ನಕಲಿ ಜಾತಿ ಪ್ರಮಾಣದಡಿ ಹಕ್ಕುಪತ್ರ ಪಡೆಯುವುದನ್ನು ತಡೆಯಲು ಡಿಸಿಗೆ ಮನವಿ

ತುಮಕೂರು ಮಾಚ್ 5 : ಹಂದಿಜೋಗೀಸ್ ಜಾತಿ ಹೆಸರಿನಡಿ ನಕಲಿ ಜಾತಿಪತ್ರ ಪಡೆದು ಹಕ್ಕುಪತ್ರ ಪಡೆಯುತ್ತಿರುವುದನ್ನು ತಡೆಯುವಂತೆ ತುಮಕೂರು ಜಿಲ್ಲಾ ಹಂದಿಜೋಗೀಸ್ ಸಂಘ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಮನವಿ ಸಲ್ಲಿಸಿತು.

ತುಮಕೂರು ಜಿಲ್ಲೆಯಲ್ಲಿ ಹಂದಿಜೋಗೀಸ್ ಜನಾಂಗಕ್ಕೆ ಸೇರದ ಕೆಲ ಅರೆ ಅಲೆಮಾರಿ ಜನಾಂಗದವರು ‘ಹಂದಿಜೋಗೀಸ್’ ಜನಾಂಗದ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದು, ಇದರಿಂದ ನಿಜವಾದ ಹಂದಿಜೋಗೀಸ್ ಜನಾಂಗಕ್ಕೆ ಯಾವುದೇ ಸರ್ಕಾರದ ಸೌಲಭ್ಯಗಳು ಸಿಗದೆ ವಂಚಿತರಾಗುತ್ತಿದ್ದು,ಈಗ ಹಂದಿಜೋಗೀಸ್ ಜನಾಂಗಕ್ಕೆ ಮೀಸಲಿಟ್ಟಿರುವ ಸರ್ಕಾರದ ವಸತಿ ಯೋಜನೆಯಡಿ ಹಕ್ಕು ಪತ್ರಗಳನ್ನು ಹಂದಿಜೋಗೀಸ್ ಅಲ್ಲದವರು ಪಡೆದುಕೊಳ್ಳುತ್ತಿದ್ದು ಇದನ್ನು ಕೂಡಲೇ ತಡೆಗಟ್ಟುವಂತೆ ಹಂದಿಜೋಗೀಸ್ ಸಂಘದ ಜಿಲ್ಲಾಧ್ಯಕ್ಷರಾದ ಮುಕುಂದ, ಕಾರ್ಯದರ್ಶಿ ಚಂದ್ರಶೇಖರ್, ಸಂಚಾಲಕರಾದ ಗೋಪಿ ಮತ್ತು ರಂಗಪ್ಪ ತಿಪಟೂರು ಮನವಿ ಸಲ್ಲಿಸಿದರು.

ಗುಬ್ಬಿ ತಾಲ್ಲೂಕು ಸಾತೇನಹಳ್ಳಿ ಗೇಟ್ (ಸ.ನಂ.49) ಮತ್ತು ತುಮಕೂರಿನ ಅಣ್ಣೇನಹಳ್ಳಿ (ಸ.ನಂ.74) ಬಳಿ ಹಂದೀಜೋಗೀಸ್ ಜನಾಂಗಕ್ಕೆ ಗುರುತಿಸಿರುವ ವಸತಿ ಪ್ರದೇಶದಲ್ಲಿ ಇತರೆ ಜಾತಿಯವರಿಗೆ ಹಕ್ಕುಪತ್ರ ನೀಡದಂತೆ ತಡೆ ಹಿಡಿದು, ಹಂದಿಜೋಗೀಸ್ ಜನಾಂಗಕ್ಕೆ ಮಾತ್ರ ಹಕ್ಕುಪತ್ರ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಜಿಲ್ಲಾ ಅಲೆಮಾರಿ ಕೋಶದ ಆಧಿಕಾರಿಗಳಾದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೃಷ್ಣಪ್ಪನವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ವರದಿ ನೀಡುವಂತೆ ಸೂಚಿಸಿದರು.

Leave a Reply

Your email address will not be published. Required fields are marked *