ಸಮಾನತೆಯ ತತ್ವವನ್ನು ಪ್ರತಿಪಾದಿಸಿದಂತಹವರು ಬಾಬಾ ಸಾಹೇಬ ಅಂಬೇಡ್ಕರ್ : ಶುಭ ಕಲ್ಯಾಣ್

ತುಮಕೂರು, : ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ದೃಷ್ಟಿಯಲ್ಲಿ ಸಮಾನರು. ಎಲ್ಲರನ್ನು ಸಮಾನತೆಯಿಂದ ಕಾಣಬೇಕೆಂಬ ಬಾಬಾ ಸಾಹೇಬರ ಸಮಾನತೆಯ ಸಿದ್ಧಾಂತವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯ ಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿಂದು ಆಯೋಜಿಸಿದ್ದ ಡಾ|| ಬಿ.ಆರ್. ಅಂಬೇಡ್ಕರ್ ರವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಸತಿ ಸಹಗಮನ ಪದ್ಧತಿ, ಬಾಲ್ಯ ವಿವಾಹ, ದೇವದಾಸಿ ಪದ್ಧತಿಗಳ ವಿರುದ್ಧ ಹೋರಾಡಿ ಮಹಿಳೆಯರಿಗೆ ಆತ್ಮ ಗೌರವವನ್ನು ತಂದು ಕೊಟ್ಟು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು. ನಾನು ಇಂದು ಒಬ್ಬ ಮಹಿಳಾ ಜಿಲ್ಲಾಧಿಕಾರಿಯಾಗಿ ಇಂದಿನ ಬಾಬಾ ಸಾಹೇಬರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಸಂತಸ ಹಾಗೂ ಹೆಮ್ಮೆ ಉಂಟು ಮಾಡಿದೆ ಎಂದು ಹೇಳಿದರು.

  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರು ಮಾತನಾಡಿ, ಭಾರತ ದೇಶಕ್ಕೆ ಅಂಬೇಡ್ಕರ್ ರವರು ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು. ಶತಮಾನಗಳ ಕಾಲ ಶಾಶ್ವತವಾಗಿ ಉಳಿಯುವಂತ ಸಂವಿಧಾನ ನಮ್ಮದಾಗಿದೆ. ಪ್ರತಿಯೊಬ್ಬರೂ ಅಂಬೇಡ್ಕರ್ ರವರ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಬಡತನದಲ್ಲಿ ಹುಟ್ಟಿ ಪ್ರಪಂಚವೇ ತಿರುಗಿ ನೋಡುವಂತೆ, ದೇಶವೇ ಹೆಮ್ಮೆ ಪಡುವಂತೆ ಎತ್ತರಕ್ಕೆ ಬೆಳೆದವರು ಅಂಬೇಡ್ಕರ್. ಇವರು ನೀಡಿರುವ ಸಂವಿಧಾನದಿಂದಲೇ ದೇಶವು ಇಂದಿಗೂ ಸುಭೀಕ್ಷವಾಗಿ, ನ್ಯಾಯಯುತವಾಗಿ ಸಾಗುತ್ತಿದೆ ಎಂದು ಹೇಳಿದರು.

ನಂತರ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕಾರಳೆ ಅವರು ಮಾತನಾಡಿ, ಭಾರತ ಸಂವಿಧಾನ ರಚನೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪಾತ್ರ ಬಹಳ ಮುಖ್ಯವಾಗಿದ್ದು, ಸಂವಿಧಾನದಲ್ಲಿರುವ ತತ್ವಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ., ತಹಶೀಲ್ದಾರ್ ಎಂ. ಸಿದ್ದೇಶ್., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ., ಬೆಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹೆಚ್. ನಾರಾಯಣಸ್ವಾಮಿ., ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ದಲಿತ ಸಂಘದ ಹೋರಾಟಗಾರರು, ಪ್ರಗತಿಪರ ಹೋರಾಟಗಾರರು, ಸಾರ್ವಜನಿಕರು ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *