ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಕಳೆದ ಸೋಮವಾರದಿಂದ ಭೂಮಿ ಮತ್ತು ವಸತಿ ಹಕ್ಕುಗಳ ಹೋರಾಟ ಸಮಿತಿಯಿಂದ ತುಮಕೂರು ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಭೂಮಿ ಮತ್ತು ವಸತಿ ರಹಿತರಿಗೆ ಭೂಮಿ ಮತ್ತು ವಸತಿ ವ್ಯವಸ್ಥೆ ಕಲ್ಪಿಸಬೇಕೆಂಬ ಆಗ್ರಹದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದು, ಇಂದಿಗೆ ಈ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಬುಧವಾರದಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡುತ್ತಾ ಬಡವರ ಉದ್ಧಾರ ಮಾಡುತ್ತಾರೆಂದು ನಾಯಕರನ್ನು ನಾವು ಆಯ್ಕೆ ಮಾಡಿ ಕಳಿಸುತ್ತೇವೆ, ಆದರೆ ಆಯ್ಕೆಯಾಗಿ ಉನ್ನತ ಸ್ಥಾನ ಬಂದ ಬಳಿಕ ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ, ಇಂತಹವರನ್ನು ನಾವು ಆಯ್ಕೆ ಯಾಕೆ ಮಾಡಬೇಕು, ನಮ್ಮ ಆಯ್ಕೆಯು ಇನ್ಮುಂದೆಯಾದರೂ ಜನರ ಸೇವೆಗಾಗಿ ಮಿಡಿಯುವವರಿಗೆ ಮಾತ್ರ ಮೀಸಲಾಗಿಸಬೇಕು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಸೋಮವಾರದಿಂದ ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಭೂಮಿ ಮತ್ತು ವಸತಿ ಹಕ್ಕುಗಳ ಹೋರಾಟ ಸಮಿತಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಭೂಮಿ ಮತ್ತು ವಸತಿ ರಹಿತರಿಗೆ ಭೂಮಿ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸುತ್ತಾ ಅಹೋರಾತ್ರಿ ಧರಣಿಯನ್ನು ಆರಂಭಿಸಿದ್ದಾರೆ.
ತುಮಕೂರು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನೂರಾರು ಸಂಖ್ಯೆಯಲ್ಲಿ ಬಡಜನರು ಭೂಮಿ ಮತ್ತು ವಸತಿ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದು ಮತ್ತೊಂದೆಡೆ ಸರ್ಕಾರಿ ಜಮೀನುಗಳಲ್ಲಿ ವಾಸವಿರುವಂತಹ ಬಡ ಜನರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಇದೇ ಸಂದರ್ಭದಲ್ಲಿ ಹಂದ್ರಾಳ ನಾಗಭೂಷಣ್ ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ರವರು ಪ್ರತಿಭಟನ ನಿರತರ ಮನವಿಯನ್ನ ಆಲಿಸಿ ಕೂಡಲೇ ತಮ್ಮೆಲ್ಲ ಬೇಡಿಕೆಗಳನ್ನ ಈಡೇರಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆದರೂ ಸಹ ಅಧಿಕಾರಿಗಳ ಮನವಿಯನ್ನು ತಿರಸ್ಕರಿಸಿದ ಪ್ರತಿಭಟನ ನಿರತರು ತಮ್ಮ ನ್ಯಾಯಯುತವಾದ ಬೇಡಿಕೆಗಳನ್ನ ಈಡೇರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆಯನ್ನ ಮುಂದುವರೆಸಿದ್ದಾರೆ.