ತುಮಕೂರು : ಅವರು ಆ ಮಾಯನಗರಿಗೆ ಹೋಗಬೇಕೆಂದುಕೊಂಡು ಹೊರಟವರು, ಎಲ್ಲರೂ ತಮ್ಮ ಗೇಣು ಹೊಟ್ಟೆ ತುಂಬಿಸಿಕೊಳ್ಳುಲು ಕಾಣದ ದೂರದ ಊರಾದ ಬೆಂಗಳೂರಿಗೆ ಹೊರಟಿದ್ದರು.
ಅವರಿಗೆ ಮನೆ ಬಿಟ್ಟು ಹೊರಡುವಾಗ ಬೆಂಗಳೂರೆಂಬ ಮಾಯಾ ನಗರಿಗೆ ಹೋಗಿ ಒಂದಷ್ಟು ದುಡಿಮೆ ಮಾಡಿಕೊಂಡು ಗೇಣು ಹೊಟ್ಟೆ ತುಂಬಿಸಿಕೊಂಡು ಉಳಿದರೆ ಮೂರು ಕಾಸೋ-ಆರು ಕಾಸನ್ನೋ ಕೈಯಲ್ಲಿಟ್ಟುಕೊಂಡು ಊರಿಗೆ ಬರೋಣ ಎಂದು ಹೊರಟವರು, ಆದರೆ ಅವರು ತಾವು ಹೋಗ ಬೇಕಾದ ಸ್ಥಳವನ್ನು ತಲುಪುವ ಮುಂಚೆಯೇ ತಮ್ಮ ಪ್ರಾಣವನ್ನು ಕಳೆದುಕೊಂಡು ಬಿಟ್ಟರ
ಸಂಜೆ ಹೊರಟವರು ಮುಂಜಾನೆ ಹೆಣವಾಗಿ ಬಿಟ್ಟರು, ಅದೂ ಕ್ಷಣ ಮಾತ್ರದಲಿ,್ಲ ಯಾರು ಸತ್ತರು ಯಾರು ಉಳಿದರು ಎಂಬುದೆ ತಿಳಿಯುವುದೇ ಕಷ್ಟವಾಯಿತು ಅಂತಹ ಅಪಘಾತವಾಗಿ ಸ್ಥಳದಲ್ಲೇ 9ಜನ ತಮ್ಮ ಪ್ರಾಣವನ್ನು ಕಳೆದುಕೊಂಡು ಬಿಟ್ಟರು.
ಉಳಿದವರು ಗಾಯಗೊಂಡು ನಮ್ಮವರು ಯಾರು ಉಳಿದಿದ್ದಾರೆ, ಯಾರು ಸತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಆಗದಂತಹ ನೋವಿನಲ್ಲಿ ನರಳಿದರು.
ಈ ಕೂಲಿ ಕಾರ್ಮಿಕರು ರಾಯಚೂರು ಜಿಲ್ಲೆಯ ಶಿರವಾರ ತಾಲ್ಲೂಕಿನ ಕುರಕುಂದಾ ಗ್ರಾಮದವರಾಗಿದ್ದಾರೆ.
ಇವರೆಲ್ಲಾ ಬೆಂಗಳುರಿನಲ್ಲಿ ಕಟ್ಟಡ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದವರು, ಹಬ್ಬಕ್ಕೆಂದು ತಮ್ಮೂರಿಗೆ ಹೋಗಿದ್ದವರು ಮತ್ತೆ ಬೆಂಗಳೂರಿಗೆ ಬರಲು ಇವರೆಲ್ಲಾ ಆಂದ್ರಪ್ರದೇಶ ರಿಜಿಸ್ಡ್ರೇಷನ್ ಹೊಂದಿರುವ ಕ್ರೂಸರ್‍ನ್ನು ಬಾಡಿಗೆ ಮಾಡಿಕೊಂಡು ಬುಧವಾರ ಸಂಜೆ ತಮ್ಮೂರಿನಿಂದ ಬೆಂಗಳೂರಿಗೆ ಹೊರಟಿದ್ದಾರೆ.
