ಆಹಾ……. ಎಲ್ಲರೂ ನೋಡೋದೆ ಆ ಸುಂದರಿಯನ್ನ, ಚೆಲುವೆಯನ್ನ—–!

ಆ ಸುಂದರಿ ಬರದಿದ್ದರೆ ಆ ಕಾರ್ಯಕ್ರಮ, ಸಭೆ ಕಳೆಗಟ್ಟುವುದಿಲ್ಲ, ಅವಳು ಬಂದರೆ ಮಕ್ಕಳಿಂದ ಹಿಡಿದು ಮುದುಕರವರೆಗೆ ನೋಡುವುದೇ ಆ ಸುಂದರಿಯನ್ನು.

ಆ ಸುಂದರಿ ಅಷ್ಟು ಆಕರ್ಷಕ, ಆ ಸುಂದರಿ, ಡ್ರೆಸ್ ಮಾಡಿಕೊಂಡು ಬಂದಳೆಂದರೆ ಅವಳನ್ನು ನೋಡಲು ಎರಡು ಕಣ್ಣುಗಳು ಸಾಲದು, ಅವಳಿಲ್ಲದೆ ಆ ಕಾರ್ಯಕ್ರಮ ಮುಂದಕ್ಕೆ ಹೋಗುವುದೇ ಇಲ್ಲ, ಅವಳೆಷ್ಟು ಸುಂದರಿಯೋ, ಅಷ್ಟೇ ಸೌಮ್ಯ ಸ್ವಭಾವದವಳು. ಅವಳನ್ನು ನೋಡಿದರೆ ಎಲ್ಲರೂ ಮುಗಿ ಬೀಳುತ್ತಾರೆ, ಸೆಲ್ಪಿ ತೆಗೆಸಿಕೊಳ್ಳುತ್ತಾರೆ, ಶೇಕ್ ಹ್ಯಾಂಡ್ ಮಾಡುತ್ತಾರೆ, ಮುದ್ದು ಮಾಡುತ್ತಾರೆ.

ಅವಳನ್ನು ಕಂಡರೆ ಸಾಕು ನಿಂತು ಅವಳನ್ನೇ ನೋಡುತ್ತಾರೆ. ಅವಳು ಅಷ್ಟೇ ಬಂದವರನ್ನು ಪ್ರೀತಿಯಿಂದ ಮೈ ದಡವಿ, ಮುತ್ತಿಕ್ಕಿ ಕಳಿಸುತ್ತಾಳೆ.

ಅವಳ ಮುತ್ತಿಗೆ ಫಿದಾ ಆಗಿ ಅವಳ ಕೈಗೆ ಜೀಬಿನಿಂದ ತೆಗೆದು ದುಡ್ಡು ಕೊಡುತ್ತಾರೆ, ಅವಳು ನಗುತ್ತಲೇ ಇಸ್ಕೊಂಡು ಕೆನ್ನೆ ಸವರುತ್ತಾಳೆ. ಆಗ ಟಕ್ಕನೇ ಒಂದು ಸೆಲ್ಪಿ ತೆಗೆದುಕೊಂಡು ಬಿಡುತ್ತಾರೆ, ಹಾಗೆ ತೆಗೆದುಕೊಂಡ ಸೆಲ್ಫಿಯನ್ನು ಫೆಸ್ ಬುಕ್, ಇನ್‍ಸ್ಟ್ರಾ ಗಾಮ್, ಸ್ಟೇಟಸ್‍ಗೆ ಹಾಕಿಕೊಂಡು ಖುಷಿ ಪಡುತ್ತಾರೆ.

