ತುಮಕೂರು : ಮನುಷ್ಯನ ಪ್ರೀತಿಯ ಪ್ರಾಣಿಯಾಗಿರುವ ನಾಯಿಗಳಿಂದ ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿಯಾಗಿದ್ದು, ಈ ಲಸಿಕಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಹೆಚ್.ಎಂ.ಶಿವಪ್ರಸಾದ ಅವರು ಮನವಿ ಮಾಡಿದರು.
ಅವರು ಸೆಪ್ಪಂಬರ್ 28ರಂದು ಜಿಲ್ಲಾ ಪಂಚಾಯತಿ ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಶು ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರೇಬಿಸ್ ದಿನಾಚರಣೆಯನ್ನು ನಾಯಿಗಳಿಗೆ ಲಸಿಕೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು, ಕಳೆದ ಒಂದು ತಿಂಗಳಿಂದ ಸ್ಥಳೀಯ ಸಂಸ್ಥೆಗಳಾದ ಪಂಚಾಯತಿ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳಿಂದ ಜನರಿಗೆ ಮತ್ತು ಶಾಲಾ ಮಕ್ಕಳಿಗೆ ವಿಶ್ವ ರೇಬಿಸ್ ದಿನಾಚರಣೆ ಪ್ರಯುಕ್ತ ನಾಯಿ ಕಚ್ಚಿದಾಗ ಚಿಕಿತ್ಸೆ ಮತ್ತು ನಾಯಿಗಳಿಗೆ ಲಸಿಕೆ ಹಾಕಿಸುವ ಬಗ್ಗೆ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಸೆಪ್ಟಂಬರ್ 28ನ್ನು ವಿಶ್ವ ರೇಬಿಸ್ ದಿನವನ್ನಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಸೆಪ್ಟಂಬರ್ 28ರಿಂದ ಅಕ್ಟೋಬರ್ 28ರವರೆಗೆ ನಾಯಿಗಳಿಗೆ ರೇಬಿಸ್ ಲಸಿಕೆ ಅಭಿಯಾನವನ್ನು ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಬೀದಿ ನಾಯಿಗಳಿಗೂ ಸಹ ಸ್ಥಳೀಯ ಸಂಸ್ಥೆಗಳ ಮುಖಾಂತರ ರೇಬಿಸ್ ಲಸಿಕೆ ಹಾಕುವುದು ಮತ್ತು ಎಬಿಸಿ ಅಂದರೆ ನಾಯಿಗಳು ಮರಿ ಹಾಕದಂತೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುವುದು, ಈ ಅಭಿಯಾನಕ್ಕಾಗಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡ 2%ರಷ್ಟು ಅನುದಾನವನ್ನು ತೆಗೆದಿಡಲಾಗುತ್ತಿದೆ ಎಂದು ತಿಳಿಸಿದರು.
ಈ ಅಭಿಯಾನದಲ್ಲಿ ಪ್ರಾಣಿಪ್ರಿಯರು ಮತ್ತು ನಾಯಿ ಸಾಕಾಣಿಕೆದಾರರು ಕಡ್ಡಾಯವಾಗಿ ಪಾಲ್ಗೊಂಡು ರೇಬಿಸ್ ತಡೆಗಟ್ಟಲು ಮುಂದಾಗಬೇಕೆಂದು ಮನವಿ ಮಾಡಿದರು.
ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್ ನ ಸದಸ್ಯರು ಮತ್ತು ಜಿಲ್ಲಾ ಪಶು ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳಾದ ವೆಂಕಟೇಶಬಾಬು ರೆಡ್ಡಿ ಉಪಸ್ಥಿತರಿದ್ದರು.