ಗೊಲ್ಲ ಸಮುದಾಯಕ್ಕೆ ರಾಜಕೀಯ ಸ್ಥಾನಮಾನಕ್ಕಾಗಿ ಕಾಂಗ್ರೆಸ್ ಬೆಂಬಲಿಸಲು ಡಾ.ಜಿ.ಪರಮೇಶ್ವರ್ ಮನವಿ

ತುಮಕೂರು:ಅತ್ಯಂತ ನಂಬಿಕೆಗೆ ಆರ್ಹವುಳ್ಳ ಸಮುದಾಯಗಳಲ್ಲಿ ಗೊಲ್ಲ ಸಮುದಾಯವೂ ಒಂದು.ಹಾಗಾಗಿ ಕಾಂಗ್ರೆಸ್ ಪಕ್ಷ ಐದು ಜನರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಅವರಿಗೆ ರಾಜಕೀಯ ಅಧಿಕಾರವನ್ನು ನೀಡಿದ್ದು,ಮುಂದೆಯೂ ಸಹ ರಾಜಕೀಯ ಸ್ಥಾನ,ಮಾನಗಳಿಗಾಗಿ ಈ ಸಮುದಾಯ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸ ಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.

ನಗರದ ಮಾರುತಿ ಮಹಾರಾಜ್ ಕನ್ವೆಕ್ಷನ್ ಹಾಲ್‍ನಲ್ಲಿ ಆಯೋಜಿಸಿದ್ದ ಗೊಲ್ಲ ಸಮುದಾಯದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಗೊಲ್ಲ ಸಮುದಾಯವನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಬೇಕೆಂಬ ಅವರ ಬಹುದಿನದ ಬೇಡಿಕೆಗೆ ಚಾಲನೆ ಸಿಕ್ಕಿದ್ದು,ಇದರಿಂದ ಸಮುದಾಯ ಶೈಕ್ಷಣಿಕವಾಗಿ,ಔದ್ಯೋಗಿಕವಾಗಿ,ಅರ್ಥಿಕವಾಗಿ ಮೇಲೆ ಬರಲು ಸಾಧ್ಯವೆಂಬುದು ಇವರ ನಂಬಿಕೆ.ಹಾಗಾಗಿ ಸರಕಾರ ಈ ನಿಟ್ಟಿನಲ್ಲಿ ಎಸ್ಟಿ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.