ಅವಳು ಪ್ರತಿ ದಿನ ಒಂದಲ್ಲ ಒಂದು ಕಡೆ ಎದುರಾಗುತ್ತಲೇ ಇರುತ್ತಾಳೆ, ಹಾಗೆ ಎದುರಿಗೆ ಬಂದಾಗ ಅವಳ ಸ್ಮೈಲ್‍ಗೆ ಒಮ್ಮೆ ನಿಂತು ಮಾತನಾಡಸಿಬೇಕು ಅನ್ನಿಸುತ್ತದೆ, ಆದರೆ ಅವಳನ್ನು ಮಾತನಾಡಿಸಿದರೆ ಯಾರಾದರು ಏನಾದರು ಅಂದುಕೊಂಡಾರು ಎಂದು ಅವಳ ತೀರ ಹತ್ತಿರದಿಂದಲೇ ನನ್ನ ವಾಹನವನ್ನು ಓಡಿಸಿಕೊಂಡು ಬರುತ್ತೇನೆ, ಅವಳು ನನ್ನನ್ನು ಹಾಗೆ ಅವಳ ಸುಂದರ ಚಿಕ್ಕ ಕಣ್ಣಿನಲ್ಲಿ ಒಮ್ಮೆ ನೋಡಿ ಕಣ್ಣು ಹೊಡೆಯುತ್ತಾಳೆ, ಅಬ್ಬಾ ಅವಳ ಕೈಗೆ ಸಧ್ಯ ನಾನು ಸಿಗಾಕಿಕೊಳ್ಳಲಿಲ್ಲ ಎಂದು ತಿರುಗಿ ಮತ್ತೊಮ್ಮೆ ಅವಳನ್ನು ನೋಡಿ ಅವಳ ನಗುವಿಗೆ ನಾನು ಮುಗಳ್ನಕ್ಕು ಮುಂದಕ್ಕೆ ಹೋಗುತ್ತೇನೆ.

ಅವಳೆಂದರೆ ತುಮಕೂರಿನ ಸಣ್ಣ ಮಕ್ಕಳಿಂದ ಮುದುಕರವರಿಗೆ ಅವಳಿಗೆ ಗೌರವ, ಪ್ರೀತಿ ತೋರಿಸುತ್ತಾರೆ, ಅವಳು ಒಂದೆರಡು ದಿನ ಆ ಬಡಾವಣೆಗೆ ಬರದಿದ್ದರೆ ಚಡಪಡಿಸುವವರೂ ಇದ್ದಾರೆ, ಅವಳು ಬಂದ ಕೂಡಲೇ ಅಂಗಡಿಯವರು ಅವಳ ಇಷ್ಟದ ತಿಂಡಿಯನ್ನು ಕೊಟ್ಟು ಸತ್ಕರಿಸಿ ಒಮ್ಮೆ ಖುಷಿ ಪಟ್ಟು ಕಳಿಸುತ್ತಾರೆ, ಅವಳೂ ಅಷ್ಟೇ ನನಗೆ ಇಂತಹವುದೇ ಬೇಕು ಅಂತ ಹಠ ಮಾಡುವುದಿಲ್ಲ, ಅವರು ಕೊಟ್ಟಿದ್ದನ್ನೇ ಇಸ್ಕೊಂಡು ಒಮ್ಮೆ ತಲೆ ಮೇಲೆ ಹೊಡೆದು ಕಣ್ಣು ಮಿಟುಕಿಸಿ ಮುಂದೆ ಹೋಗುತ್ತಾಳೆ.

ಆಗಾಗ ಅವಳಿಗೆ ಪ್ರೀತಿ ಉಕ್ಕಿ ಹರಿದರೆ ವಾಹನದಾರರನ್ನು ಅಡ್ಡಗಟ್ಟಿ ಮುತ್ತಿಕ್ಕಿಯೇ ಬಿಡುತ್ತಾಳೆ, ಅವಳಿಗೇನು ಇದು ಹೊಸದಲ್ಲ, ಅವರಿಗೂ ಇದು ಹೊಸದಲ್ಲ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಒಪ್ಪಂದದ ಮುದ್ದಿನ ಪ್ರೀತಿ, ಹಾಗಂತ ಇವÀಳು ಯಾರ ಮನೆಗೆ ಕರೆದರೂ ಹೋಗುವುದಿಲ್ಲ, ಸಂಜೆ ಅವಳ ಮನೆಗೇ ಹೋಗುತ್ತಾಳೆ.

ಬೆಳಿಗ್ಗೆ ಮತ್ತೆ ಯಥಾ ಪ್ರಕಾರ ಅವಳು ತನ್ನ ಹೆಜ್ಜೆಯನ್ನು ಕಾರ್ಯಕ್ರಮಕ್ಕೋ, ಸಭೆಗೋ, ಗಣಪತಿ ಉತ್ಸವಕ್ಕೋ, ದೇವರ ಉತ್ಸವಕ್ಕೋ ಹೋಗಿ ಬಿಡುತ್ತಾಳೆ ತಮಟೆ ಸದ್ದಿಗೆ ಅವಳು ತಲೆದೂಗುತ್ತಾಳೆ.
ಇವಳಿಲ್ಲದೆ ತುಮಕೂರಿಲ್ಲ ಅನ್ನುವಂತಾಗಿದೆ, ಅಂತಹ ಸುಂದರಿಯನ್ನು ಒಮ್ಮೆ ಕೆಲ ಪ್ರೀತಿ ಪಾತ್ರರು ಹೊತ್ತೊಯ್ದಿದ್ದರು, ಅವಳ ಆರ್ಭಟ, ಹಠ, ತಲೆ ಮೇಲೆ ಹೊಡೆತ ನೋಡಿಯೇ ಬಿಟ್ಟು ಪರಾರಿಯಾಗಿಬಿಟ್ಟರು.

ನೀವು ಇಷ್ಟೊತ್ತು ಯಾರಿವಳು ಎಂದು ಯೋಚಿಸುತ್ತಿರಬಹುದು, ಅವಳೇ ತುಮಕೂರು ಲಕ್ಷ್ಮೀ ಅಲಿಯಾಸ್ ಆನೆ ಲಕ್ಷ್ಮೀ ಅವಳು ತುಮಕೂರಿನ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಮುಂದೆ ಇದ್ದುಕೊಂಡು ಒಂದು ಆಕರ್ಷಣೆಯನ್ನು ತರುತ್ತಾಳೆ, ಇತ್ತೀಚಿನ ವರ್ಷಗಳಲ್ಲಿ ಅವಳನ್ನು ಬಿಟ್ಟು ಕೆಲ ಕಾರ್ಯಕ್ರಮಗಳು ನಡೆಯುವುದೇ ಇಲ್ಲ.

ಇಂತಹ ಲಕ್ಷ್ಮೀಗೆ ಈ ಬಾರಿ ಜಿಲ್ಲಾಡಳಿತದಿಂದ ನಡೆಯುತ್ತಿರುವ ದಸರಾಕ್ಕೆ ಬಾರಿ ಬೇಡಿಕೆ ಬಂದಿದೆ, ಈ ಬಾರಿ ತುಮಕೂರು ದಸರಾ ಅಂಬಾರಿಯನ್ನು ಈ ಲಕ್ಷ್ಮೀಯೇ ಹೊತ್ತು ಸಾಗಿದರು ಸಾಗ ಬಹದು, ನಮ್ಮೂರಿಗೆ ಒಂದು ಸಾಂಸ್ಕøತಿಕ ಲೋಕಕ್ಕೆ ಸದಾ ಸಿದ್ದಳಾಗಿ ಬರುವ ಲಕ್ಷ್ಮೀ ನಮ್ಮೆಲ್ಲರಿಗೂ ಪ್ರೀತಿಯ ಲಕ್ಷ್ಮೀಯೇ ಈ ಬಾರಿ ಅಂಬಾರಿ ಹೊರುವ ಶಕ್ತಿ ಬರಲಿ, ಅವಳು ತುಮಕೂರಿನ ಲಕ್ಷ್ಮೀಯಾಗಿ ಮೆರಯಲಿ ಎಂಬುದೇ ನನ್ನ, ನಿಮ್ಮೆಲ್ಲರ ಆಶಯವಾಗಿದೆ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *