ತುಮಕೂರು:ರಾಜ್ಯದಲ್ಲಿ ಅಧಿಕಾರ ನಡೆಸಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಜನರ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಇಲ್ಲದಂತಾಗಿದೆ.ಈ ನಿಟ್ಟಿನಲ್ಲಿ ಜನರು ತಮ್ಮ ಕಷ್ಟಗಳಿಗೆ ತಾವೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನವಕರ್ನಾಟಕ ನಿರ್ಮಾಣ ಆಂದೋಲನದ ಹೆಸರಿನಲ್ಲಿ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಮಾರ್ಚ್ 27 ರಂದು ಕನ್ನಡ ಭವನದಲ್ಲಿ ಸಮಾನ ಮನಸ್ಕರ ಸಭೆಯೊಂದನ್ನು ಆಯೋಜಿಸಿರುವುದಾಗಿ ಭರತಕುಮಾರ್ ಬೆಲ್ಲದಮಡು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕೆ ಬರಲು ಪಕ್ಷಗಳು ನಾನಾ ರೀತಿಯ ಭರವಸೆಗಳನ್ನು ನೀಡಿ, ತದನಂತರ ಅತ್ತ ಕಡೆ ತಿರುಗಿಯೂ ನೋಡುವುದಿಲ್ಲ. 2023ರ ಚುನಾವಣೆಯಲ್ಲಿ ಒಳಮೀಸಲಾತಿ ಜಾರಿ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಇದುವರೆಗೂ ಆ ಬಗ್ಗೆ ಕ್ರಮ ವಹಿಸಿಲ್ಲ.ಜೆಡಿಎಸ್, ಬಿಜೆಪಿಯೂ ಇದಕ್ಕೆ ಹೊರತಾಗಿಲ್ಲ.ಹಾಗಾಗಿ ಈ ಎಲ್ಲಾ ಪಕ್ಷಗಳನ್ನು ತಿರಸ್ಕರಿಸಿ,ಪರ್ಯಾಯ ರಾಜಕಾರಣವನ್ನು ಹಟ್ಟುಹಾಕುವ ನಿಟ್ಟಿನಲ್ಲಿ ಮಾರ್ಚ 27ರ ಸಭೆ ಮಹತ್ವದಾಗಿದೆ ಎಂದರು.
ಇದುವರೆಗೂ ರಾಜ್ಯವನ್ನು ಆಳಿರುವ ಜೆಸಿಬಿ ಪಕ್ಷಗಳ ಅಡಳಿತದ ಕಾಲದಲ್ಲಿ ಈ ನಾಡಿನ ದಲಿತರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಮಹಿಳೆಯರಿಗೆ ಯಾವುದೇ ರೀತಿಯ ನ್ಯಾಯವೂ ಇಲ್ಲ, ರಕ್ಷಣೆ ಇಲ್ಲದಂತಾಗಿದೆ.ಸಮ ಸಮಾಜದ ಕನಸು ಇದುವರೆಗೂ ಈಡೇರಿಲ್ಲ. ಇತ್ತೀಚಿನ ಬೆಳವಣಿಗೆಗಳು ಮುಸ್ಲಿಂರಿಗೆ ಉಳಿಗಾಲವೇ ಇಲ್ಲವೇನೋ ಎಂಬ ಭೀತಿ ಹುಟ್ಟಿಸುತ್ತಿವೆ.