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಸಮೀಪದ ಬಾಲೆನಹಳ್ಳಿ ಗೇಟ್ ಬಳಿ ಕ್ರೂಸರ್ ಲಾರಿಯನ್ನು ಓವರ್‍ಟೇಕ್ ಮಾಡಿ ಮುಂದೆ ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡದಾಗ ಹಿಂದಿನಿಂದ ಬರುತ್ತಿದ್ದ ಲಾರಿಯು ಗುದ್ದಿದ ರಭಸಕ್ಕೆ ಕ್ರೂಸರ್ ಪಲ್ಟಿಯಾಗಿ ಅಪ್ಪಚ್ಚಿಯಾಗಿದ್ದರಿಂದ ಸ್ಥಳದಲ್ಲೇ 9 ಜನರು ಸಾವಿಗೀಡಾದರೆ, ಮತ್ತೊಬ್ಬರು ಬೆಂಗಳುರಿನ ನಿಮಾನ್ಸ್‍ನಲ್ಲಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 10ಕ್ಕೇರಿದೆ.
ತುಮಕೂರು ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ 13 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.
ಶಿರವಾರ ತಾಲೂಕಿನ ಕುರಕುಂದಾ ಗ್ರಾಮದ ಸುಜಾತಾ(25) ಮತ್ತು ವಿನೋದ(3), ವಡವಟ್ಟಿ ಗ್ರಾಮದ ಕ್ರೂಸರ್ ಚಾಲಕ ಕೃಷ್ಣಪ್ಪ(25), ಲಕ್ಷ್ಮೀ ಅಲಿಯಾಸ್ ಮೀನಾಕ್ಷಿ(28), ಕಸನದೊಡ್ಡಿ ಗ್ರಾಮದ ಬಸಮ್ಮ(50), ಪ್ರಭು ಸೇರಿ 10 ಮಂದಿ ಮೃತರು. ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಈ ಪೈಕಿ ಇಬ್ಬರು ಮಕ್ಕಳು, ರಾಯಚೂರು ಜಿಲ್ಲೆಯಿಂದ ಬೆಂಗಳೂರಿಗೆ ಕೂಲಿ ಕೆಲಸ ಅರಸಿ ಕ್ರೂಸರ್ ವಾಹನದಲ್ಲಿ ಹೊರಟ್ಟಿದ್ದರು. ಕಳಂಬೆಳ್ಳ ಸಮೀಪ ಕ್ರೂಸರ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ.
ಮೃತರ ಪೈಕಿ ನಾಲ್ವರು ಒಂದೇ ಕುಟುಂಬದವರಾಗಿದ್ದಾರೆ. ಕುರುಕುಂದಾ ಗ್ರಾಮದ ಸಿದ್ದಣ್ಣ, ಇವರ ಅಕ್ಕ ಸುಜಾತಾ, ಮಾವ ಪ್ರಭು ಮತ್ತು ಸುಜಾತಾ ಪ್ರಭು ದಂಪತಿಯ ಪುತ್ರ ವಿನೋದ್ ಮೃತ ದುರ್ದೈವಿಗಳು. ಒಂದೇ ಮನೆಯ ನಾಲ್ವರನ್ನ ಕಳೆದುಕೊಂಡು ಕುಟುಂಬಸ್ಥರು ಕಂಗಾಲಾಗಿದ್ದಾರೆ. ಇಡೀ ಕುರುಕುಂದಾ ಗ್ರಾಮ ದುಃಖದ ಮಡುವಿನಲ್ಲಿ ಮುಳುಗಿದೆ.
ಜಿಲ್ಲಾಧಿಕಾರಿ-ಎಸ್ಪಿ ಭೇಟಿ :– ಅಪಘಾತದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡರು,ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದ್ದಲ್ಲದೆ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಪ್ರಧಾನಿ ಪರಿಹಾರ ಘೋಷಣೆ : ಕಳ್ಳಂಬೆಳ್ಳ ಸಮೀಪ ನಡೆದ ಅಪಘಾತಕ್ಕೆ ತೀವ್ರ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 2ಲಕ್ಷ ರೂ.ಗಳು ಮತ್ತು ಗಾಯಗೊಂಡವರಿಗೆ 50ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ.
ಕ್ರೂಸರ್ ವಾಹನದ ಮೇಲೆ ಸೋಲಿಲ್ಲದ ಸರದಾರ ಎಂಬ ಒಕ್ಕಣೆಯನ್ನು ಬರೆಸಿದ್ದಾರೆ. ಆದರೆ ಈ ಸೋಲಿಲ್ಲದ ಸರದಾರ ಅಪಘಾತವಾಗಿ 10 ಜನರ ಪ್ರಾಣ ತೆಗೆದಿದೆ, ಈಗ ಕ್ರೂಸರ್ ವಾಹನ ನಜ್ಜುಗುಜ್ಜಾಗಿ ರಕ್ತ-ಸಿಕ್ತವಾಗಿ ನಿಂತಿದೆ.