿಯಾಗಿ ಮದುವೆ ಮನೆಯಲ್ಲಿ ಆರತಕ್ಷತೆ ಮುಗಿಸಿಕೊಂಡು, ಮಕ್ಕಳೊಂದಿಗೆ ತಮಗೆ ಬೇಕಾದ ಎಲ್ಲಾ ತರಹದ ಪದಾರ್ಥಗಳನ್ನು ಹಾಕಿಸಿಕೊಂಡು ಊಟವನ್ನು ಸಂತೋಷದಿಂದ ಮಾಡಿ, ಐಸ್ ಕ್ರೀಮ್ ತಿಂದು, ಹಣ್ಣುಗಳ ಸಲಾಡ್ ತಿಂದು ಬಹಳ ಖುಷಿ ಪಟ್ಟುಕೊಂಡು ತನ್ನ ಮುದ್ದಾದ ಮಕ್ಕಳೊಂದಿಗೆ ಮನೆಗೆ ಹೋಗಲು ಛತ್ರದಿಂದ ಹೊರ ಬಂದರು.

ಮದುವೆಯ ಮನೆಯ ಸಡಗರ ಅವರ ಮನಸ್ಸಿನ ಗುಂಗಿನಲ್ಲೇ ಗುರುವಾರ ರಾತ್ರಿ 10.30ರಲ್ಲಿ ಆಟೋವನ್ನು ಏರಿದರು. ಪಾಪ ಆ ತಾಯಿ ಮಕ್ಕಳಿಗೆ ಯಮರಾಯ ನಮ್ಮ ಹಿಂದೆ ಐಷರ್‍ನಲ್ಲಿ ಇದ್ದಾನೆ, ಇನ್ನ ಒಂದೆರಡು ನಿಮಿಷದಲ್ಲಿ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ ಎಂಬುದು ಕನಸ್ಸು-ಮನಸ್ಸಿನಲ್ಲೂ ಊಹಿಸಿಕೊಳ್ಳಲಿಲ್ಲ.
ಆ ತಾಯಿ ತನ್ನ ಮುದ್ದಾದ ಮಕ್ಕಳನ್ನು ಎಡ ಬಲದಲ್ಲಿ ಕೂರಿಸಿಕೊಂಡು ಐಸ್‍ಕ್ರೀಮ್ ಎಷ್ಟು ತಿಂದ್ರಿ, ಚೆನ್ನಾಗಿತ್ತಾ ಎಂದು ಮುದ್ದು ಮಾಡುತ್ತಿರುವಾಗಲೇ ಐಷರ್ ವಾಹನದಲ್ಲಿ ಯಮ ಹಗ್ಗ ಹಿಡಿದು ನಮ್ಮ ಪ್ರಾಣ ಪಕ್ಷಿ ತೆಗೆದುಕೊಂಡು ಹೋಗಲು ಬರುತ್ತಿದ್ದಾನೆ ಎಂಬುದು ಯಾರಿಗೆ ತಾನೇ ತಿಳಿಯುತ್ತದೆ.
ಸಡನ್ ಬ್ರೇಕ್ ಹಾಕಿದ್ದಕ್ಕೆ ಐಷರ್ ವಾಹನದ ಆಕ್ಸಲ್ ಕಟ್ಟಾಗಿ ಆಟೋಗೆ ಅಪ್ಪಳಿಸಿದ ರಭಸಕ್ಕೆ ಮುದ್ದಾದ ಚಿನ್ಮಯಿ ಮತ್ತು ತಾಯಿ ಶಾಂತಲಕ್ಷ್ಮೀಯ ಪ್ರಾಣಪಕ್ಷಿ ಸ್ಥಳದಲ್ಲೇ ಹಾರಿ ಹೋದರೆ ಮಗ ತನ್ಮಯ್(11) ತೀವ್ರವಾಗಿ ಗಾಯಗೊಂಡನು.