ಅಲ್ಲದೆ ಸರಕಾರವೇ ಮುಂದೆ ನಿಂತು ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡುತ್ತಿದ್ದು, ಸರಕಾರಿ ಶಾಲೆಗಳು, ಅದರಲ್ಲಿಯೂ ಗ್ರಾಮೀಣ ಭಾಗದ ಕನ್ನಡ ಶಾಲೆಗಳು ಬಾಗಿಲು ಹಾಕುತ್ತಿವೆ ಕನ್ನಡ ನಾಡಿನಲ್ಲಿಯೇ ಕನ್ನಡಿಗರು ಒಂದೆಡೆ ಮರಾಠಿ,ಮತ್ತೊಂದು ಕಡೆ ತಮಿಳು,ತೆಲುಗು ಭಾಷಿಕರಿಗೆ ಹೆದರಿ ಜೀವನ ನಡೆಸಬೇಕಾದ ಪರಿಸ್ಥಿತಿಯನ್ನು ನಮ್ಮ ರಾಜಕಾರಣಿಗಳು ಸೃಷ್ಟಿಸಿದ್ದಾರೆ.ಇದಕ್ಕೆ ಪ್ರಮುಖ ಕಾರಣ ಎಲ್ಲಾ ರಾಜಕೀಯ ಪಕ್ಷಗಳು ಉತ್ತರ ಭಾರತೀಯರ ಕೈಗೊಂಬೆಯಂತೆ ವರ್ತಿಸುತ್ತಿರುವುದು. ಹಾಗಾಗಿ ನಮ್ಮದೇ ನೆಲದ ಪ್ರಭಲ ಪರ್ಯಾಯ ರಾಜಕೀಯ ಪಕ್ಷವೊಂದರ ಅನಿವಾರ್ಯ ಇದ್ದು,ಇದಕ್ಕಾಗಿ ನವ ಕರ್ನಾಟಕ ನಿರ್ಮಾಣ ಆಂದೋಲನಕ್ಕೆ ರಾಜಕೀಯ ಪಕ್ಷದ ಸ್ವರೂಪ ನೀಡಲು ಮುಂದಾಗಿರುವುದಾಗಿ ಭರತಕುಮಾರ್ ಬೆಲ್ಲದಮಡು ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ ಮಾತನಾಡಿ,ಚುನಾವಣೆ ಪೂರ್ವದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ರದ್ದು ಮಾಡುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಎರಡು ವರ್ಷ ಕಳೆದರೂ ಮೈಮರೆತಿದೆ. ಇದರ ಪರಿಣಾಮ ಭೂಮಿಯ ಬೆಲೆ ಎಕರೆಗೆ 25 ಲಕ್ಷ ತಲುಪಿದೆ.ಸುಮಾರು 10 ಲಕ್ಷಕ್ಕೂ ಹೆಚ್ಚು ರೈತರು ಭೂಮಿ ಕಳೆದುಕೊಂಡಿದ್ದಾರೆ.ಅಲ್ಲದೆ ಕೈಗಾರಿಕೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕೊಂಡು ಕಾರ್ಪೋರೇಟ್ ಕುಳಾಗಳಿಗೆ ನೀಡಲು ಮುಂದಾಗಿದೆ. ಹಾಗಾಗಿ ರೈತಪರವಾದ ಸರಕಾರ ಬರೆಬೇಕೆಂದರೆ ಪರ್ಯಾಯ ರಾಜಕಾರಣ ಅನಿವಾರ್ಯ.ಇದಕ್ಕಾಗಿ ಮಾರ್ಚ್ 27ರ ನವ ಕರ್ನಾಟಕ ನಿರ್ಮಾಣ ಆಂದೋಲನ ಮುನ್ನುಡಿ ಬರೆಯಲಿದೆ ಎಂದರು.
ದಲಿತ ಮುಖಂಡ ಪಿ.ಎನ್.ರಾಮಯ್ಯ ಮಾತನಾಡಿದರು.
ಕನ್ನಡ ಪರ ಸಂಘಟನೆಯ ಅರುಣಕುಮಾರ್,ಭೂ ಹೋರಾಟ ಕೃಷ್ಣಮೂರ್ತಿ ಅವರುಗಳು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ತೊಂಟದಾರಾಧ್ಯ,ಮಲ್ಲಿಕಾರ್ಜುನಯ್ಯ,ಕಲ್ಪನ,ಹನುಮಂತರಾಯಪ್ಪ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.