ಅಂದು 2006ರಲ್ಲಿ ಸಿದ್ದರಾಮಯ್ಯ ಅಹಿಂದ ಹೋರಾಟವನ್ನು ಪ್ರಾರಂಭಿಸದಿದ್ದರೆ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ.ಹಾಗೆಂದ ಮಾತ್ರಕ್ಕೆ ಹೋರಾಟ ನಿಲ್ಲಬಾರದು. ಅಹಿಂದ ಹೋರಾಟ ನಿರಂತರ.ಅದು ಎಲ್ಲ ಅಹಿಂದ ವರ್ಗಗಳಿಗೂ ರಾಜಕೀಯ ಸ್ಥಾನಮಾನ ಸಿಗುವವರೆಗೂ ಮುಂದುವರೆಯಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಪ್ರಧಾನಿ ನರೇಂದ್ರಮೋದಿ ಅವರು ಇದೇ ಮೊದಲ ಬಾರಿಗೆ ಎಎನ್‍ಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದಾರೆ. ಸುಮಾರು 90 ನಿಮಿಷಗಳ ಸಂದರ್ಶನದಲ್ಲಿ ಒಮ್ಮೆಯೂ ರೈತರ ಬಗ್ಗೆಯಾಗಲಿ,ಬಡವರ ಬಗ್ಗೆಯಾಗಲಿ ಮಾತನಾಡಿಲ್ಲ. ಅವರು ಅತಿ ಹೆಚ್ಚು ಮಾತನಾಡಿರುವುದೇ ಕಾಂಗ್ರೆಸ್ ಮುಖಂಡರಾದ ರಾಹುಲ್‍ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ.2014-2024ರವರಗೆ ಮೋದಿಯ ಭಾಷಣಗಳನ್ನು ಜನರು ಮರೆತ್ತಿಲ್ಲ.ನೀವು ಹೇಳಿರುವುದೇನು, ಮಾಡಿರುವುದೇನು ಎಂಬುದನ್ನು ಜನರು ಅರಿತಿದ್ದಾರೆ.ಆದರೆ ಕಾಂಗ್ರೆಸ್ ನಿಮ್ಮಂತೆ ಅಲ್ಲ. ಈ ಪಕ್ಷ ಹುಟ್ಟಿರುವುದೇ ಬಡವರಿಗಾಗಿ, ಅವರಿಗೆ ಒಳ್ಳೆಯ ಬದುಕು ಕೊಡುಬೇಕು ಎಂಬುದೇ ಕಾಂಗ್ರೆಸ್ ಪಕ್ಷದ ಆಶಯವಾಗಿದೆ.ಪಕ್ಷದಲ್ಲಿರುವ ಕೆಲವರು ಬದಲಾಗಿರಬಹುದು.ಆದರೆ ಪಕ್ಷದ ಆಶಯ ಎಂದಿಗೂ ಬದಲಾಗಿಲ್ಲ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಜೆಡಿಎಸ್ ಪಕ್ಷದ ವರಿಷ್ಠರು 2023ರ ವಿಧಾನಸಭೆ ಮತ್ತು ಅದಕ್ಕಿಂತ ಹಿಂದೆ ನಡೆದ ಚುನಾವಣೆಗಳಲ್ಲಿ ಮುಸ್ಲಿಂರ ರಕ್ಷಣೆಗೆ ನಾವಿದ್ದೇವೆ ಎಂದು ಹೇಳಿ ಮತ ಪಡೆದು,ಈಗ ಮುಸ್ಲಿಂರನ್ನು ದ್ವೇಷಿಸುವ,ಅವರನ್ನು ಎರಡನೇ ಪ್ರಜೆಯನ್ನಾಗಿಸಲು ಹೊರಟ ಕೋಮುವಾದಿ ಪಕ್ಷದೊಂದಿಗೆ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ.ಇದು ನೀವು ಮುಸ್ಲಿಂ ಸಮುದಾಯಕ್ಕೆ ಮಾಡಿದ ಮೋಸ ಅಲ್ಲವೇ? ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಲು ನಿಮಗೆ ಹೇಗಾದರೂ ಮನಸ್ಸು ಬಂತ್ತು ಎಂದು ಪ್ರಶ್ನಿಸಿದ ಅವರು, ಪ್ರತಿಭಟನೆ ನಮ್ಮ ಹಕ್ಕು, ಕಾಂಗ್ರೆಸ್ ಪಕ್ಷ ಹುಟ್ಟಿದ್ದೇ,ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಡಲು,ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ,ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಎಡಗೈ ಮತ್ತು ಯಾದವ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆಕಿಲ್ಲ.ಮುಂದಿನ ದಿನಗಳಲ್ಲಿ ಒತ್ತು ನೀಡಲಾಗುವುದು.ಬಡವರ ಕೈ ಹಿಡಿಯುವ ಪಕ್ಷ ಎಂದರೆ ಕಾಂಗ್ರೆಸ್ ಮಾತ್ರ.ಅಂತಹ ಪಕ್ಷವನ್ನು ಹಿಂದುಳಿದ ವರ್ಗಕ್ಕೆ ಸೇರಿದ ಗೊಲ್ಲ ಸಮುದಾಯ ಬೆಂಬಲಿಸುವ ಮೂಲಕ ತಾವು ಸಹ ರಾಜಕೀಯ ಅಧಿಕಾರ ಪಡೆಯಲು ಮುಂದಾಗಬೇಕೆಂದರು.

