‘ತುಮಕೂರು ವಿವಿಯ ವಾರ್ಷಿಕ ಕ್ರೀಡಾ ಬಜೆಟ್ 1 ಕೋಟಿ 78 ಲಕ್ಷ’

ತುಮಕೂರು: ಈ ಸಾಲಿನಿಂದ ತುಮಕೂರು ವಿವಿಯ ವಾರ್ಷಿಕ ಕ್ರೀಡಾ ಬಜೆಟ್ 1 ಕೋಟಿ 78 ಲಕ್ಷಕ್ಕೆ ಏರಿದೆ. ವಿದ್ಯಾರ್ಥಿಗಳನ್ನು ಸಾಮಾನ್ಯರಿಂದ ಸಾಧಕರನ್ನಾಗಿಸಲು ವಿವಿಗಳು ಶ್ರಮಿಸಿದರೆ, ಗುರಿಯಿಲ್ಲದ ದಾರಿಯಲ್ಲಿ ನಡೆಯುತ್ತಿರುವ ಯುವ ಪೀಳಿಗೆಯ ಭವಿಷ್ಯಕ್ಕೆ ಬೆಳಕಾಗಬಹುದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ 2023-24ನೇ ಸಾಲಿನ ಸ್ನಾತಕೋತ್ತರ ಅಂತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಮಾನಸಿಕ, ದೈಹಿಕ ಆರೋಗ್ಯವು ಕ್ರೀಡಾ ಮನೋಭಾವವಿರುವ ವಿದ್ಯಾರ್ಥಿಗಳಲ್ಲಿ ಕಾಣಬಹುದು. ನಾಲ್ಕು ಗೋಡೆಗಳಿಗೆ ಬದುಕು ಸೀಮಿತವಾದರೆ ಸಾಧಿಸಲು ಸಾಧ್ಯವಿಲ್ಲ. ಪ್ರಪಂಚ ಅವಕಾಶಗಳ ಆಗರ. ಕೈಬೀಸಿ ಕರೆಯುವ ಅವಕಾಶಗಳನ್ನು, ವೇದಿಕೆಗಳನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಲು ಶ್ರಮಿಸಬೇಕು ಎಂದರು.
ಕ್ಯಾಲಿಸ್ಟೆನಿಕ್ಸ್ ಕ್ರೀಡೆಯ ಅಂತಾರಾಷ್ಟ್ರೀಯ ಕ್ರೀಡಾಪಟು ಸತ್ಯವತಿ ಎಸ್. ಮಾತನಾಡಿ, ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುವುದು ತುಂಬಾ ಕಷ್ಟಕರವಾಗಿದೆ. ನಮ್ಮ ಕನಸಿನ ಮೇಲೆ ಹೆಚ್ಚು ಶ್ರಮಹಿಸಿದರೆ ಯಶಸ್ವಿಯಾಗುತ್ತೇವೆ ಎಂದರು.

ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಪುರುಷ, ಮಹಿಳೆ ಎಂಬ ಬೇಧಭಾವ ಮಾಡದೆ ಸಮಾನತೆಯ ಸಮಾಜ ರೂಪಿಸುವುದು ವಿವಿಗಳ ಗುರಿಯಾಗಬೇಕು. ಪದವಿಯ ನಂತರ ಮಹಿಳೆಯರ ಸಾಧನೆಗೆ ಅವಕಾಶಗಳು ಇರುವುದಿಲ್ಲ. ಸಂಸಾರವನ್ನು ರೂಪಿಸಿಕೊಳ್ಳುವ ಸಮಯದಲ್ಲಿ ಬದುಕಿನ ಕನಸುಗಳನ್ನು ತ್ಯಾಗ ಮಾಡಬೇಕಾಗುತ್ತದೆ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಮಾತನಾಡಿ, ಸ್ತ್ರೀಯರಿಗೆ ಪ್ರಾಧಾನ್ಯತೆ ಇರುವ ದೇಶಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುತ್ತವೆ. ಸ್ತ್ರೀಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕ್ರೀಡೆ ಬದುಕುವ ಚೈತನ್ಯವನ್ನು ಕೊಡುತ್ತದೆ ಎಂದರು.

2023-24ನೇ ಸಾಲಿನ ಸ್ನಾತಕೋತ್ತರ ಅಂತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪುರುಷರ ಏಕವ್ಯಕ್ತಿ ಕ್ರೀಡಾ ಸ್ಪರ್ಧೆಯಲ್ಲಿ ವಿವಿಯ ಕನ್ನಡ ವಿಭಾಗದ ವಿದ್ಯಾರ್ಥಿ ನಂದನ್ ಕುಮಾರ್ ಎಲ್. ಎನ್. ಹಾಗೂ ಮಹಿಳೆಯರ ಏಕವ್ಯಕ್ತಿ ಕ್ರೀಡಾ ಸ್ಪರ್ಧೆಯಲ್ಲಿ ವಿವಿಯ ಸಾವಯವ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಸ್ಪೂರ್ತಿ ವೈ. ಎನ್. ಗರಿಷ್ಠ ಪ್ರಶಸ್ತಿ ಪಡೆದುಕೊಂಡು ವೈಯಕ್ತಿಕ ಛಾಂಪಿಯನ್‍ಶಿಪ್ ಪ್ರಶಸ್ತಿ ಪಡೆದುಕೊಂಡರು.

ವಿವಿಯ ಸ್ನಾತಕೋತ್ತರ ಸಾವಯವ ರಸಾಯನಶಾಸ್ತ್ರವು ವಿಭಾಗವು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಗರಿಷ್ಠ ಪ್ರಶಸ್ತಿ ಪಡೆದುಕೊಂಡು ಸಮಗ್ರ ಛಾಂಪಿಯನ್‍ಶಿಪ್ ಪ್ರಶಸ್ತಿಗೆ ಭಾಜನರಾದರು.

ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಡಾ. ಎ. ಎಂ. ಮಂಜುನಾಥ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಚೇತನ್ ಪ್ರತಾಪ್ ಕೆ. ಎನ್. ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *