ಕೃತಕ ಬುದ್ದಿಮತೆಯಿಂದ ಹೆಚ್ಚಿನ ಉದ್ಯೋಗ ಸೃಷ್ಠಿ-ಡಾ.ಎಸ್.ಆರ್.ಮಹದೇವ ಪ್ರಸನ್ನ

ತುಮಕೂರು : ಕೃತಕ ಬುದ್ದಿಮತ್ತೆ ಮತ್ತು ಮಿಷನ್ ಲರ್ನಿಂಗ್ ತಂತ್ರಜ್ಞಾನದಿಂದ ನಿರುದ್ಯೋಗ ಹೆಚ್ಚಾಗಲಿದೆ ಎಂಬುದು ತಪ್ಪು ತಿಳುವಳಿಕೆ. ಎಐ ಮತ್ತು ಎಂಎಲ್ನಿಂದ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಐಐಐಟಿ ಧಾರವಾಡದ ನಿರ್ದೇಶಕ ಡಾ.ಎಸ್.ಆರ್.ಮಹದೇವ ಪ್ರಸನ್ನ ತಿಳಿಸಿದರು.

ತುಮಕೂರಿನ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಎಐಸಿಟಿಇ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಎಕ್ಸ್ಪ್ರ್ಲೇರಿಂಗ್ ಎಐ ಅಂಡ್ ಎಂಎಲ್ ಫಾರ್ ಬೆಟರ್ ಟುಮಾರೋ ಎಂಬ ವಿಷಯ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಿದ ಅವರು, 90ರ ದಶಕದಲ್ಲಿ ಕಂಪ್ಯೂಟರ್ ಬಂದಾಗಲೂ ಇದೇ ರೀತಿಯ ಚರ್ಚೆಗಳು ನಡೆದವು. ಆದರೆ ಇಂದು ಅತಿ ಹೆಚ್ಚು ಉದ್ಯೋಗ ಸೃಷ್ಠಿ ಮಾಡುವ ಕ್ಷೇತ್ರಗಳಲ್ಲಿ ಮಾಹಿತಿ ತಂತ್ರಜ್ಞಾನವೂ ಒಂದಾಗಿದೆ. ಹಾಗೆಯೇ ಎಐ ಮತ್ತು ಎಂಎಲ್ ಬಳಕೆಯಿಂದ ಉದ್ಯೋಗ ನಷ್ಟವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಐ ಮತ್ತು ಎಂಎಲ್ ಹಾಗೂ ಕಂಪ್ಯೂಟರ್ ಇಂಜಿನಿರ್ಸ್ ಒಂದಕ್ಕೊಂದು ಪೂರಕವಾಗಿವೆ. ಆದರೆ ಸಾಫ್ಟ್ ವೇರ್್ ಎಂಜಿನಿಯರ್ಗಿಂತ ವೇಗವಾಗಿ ಮತ್ತು ನಿಖರವಾಗಿ ಎಐ ಮತ್ತು ಎಂಎಲ್ ಕೆಲಸ ಮಾಡಲಿವೆ. ಡೆಟಾ ಮಾನ್ಯೇಜ್ಮೆಂಟ್ ಮತ್ತು ಅನಾಲಿಸಿಸ್ನಲ್ಲಿ ಎಐ ಅತ್ಯಂತ ಪ್ರಖರವಾಗಿ ಕಾರ್ಯನಿರ್ವಹಿಸಲಿದೆ. ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಗೊತ್ತಿಲ್ಲದವರು ಕೆಲಸ ಮಾಡುವುದು ಕೊಂಚ ದುಸ್ತರವಾಗಿದೆ. ಆದರೆ ಎಐ ಮತ್ತು ಎಂ ಎಲ್ ಬಳಕೆಯಿಂದ ಸರಾಗವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡಬಹುದು. ಎಐ ಮತ್ತು ಎಂಎಲ್ ವ್ಯಕ್ತಿಯ ಕೋರಿಕೆಯನ್ನು ಅರ್ಥ ಮಾಡಿಕೊಂಡು ಆತನದ್ದೇ ಸ್ಥಳೀಯ ಭಾಷೆಯಲ್ಲಿ ಮಾತನಾಡಿ, ಆತನ ಕೆಲಸವನ್ನು ಸುಲಭಗೊಳಿಸಲಿದೆ. ಇದರಿಂದ ಸಮಯದ ಉಳಿತಾಯದ ಜೊತೆಗೆ, ಕೆಲಸದ ವೇಗವು ಹೆಚ್ಚಲಿದೆ. ಮಧ್ಯವರ್ತಿಯಿಲ್ಲದೆ ಜನಸಾಮಾನ್ಯರು ತಮ್ಮ ದೈನಂದಿನ ಕೆಲಸವನ್ನು ನಿರ್ವಹಿಸಬಹುದಾಗಿದೆ. ಇದರಿಂದ ಭವಿಷ್ಯದ ಸಮಾಜಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದು ತಿಳಿಸಿದರು.

ಡಾ.ಮಹೇಶ್ ಪಂಡಿತ್ ಮಾತನಾಡಿ, ಭಾರತ ಯಂಗ್ಇಂಡಿಯಾ ಮುಂದಿನ 30 ವರ್ಷಗಳ ಕಾಲ ದುಡಿಯುವ ವಯಸ್ಸಿನ ಯುವಕರು ನಮ್ಮಲ್ಲಿದ್ದಾರೆ. ಅಲ್ಲದೆ ತಂತ್ರಜ್ಞಾನದ ಭಾರತ ಮತ್ತು ಹಲವಾರು ಕೊರತೆಗಳನ್ನು ಎದುರಿಸುತ್ತಿರುವ ಭಾರತ. ಇಂತಹ ಭಾರತ ಎಐ ಮತ್ತು ಎಂಎಲ್ ಬಳಕೆಯಿಂದ ಸದೃಢ ಭಾರತವಾಗಿ ಬದಲಾಗಲು ಸಾಧ್ಯವಿದೆ. ಇದಕ್ಕಾಗಿ ನಾವು ಕೈಗಾರಿಕೆಗಳ ಅಗತ್ಯತೆ ಮತ್ತು ಶಿಕ್ಷಣದ ನಡುವಿನ ಕೊರತೆಯನ್ನು ನೀಗಿಸಬೇಕಿದೆ. ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಆಗಬೇಕು. ಯುವಜನರು ಯಾವುದೇ ವಿಚಾರದ ಬಗ್ಗೆ ಕುತೂಹಲ ಬೆಳೆಸಿಕೊಳ್ಳಬೇಕು. ತಮಗೆ ಸಿಗುವ ಮಾಹಿತಿಯನ್ನು ತುಲಾನಾತ್ಮಕವಾಗಿ ಅಧ್ಯಯನ ಮಾಡಬೇಕು. ಒಳ್ಳೆಯ ಸಂಪರ್ಕದ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.

ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶ್ರಿವಕುಮಾರಯ್ಯ, ಸಂಯೋಜಕಿ ಮಮತ ಎಂ., ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ,ನಂಜುಂಡಪ್ಪ, ಪ್ರಾಂಶುಪಾಲ ಡಾ.ನಿಜಲಿಂಗಪ್ಪ, ಗಣಕ ಯಂತ್ರ ವಿಭಾಗದ ಮುಖ್ಯಸ್ಥ ಕೆ.ಎಸ್. ಲಿಂಗದೇವರಪ್ಪ, ಡಾ.ಹೇಮಲತಾ ಇದ್ದರು.

Leave a Reply

Your email address will not be published. Required fields are marked *