ಪಕ್ಷ ತಾಯಿ ಇದ್ದಂತೆ, ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡಬೇಡಿ-ಡಾ.ಜಿ.ಪರಮೇಶ್ವರ್

ತುಮಕೂರು: .ಪಕ್ಷದಿಂದ ನಿಮಗೆ ತೊಂದರೆಯಾಗಿದ್ದರೆ ಬಿಟ್ಟು ಹೋಗಿ,ನಿಮ್ಮಂತಹ ಹತ್ತು ಜನ ನಾಯಕರು ಹುಟ್ಟಿಕೊಳ್ಳುತ್ತಾರೆ.ಆದರೆ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡಬೇಡಿ, ಇದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು

ನಗರದ ಗುಬ್ಬಿ ರಿಂಗ್ ರಸ್ತೆಯ ಅಶ್ವಿನಿ ಆಯುರ್ವೇಧ ಕಾಲೇಜು ಎದುರು ನಿರ್ಮಿಸಿರುವ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರಿಗೆ ಪಕ್ಷ ತಾಯಿ ಇದ್ದಂತೆ. ತಾಯಿಗೆ ದ್ರೋಹ ಬಗೆಯುವವರ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು, ಇಂದು ಪಕ್ಷ ಕಷ್ಟದಲ್ಲಿದೆ.ಹಾಗೆಂದ ಮಾತ್ರಕ್ಕೆ, ಅದನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಕೆಲಸವನ್ನು ಕಾರ್ಯಕರ್ತರು, ಮುಖಂಡರು ಮಾಡಬಾರದು, ಪಕ್ಷದಲ್ಲಿದ್ದುಕೊಂಡೇ ಪಕ್ಷವಿರೋಧಿ ಚಟುವಟಿಕೆ ನಡೆಸಿದರೆ, ಅದಕ್ಕಿಂತ ಮಹಾಪರಾಧ ಮತ್ತೊಂದಿಲ್ಲ ಎಂದರು.

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರಪಾಲಿಕೆಗಳ ಚುನಾವಣೆ ಬಾಗಿಲಲ್ಲಿವೆ.ಇಂತಹ ವೇಳೆ ನಾವು ಪಕ್ಷವನ್ನು ಬಲಪಡಿಸಿ,ನಮ್ಮೆಲ್ಲಾ ಭಿನ್ನಮತಗಳನ್ನು ಬದಿಗಿಟ್ಟು ಹೋರಾಟಕ್ಕೆ ಇಳಿಯದಿದ್ದರೆ ನಮಗಿಂತ ದಡ್ಡರು ಮತ್ತೊಬ್ಬರಿಲ್ಲ.ನಮ್ಮ ಮನೆಯ ಹುಳುಕನ್ನು ಬೀದಿಗೆ ತರುವುದು ಬೇಡ.ಸಾಧ್ಯವಾದಷ್ಟು ಮನೆಯ ಒಳಗೆ ಬಗೆಹರಿಸಿ ಕೊಳ್ಳೋಣ,ಪಕ್ಷ ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಲಿ ಅವರ ಪರವಾಗಿ ಕೆಲಸ ಮಾಡಿ, ಸ್ವತಂತ್ರವಾಗಿ ತುಮಕೂರು ನಗರಪಾಲಿಕೆ ಸೇರಿದಂತೆ, ನಗರಸಭೆ,ಜಿಲ್ಲಾ ಪಂಚಾಯಿತಿ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ಹಿಡಿಯುವಂತೆ ಮಾಡುವ ಗುರಿ ನಮ್ಮದಾಗಿರಲಿ.ಮಹಿಳೆಯರಿಗೆ ಶೇ೫೦ರಷ್ಟು ಮೀಸಲಾತಿ ಇದೆ.ನೀವು ಹೆಚ್ಚು ಸಕ್ರಿಯರಾಗಿ,ವಿರೋಧಪಕ್ಷಗಳ ಟೀಕೆಗಳಿಗೆ ಸರಿಯುತ್ತರ ನೀಡಿ, ಜನರಿಗೆ ಪಕ್ಷದ ಕಾರ್ಯಕ್ರಮಗಳನ್ನು ಮನವರಿಕೆ ಮಾಡಿಕೊಡಿ ಎಂದು ಗೃಹ ಸಚಿವರು ಸಲಹೆ ನೀಡಿದರು.

ಸರಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಕಳೆದಿದೆ.ರಾಜ್ಯದಲ್ಲಿರುವ ಸುಮಾರು ೧೨೧೬ ವಿವಿಧ ನಿಗಮ ಮಂಡಳಿಗಳ ನಿರ್ದೇಶಕರ ಸ್ಥಾನಕ್ಕೆ ೧೫ ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ.ಶಾಸಕರು, ಸ್ಥಳೀಯ ಮುಖಂಡರ ಸಲಹೆ ಪಡೆದು ಸೆಪ್ಟಂಬರ್ ಅಂತ್ಯದ ಒಳಗೆ ಎಲ್ಲಾ ನಿಗಮ ಮಂಡಳಿಗಳ ನಿರ್ದೇಶಕರುಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆಯ ಅಗತ್ಯವಿದೆ. ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ ಕಾರ್ಯಕರ್ತರು ಕೆಲಸ ಮಾಡಿದ್ದಾರೆ.ಆದರೂ ಕೆಲವೊಂದು ಕಾರಣಗಳಿಗೆ ಸೋಲಾಗಿದೆ.ಅದನ್ನು ಮರೆತು ಮುಂದಿನ ಚುನಾವಣೆಗಳ ಗೆಲುವಿಗೆ ಪಣ ತೊಟ್ಟು ಕೆಲಸ ಮಾಡಬೇಕಿದೆ.ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳ ಮೇಲಿನ ಗೌರವ ಜನರಿಗೆ ಕಡಿಮೆಯಾಗುತ್ತಿದೆ. ಇದಕ್ಕೆ ಇತ್ತೀಚಿಗೆ ನಾಗಮಂಗಲ ಗಣೇಶ ಉತ್ಸವದ ವೇಳೆ ಆದ ಘಟನೆ ಕುರಿತು ನಾಯಕರಗಳ ಹೇಳಿಕೆಯೇ ಸಾಕ್ಷಿಯಾಗಿದೆ.ಮಾಜಿ ಮುಖ್ಯಮಂತ್ರಿಯೊಬ್ಬರು ಘಟನೆಯ ಕುರಿತು ಸಲಹೆ ನೀಡುವಂತಿದ್ದರೆ ಒಳ್ಳೆಯದೇ, ಆದರೆ ಅದನ್ನು ಬಿಟ್ಟು ತೇಜೋವಧೆಗೆ ಇಳಿಯುವುದು ತರವಲ್ಲ. ಅದು ಅವರಿಗೆ ಶೋಭೆ ತರುವುದು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ. ಹೇಳಿಕೆಯನ್ನು ಖಂಡಿಸಿದರು.

ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಚಂದ್ರಶೇಖರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಾವಗಡ ಶಾಸಕರಾದ ವಿ.ವೆಂಕಟೇಶ್,ಮಾಜಿ ಶಾಸಕರಾದ ಎಸ್.ಷಪಿ ಅಹಮದ್,ಗಂಗಹನುಮಯ್ಯ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಎಸ್.ರಫೀಕ್ ಅಹಮದ್,ಮುಖಂಡರಾದ ಮುರುಳೀಧರ ಹಾಲಪ್ಪ,ಇಕ್ಬಾಲ್ ಅಹಮದ್, ಜಿ.ಪಂ.ಮಾಜಿ ಸದಸ್ಯರಾದ ಹೆಚ್. ಕೆಂಚಮಾರಯ್ಯ,ಷಣ್ಮುಖಪ್ಪ, ಸುಲ್ತಾನ್ ಅಹಮದ್, ಗೋವಿಂದರಾಜು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾರಾಜಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *