ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಿ – ಡಿಹೆಚ್‍ಓ

ತುಮಕೂರು : ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರ ಪದ್ಧತಿ, ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಬಿ. ಎಂ. ಚಂದ್ರಶೇಖರ್ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾವಿ ಗ್ರಾಮ ಪಂಚಾಯತಿ ಹಾಗೂ ಶ್ರೀದೇವಿ ಮೆಡಿಕಲ್ ಕಾಲೇಜು ಆಸ್ಪತ್ರೆ ಗ್ರಾಮೀಣ ತರಬೇತಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸಿಂಗೀಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ “ಉಚಿತ ಆರೋಗ್ಯ ತಪಾಸಣೆ ಮತ್ತು ಕ್ಷಯರೋಗ ಕುರಿತು ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಆರೋಗ್ಯಕ್ಕಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ|| ಮೋಹನ್ ದಾಸ್ ಮಾತನಾಡಿ ಕ್ಷಯರೋಗ ಸಂಪೂರ್ಣವಾಗಿ ಗುಣಪಡಿಸಬಹುದಾದ ಒಂದು ರೋಗವಾಗಿದೆ. ಭಾರತವನ್ನು ಕ್ಷಯ ಮುಕ್ತವನ್ನಾಗಿಸಲು ಕರ್ನಾಟಕ ಸರ್ಕಾರ ನೂರು ದಿನಗಳ ಕ್ಷಯ ಮುಕ್ತ ಅಭಿಯಾನವನ್ನು ಹಮ್ಮಿಕೊಂಡಿದ್ದು, 2 ವಾರಕ್ಕಿಂತ ಹೆಚ್ಚು ಕೆಮ್ಮು ಅಥವಾ ಜ್ವರ, ತೂಕದಲ್ಲಿ ಇಳಿಕೆ, ಕಫದಲ್ಲಿ ರಕ್ತ ಬೀಳುವುದು, ಹಸಿವು ಆಗದೇ ಇರುವುದು, ರಾತ್ರಿ ವೇಳೆ ಬೆವರುವುದು, ದೇಹದಲ್ಲಿ ಗಂಟುಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ಮಾಡಿಸಬೇಕು.  ಪ್ರತಿಯೊಬ್ಬರಿಗೂ ಕ್ಷಯ ರೋಗದ ಕುರಿತು ಜಾಗೃತಿಯನ್ನು ಮೂಡಿಸುವ ಮುಖಾಂತರ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಕ್ಷಯ ಮುಕ್ತ ಗ್ರಾಮವನ್ನಾಗಿಸಲು ಸಹಕರಿಸಬೇಕು ಎಂದು ತಿಳಿಸಿದರು.

ಶ್ರೀದೇವಿ ಮೆಡಿಕಲ್ ಕಾಲೇಜು ಆಸ್ಪತ್ರೆ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ|| ರಂಗಸ್ವಾಮಿ.ಹೆಚ್.ವಿ. ಮಾತನಾಡಿ ಕುಷ್ಟ ರೋಗ ಹಾಗೂ ಅಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಿದರು.

ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ರಾಧಾಕೃಷ್ಣ ಮಾತನಾಡಿ ಆರೋಗ್ಯ ಇಲಾಖೆಯಲ್ಲಿರುವ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಉಪನ್ಯಾಸಕ ಡಾ|| ಮಂಜುನಾಥ್ ಟಿ.ಎ. ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ಕಾರ್ಯಕ್ರಮದಲ್ಲಿ ಬೆಳ್ಳಾವಿಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕಮ್ಮ ದೊಡ್ಡಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ವಸಂತ ಹಾಗೂ ರಮೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಓಬಳಯ್ಯ, ಬೆಂಗಳೂರಿನ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಪಿಜಿಡಿಎಚ್‍ಪಿ ಕೋರ್ಸಿನ ಉಪನ್ಯಾಸಕರುಗಳಾದ ಡಾ|| ಎಂ. ಬೃಂದಾಲಕ್ಷ್ಮಿ, ತನ್ವೀರ್ ಅಹ್ಮದ್ ಖಾನ್, ಶ್ರೀದೇವಿ ಮೆಡಿಕಲ್ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿ, ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯರು ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ನಿರೂಪಣೆ ಪಿಜಿಡಿಎಚ್‍ಪಿ ಪ್ರಶಿಕ್ಷಣಾರ್ಥಿ ಗುರುರಾಜ್ ಎಚ್.ಎಮ್. ನೆರವೇರಿಸಿದರು. ಪಿಜಿಡಿಎಚ್‍ಪಿ ಪ್ರಶಿಕ್ಷಣಾರ್ಥಿಗಳಾದ ಜಯಶೀಲ ಹಿರೇಮಠ್, ಅಸ್ಲಾಂ ಅಬಾಲೆ, ರೇಖಾ ಡಿ.ಎನ್., ಸಹ ಪ್ರಶಿಕ್ಷಣಾರ್ಥಿಗಳು, ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ್ ಮತ್ತು ಲಕ್ಷ್ಮೀ ಸಮುದಾಯ ಆರೋಗ್ಯ ಅಧಿಕಾರಿಗಳು, ಶೋಭಾ ಆಶಾ ಕಾರ್ಯಕರ್ತೆ ಮತ್ತು ಇತರೆ ಆಶಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *