ಗುಬ್ಬಿ: ಚುನಾವಣೆ ಹಿನ್ನಲೆ ಜೆಡಿಎಸ್ ಪರ ಮತಯಾಚನೆಗೆ ಏಪ್ರಿಲ್ 15 ರಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುಬ್ಬಿಗೆ ಆಗಮಿಸಿ ಕಾರ್ಯಕರ್ತರನ್ನುದ್ದೇಶಿಸಿ ಬಹಿರಂಗ ಸಭೆಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಈ ಹಿನ್ನಲೆ ಮೂವತ್ತು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಈ ಸಭೆಗೆ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕುಮಾರಣ್ಣ ಅವರು ತಿಪಟೂರು ಭೇಟಿ ನಂತರ ಗುಬ್ಬಿಗೆ ಆಗಮಿಸಲಿದ್ದು ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೃಹತ್ ಮೆರವಣಿಗೆ ಮೂಲಕ ಬಸ್ ನಿಲ್ದಾಣ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ನಂತರ ನಾಮಪತ್ರ ಸಲ್ಲಿಕೆ ನಡೆಯಲಿದೆ ಎಂದರು.
ಜೆಡಿಎಸ್ ಭದ್ರಕೋಟೆ ಎನಿಸಿದ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೇ ಜೆಡಿಎಸ್ ಬಾವುಟ ಹಾರಿಸಲು ಕಾರ್ಯಕರ್ತರು ಹುಮ್ಮಸ್ಸಿನಲ್ಲಿ ಕಾದಿದ್ದಾರೆ. ಈಗಾಗಲೇ ಜೆಡಿಎಸ್ ಪ್ರಚಾರ ಬಿರುಸುಗೊಂಡು ಕ್ಷೇತ್ರದಲ್ಲಿ ಜೆಡಿಎಸ್ ಸೇರ್ಪಡೆ ಹೆಚ್ಚಾಗುತ್ತಿದೆ. ಸ್ವಯಂ ಪ್ರೇರಿತವಾಗಿ ಕಾರ್ಯಕರ್ತರು ಪಕ್ಷಕ್ಕೆ ಬಂದು ಜೆಡಿಎಸ್ ಪ್ರಚಾರ ನಡೆಸಿದ್ದು, ಅಚ್ಚರಿಯ ರೀತಿ ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಜೆಡಿಎಸ್ ನತ್ತ ಬರುತ್ತಿದ್ದಾರೆ. ಕುಮಾರಣ್ಣ ಅವರ ಆಗಮನದ ಸಮಯದಲ್ಲಿ ಬಿಜೆಪಿ ತೊರೆದ ಪ್ರಮುಖ ಮುಖಂಡ ನಮ್ಮಲ್ಲಿಗೆ ಅಧಿಕೃತ ಸೇರ್ಪಡೆ ಆಗಲಿದ್ದು ಜೆಡಿಎಸ್ ಶಕ್ತಿ ಎರಡು ಪಟ್ಟು ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪಂಚರತ್ನ ಯೋಜನೆ ಬಗ್ಗೆ ಈಗಾಗಲೇ ಪ್ರಚಾರ ಜನಮನ ಗೆದ್ದಿದೆ. ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ರೈತರ ಸಾಲ ಮನ್ನಾ, ಕೃಷಿಗೆ ಮುಂಗಾರು ಪ್ರೋತ್ಸಾಹ ಧನ, ವೃದ್ದಾಪ್ಯ ವೇತನ ಹಾಗೂ ಅಂಗವಿಕಲ ವೇತನ ಹೆಚ್ಚಳ ಜೊತೆಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆ ಜನರ ಮನಸ್ಸಿನಲ್ಲಿ ನಿಂತಿದೆ. ಮಧ್ಯಮ ವರ್ಗದ ಜನರ ಬದುಕು ಅರಿತ ಕುಮಾರಣ್ಣ ಅವರ ಆಗಮನ ನಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಅಬ್ಬರದ ಅಲೆ ಸೃಷ್ಟಿ ಮಾಡಲಿದೆ. ಅಂದಾಜು 35 ಸಾವಿರ ಕಾರ್ಯಕರ್ತರ ಆಗಮನ ಆಗಲಿದೆ ಎಂದ ಅವರು ಕುಮಾರಣ್ಣ ಅವರ ಆಗಮನ ನಂತರ ನಾಮಪತ್ರ ಸಲ್ಲಿಕೆ ಮಾಡಿ, ಮತ್ತೊಂದು ನಾಮಪತ್ರ ಮನೆ ದೇವರ ಪೂಜೆ ಮಾಡಿ ಇದೇ ತಿಂಗಳ 17 ರಂದು ಸಲ್ಲಿಸುತ್ತೇನೆ ಎಂದರು.
ಹಿಂದುಳಿದ ವರ್ಗಗಳ ಆಯೋಗ ಮಾಜಿ ಸದಸ್ಯ ಯೋಗಾನಂದಕುಮಾರ್ ಮಾತನಾಡಿ ಪಂಚರತ್ನ ಯೋಜನೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಬಗ್ಗೆ ತೋರಿದ ಕಾಳಜಿ ಗ್ರಾಮೀಣ ಜನರನ್ನು ಸೆಳೆದಿದೆ. ನಾನು ಕೂಡಾ ಜೆಡಿಎಸ್ ಆದರ್ಶ ಒಪ್ಪಿ ಕಳೆದ 20 ವರ್ಷದಿಂದ ಉಳಿದಿದ್ದೇನೆ. ಮಾಜಿ ಸಚಿವ ವಾಸಣ್ಣ ಅವರ ಆಪ್ತನಾಗಿದ್ದರೂ ಕಾಂಗ್ರೆಸ್ ಗೆ ಹೋಗದೇ ಜೆಡಿಎಸ್ ನಲ್ಲೇ ಉಳಿದೆ. ಆದರೆ ವಾಸಣ್ಣ ಯೋಗಾನಂದ ಅಂದರೆ ಯಾರೋ ಗೊತ್ತಿಲ್ಲ ಅಂದಿದ್ದಾರೆ. ಇರಲಿ ಇದು ನನಗೆ ಆಶೀರ್ವಾದ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕವೀರಯ್ಯ ಮಾತನಾಡಿ ಯಾದವ ಸಮಾಜ ಬಿಜೆಪಿ ನಡೆಗೆ ಬೇಸತ್ತಿದ್ದಾರೆ. ಚಿದ್ರವಾಗಿ ಹೊರಬಂದು ಜೆಡಿಎಸ್ ನತ್ತ ಬರಲಿದ್ದಾರೆ. ಇದು ಕುಮಾರಣ್ಣ ಅವರ ಹವಾ ಎಂದು ಹೇಳಿದರು.
ಮುಖಂಡರಾದ ಸಿದ್ದರಾಮಯ್ಯ, ಗಂಗಾಧರ್, ಆಟೋ ಮಂಜಣ್ಣ ಇತರರು ಇದ್ದರು.