ಸರಕಾರದ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಬಹಳ ಅನುಕೂಲವಾಗಿದೆ.ಅದರಲ್ಲಿಯೂ ಅನ್ನಭಾಗ್ಯ ಯೋಜನೆಯಿಂದ ಬಹಳ ಉಪಯೋಗವಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ ನಾಚಿಕೆಯಾಗಬೇಕು.ತಾಯಂದಿರಿಗೆ ಮಾಡಿರುವ ದೊಡ್ಡ ಅವಮಾನ.ಯಾವ ಮಹಿಳೆಯು ಹೆಚ್.ಡಿ.ಕುಮಾರಸ್ವಾಮಿ ಅವರ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ.ಎಲ್ಲರೂ ಖಂಡಿಸಬೇಕು ಮತ್ತು ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ವಿರುದ್ದವಾಗಿ ಮತ ಚಲಾಯಿಸುವ ಮೂಲಕ ಸರಿಯಾದ ಪಾಠ ಕಲಿಸಬೇಕೆಂದು ಕೆ.ಎನ್.ರಾಜಣ್ಣ ಮನವಿ ಮಾಡಿದರು.

ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ,ಮಹಾಭಾರತದ ಶ್ರೀಕೃಷ್ಣನಂತೆ ಯಾದವ ಸಮುದಾಯದ ಪಾಪಣ್ಣನವರು ಅರ್ಜುನನ ರೀತಿ ಮುದ್ದಹನುಮೇಗೌಡ ಅವರುಗಳು ಜೋಡೆತ್ತು ಗಾಡಿಯಲ್ಲಿ ನಾಮಪತ್ರಿಕೆ ಸಲ್ಲಿಸಿದ್ದು ತುಮಕೂರು ಜಿಲ್ಲೆಯ ಇತಿಹಾಸ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಸ್ಥಳೀಯರು, ಅವರಿಗೆ ಮತ ಹಾಕುವುದರಿಂದ ಕೆಲಸ ಕಾರ್ಯಗಳು ಸುಲಭವಾಗಲಿವೆ.ಇನ್ನೊಬ್ಬರನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗುವುದು ತಪ್ಪಲಿದೆ ಎಂದರು.

ಇಂತಹ ಬರದ ಸಮಯದಲ್ಲಿಯೂ ಬಡಜನರಿಗೆ ನೆರವಾಗುತ್ತಿದ್ದರೆ ಅದು ಸರಕಾರದ ಗ್ಯಾರಂಟಿ ಯೋಜನೆಗಳಿಂದ ಆದರೆ ಇದರ ಅರಿವಿರದೆ ಮಾತನಾಡುವುದು ತರವಲ್ಲ.ನಿಮ್ಮ ಸಭೆಗಳಲ್ಲಿಯೇ ಪ್ರಶ್ನೆ ಮಾಡಿ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ನಿಮ್ಮಲ್ಲಿಯೇ ಹೆಚ್ಚು.ಸರಕಾರ ಟೀಕಿಸುವ ಭರದಲ್ಲಿ ಬಡತನವನ್ನು ಹಿಯಾಳಿಸಬೇಡಿ ಎಂದು ಡಿ.ಸಿ.ಗೌರಿಶಂಕರ್ ನುಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಚಿಕ್ಕಣ್ಣಸ್ವಾಮಿ ದೇವಾಲಯದ ದರ್ಮದರ್ಶಿ ಹಾಗೂ ಕರ್ನಾಟಕ ಕೃಷಿಕ ಸಮಾಜದ ಗೌರವಾಧ್ಯಕ್ಷ ಪಾಪಣ್ಣ, ಗೊಲ್ಲ ಸಮುದಾಯದ ಮುಖಂಡರಾದ ಜಿ.ಜೆ.ರಾಜಣ್ಣ,ಪ್ರೇಮ ಮಹಾಲಿಂಗಯ್ಯ,ಎಸ್.ನಾಗಣ್ಣ,ಮಹಾಲಿಂಗಯ್ಯ, ಗಂಗಾಧರ್, ಚಿನ್ನಪ್ಪ,ಷಣ್ಮುಖಪ್ಪ,ಎನ್.ಗೋವಿಂದರಾಜು,ಪುಟ್ಟರಾಜು,ಸಿದ್ದಲಿಂಗೇಗೌಡ,ಪಾಲನೇತ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *