ತುಮಕೂರು : ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್ 18, 2024 ಮತ್ತು ಏ.19ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದ್ದು, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಯನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರೀಕ್ಷಾ ಪೂರ್ವ ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಪರೀಕ್ಷಾ ಕೊಠಡಿಗಳಲ್ಲಿ ಗಾಳಿ-ಬೆಳಕಿನ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ : ಜಿಲ್ಲೆಯಲ್ಲಿ ನಡೆಯುವ ಸಿಇಟಿ ಪರೀಕ್ಷೆಗೆ 9 ತಂಡದ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತ ಅನಧಿಕೃತ ವ್ಯಕ್ತಿಗಳ ಹಾಗೂ ಸಾರ್ವಜನಿಕರ ನಿಷೇಧಕ್ಕೆ ಹಾಗೂ ಹತ್ತಿರದ ಜೆರಾಕ್ಸ್ಅಂಗಡಿಗಳನ್ನು ತೆರೆಯದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‍ಗಳವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಬಿಗಿ ಪೊಲೀಸ್
ಬಂದೋಬಸ್ತ್ ವ್ಯವಸ್ಥೆ ಹಾಗೂ ವಿಶೇಷ ಜಾಗೃತ ದಳ ಸದಸ್ಯರ ನೇಮಕ ಮಾಡಲು ಸೂಚಿಸಿದ ಅವರು, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ, ಹಿರಿಯ ಪ್ರಾಂಶುಪಾಲರುಗಳನ್ನು 25 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಪಾಲಕರನ್ನಾಗಿ ನೇಮಕ ಮಾಡಲು ಹಾಗೂ ಪ್ರತಿ ಪರೀಕ್ಷಾ ಕೊಠಡಿಗೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮತ್ತು ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸೂಚಿಸಿದರು.
ಪರೀಕ್ಷಾರ್ಥಿಗಳಿಗೆ ಸೂಚನೆ: ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಪರೀಕ್ಷಾರ್ಥಿಗಳಿಗೆ ಮೊಬೈಲ್, ಒಡವೆ, ಗಡಿಯಾರ, ಶೂ ಹಾಗೂ ಇನ್ನಿತರೇ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರವೇಶಪತ್ರದಲ್ಲಿ ನೀಡಬೇಕೆಂದು ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಗಂಗಾಧರ್ ಅವರು ಮಾತನಾಡಿ, ಜಿಲ್ಲೆಯ ತುಮಕೂರು ತಾಲ್ಲೂಕಿನಲ್ಲಿ 17 ಪರೀಕ್ಷಾ ಕೇಂದ್ರಗಳು, ತಿಪಟೂರು-3, ಮಧುಗಿರಿ-2, ಶಿರಾ-2 ಹಾಗೂ ಕುಣಿಗಲ್ ತಾಲ್ಲೂಕಿನಲ್ಲಿ 1 ಸೇರಿದಂತೆ ಒಟ್ಟು 25 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತುಮಕೂರು ತಾಲ್ಲೂಕಿನಲ್ಲಿ 6640 ವಿದ್ಯಾರ್ಥಿಗಳು, ತಿಪಟೂರು-1948, ಮಧುಗಿರಿ-1192, ಶಿರಾ-1221 ಹಾಗೂ ಕುಣಿಗಲ್ ತಾಲ್ಲೂಕಿನಲ್ಲಿ 500 ಸೇರಿದಂತೆ ಒಟ್ಟು 11501 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೇರಿದಂತೆ ಮತ್ತಿತರರು ಹಾಜರಿದ್ದರು.