ಇದನ್ನು ಯಾವ ಮಾತುಗಳಲ್ಲಿ ಹೇಗೆ ಹೇಳ ಬೇಕು, ಮುದ್ದಾದ ತಾಯಿ ಮಗು ಒಂದೇ ಕ್ಷಣದಲ್ಲಿ ಪ್ರಾಣ ಕಳೆದುಕೊಂಡಿರುವುದು ಎಂತಹವರ ಎದೆ ಒಡೆದು ಹೋಗುವಂತಹವುದು, ಆ ಎಳೆಯ ಮಗು ಚಿನ್ಮಯಿ ಇನ್ನೂ ಏನೂ ಅರಿಯದ ಕಂದಮ್ಮ ಐಷರ್ ಬಂದು ಅಪ್ಪಳಿಸಿದ ಪ್ರಾಕ್ಷನ್ ಆಫ್ ಸೆಕಂಡಿನಲ್ಲಿ ಪ್ರಾಣ ಕಳೆದುಕೊಂಡಿದ್ದು ನಿಜಕ್ಕೂ ಯಮಧರ್ಮರಾಯನಿಗೆ ಹೃದಯವಿರಲಿಲ್ಲವೇ, ಆ ಎಳೆಯ ಕಂದಮ್ಮ ಯಾವ ತಪ್ಪು ಮಾಡಿತ್ತು, ಆ ಮುದ್ದಾದ ಕೆನ್ನೆಗಳು, ಆ ಪುಟಾಣಿಯ ತೊದಲು ಮಾತುಗಳು, ಐಸ್‍ಕ್ರೀಮ್ ಇನ್ನೂ ಕರಗುವ ಮುನ್ನವೇ ಆ ಎಳೆಯ ಕಂದಮ್ಮ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿತು ಎಂಬುದನ್ನು ಕೇಳಿದ ಕೂಡಲೇ ಕಣ್ಣಾಲಿಗಳು ಮಂಜಾದವು, ಹಾಗಯೇ ಮೌನಕ್ಕೆ ಜಾರಿದೆ, ಯಮನಿಗೆ ನನ್ನ ಸ್ಮøತಿಪಟಲದಲ್ಲಿ ಯಾವ ಯಾವ ಪದಗಳಲ್ಲಿ ವಾಚಾಮಗೋಚರವಾಗಿ ಬೈದು, ಆ ತಾಯಿ-ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎರಡು ನಿಮಿಷ ಕಣ್ಣು ಮುಚ್ಚಿ ಪ್ರಾರ್ಥಿಸಿ, ಅವರ ಕುಟುಂಬ ವರ್ಗಕ್ಕೆ ದುಃಖಭರಿಸುವ ಶಕ್ತಿ ಕೊಡಲೆಂದು ಬುದ್ಧನಲ್ಲಿ ಬೇಡುವೆ.

ಆಟೋ ಚಾಲಕ ಗಿರೀಶ್ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮೃತ ಶಾಂತಲಕ್ಷ್ಮೀಯ ಮಗ ತನ್ಮಯ್ ಗಂಭೀರ ಗಾಯಗೊಂಡು ಬೆಂಗಳೂರು ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

-ವೆಂಕಟಾಚಲ.ಹೆಚ್.ವಿ.

One thought on “ಯಮರಾಜ ನಿನಗೆ ಹೃದಯವಿಲ್ಲವೇ? ಆ ತಾಯಿ-ಎಳೆಯ ಕಂದನ ಜೀವವೇ ಬೇಕಿತ್ತೇ

  1. ಮಾನವೀಯತೆ ಹೊತ್ತು ಬರುತ್ತಿರುವ ನಿಮ್ಮ ಸುದ್ದಿಗಳು ಕಣ್ಣಂಚಲ್ಲಿ‌ ನೀರು ತರಿಸುತ್ತವೆ. ಇಂತಹ ಸುದ್ದಿಗಳನ್ನ ಜನರು ಓದಬೇಕು, ಆಗಲಾದ್ರೂ ಜೀವದ ಬೆಲೆ ತಿಳಿಯುತ್ತಾರೆನೋ…

Leave a Reply

Your email address will not be published. Required fields are marked *