ತುಮಕೂರು : ಜಿಲ್ಲೆಯಲ್ಲಿರುವ ಅನರ್ಹ ಬಿಪಿಎಲ್(ಪಿಹೆಚ್‍ಹೆಚ್) ಪಡಿತರ ಚೀಟಿದಾರರು ತಾವಾಗಿಯೇ ಎಪಿಎಲ್(ಎನ್‍ಪಿಹೆಚ್‍ಹೆಚ್) ಪಡಿತರ ಚೀಟಿಗಳನ್ನಾಗಿ ಬದಲಾಯಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸಲಹೆ ನೀಡಿದರು.
ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ನಗರದ ದಿಬ್ಬೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಹಾರ ಅದಾಲತ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಅನರ್ಹರು ಬಿಪಿಎಲ್ ಕಾರ್ಡು ಹೊಂದುವುದರಿಂದ ಅರ್ಹರು ಪಡಿತರ ಧಾನ್ಯ ವಿತರಣೆಯಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಪಡಿತರ ಚೀಟಿ ಹೊಂದಿಲ್ಲದೇ ಇರುವ ಅರ್ಹ ಬಡವರಿಗೆ ಪಡಿತರ ಚೀಟಿ ಹೊಂದಲು ಸಹಾಯ ಮಾಡುವ ಮೂಲಕ ಅಸಮಾನತೆಯನ್ನು ಹೋಗಲಾಡಿಸಲು ಸಹಕರಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ಜಿಲ್ಲೆಯ ಪ್ರತಿ ತಾಲ್ಲೂಕಿನ ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್ ಹಮ್ಮಿಕೊಳ್ಳಲಾಗಿದೆ. ಪಡಿತರ ಚೀಟಿದಾರರು ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಪಿಹೆಚ್‍ಹೆಚ್ ಪಡಿತರ ಚೀಟಿ ಹೊಂದಿರುವ 75 ವರ್ಷದ ಮೇಲ್ಪಟ್ಟ ಏಕ ಸದಸ್ಯರಿರುವ ವಯೋವೃದ್ಧರಿಗೆ ಅವರ ಮನೆ ಬಾಗಿಲಿಗೆ ಪಡಿತರ ವಿತರಿಸಲು ಸರಕಾರ ಹೊಸದಾಗಿ ಅನ್ನ ಸುವಿಧ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಹೆಸರನ್ನು ನಿಗಧಿತ ಅವಧಿಯಲ್ಲಿ ನೋಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸೌಮ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರಲ್ಲದೇ ಇಂತಹ ಆದಾಲತ್ ಕಾರ್ಯಕ್ರಮಗಳಲ್ಲಿ ತಮ್ಮ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿಕೊಳ್ಳಲು ಅವಕಾಶವಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಕೊಳ್ಳುವಂತೆ ಮನವಿ ಮಾಡಿದರು.
ಪಡಿತರ ಚೀಟಿದಾರರಿಂದ/ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಕೆಲವು ಅರ್ಜಿದಾರರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಯಿತು ಹಾಗೂ ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ವಿಲೇವಾರಿ ಮಾಡಲು ಆಹಾರ ನಿರೀಕ್ಷಕರಿಗೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಬಡತನ ರೇಖೆಗಿಂತ ಕೆಳಗಿರುವ 65 ವರ್ಷದ ಮಂಗಳಮ್ಮ, 74 ವರ್ಷದ ಗಂಗಮ್ಮ ಹಾಗೂ 33 ವರ್ಷದ ಲಕ್ಷ್ಮೀದೇವಮ್ಮ ಅವರಿಗೆ ಹೊಸ ಪಡಿತರ ಚೀಟಿಯನ್ನು ವಿತರಿಸಲಾಯಿತು.
ನಂತರ ದಿಬ್ಬೂರಿನ ನಂಜಮ್ಮ ಅವರ ಮನೆಗೆ ಭೇಟಿ ನೀಡಿ ಅನ್ನ ಸುವಿಧ ಯೋಜನೆಯಡಿ ಪಡಿತರ ಧಾನ್ಯ ವಿತರಿಸಲಾಯಿತು ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರಧಾನ್ಯಗಳ ಗುಣಮಟ್ಟ ಪರಿಶೀಲಿಸಲಾಯಿತು.
ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು, ದಿಬ್ಬೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ನ್ಯಾಯಬೆಲೆ ಅಂಗಡಿ ಮಾಲೀಕರು/ಕಾರ್ಯದರ್ಶಿಗಳು ಹಾಜರಿದ್ದರು.