ನಗರ ಕ್ಷೇತ್ರದ ಮಾಹಿತಿ ಕಲೆ ಹಾಕಿದ್ದೇನೆ ಜಮೀರ್ ಅಹಮದ್ ಹೇಳಿಕೆಗೆ-ಆತೀಕ್ ಅಹಮದ್ ಅಕ್ರೋಶ

ತುಮಕೂರು:ತುಮಕೂರು ನಗರ ವಿಧಾನಸಭಾ ಕ್ಷೇತ್ರದ ವ್ಯಕ್ತಿಯೊಬ್ಬರ ಮನೆಗೆ ಆಗಮಿಸಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡರ ಜಮೀರ್ ಅಹಮದ್,ಮಾಧ್ಯಮಗಳಿಗೆ ನಾನು ನಗರ ಕ್ಷೇತ್ರದ ಮಾಹಿತಿ ಕಲೆ ಹಾಕಿದ್ದೇನೆ ಎಂದು ಹೇಳುವ ಮೂಲಕ ಕ್ಷೇತ್ರದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಅಕ್ರೋಶ ಹೊರ ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಬಗ್ಗೆ ಮಾಹಿತಿ ಕಲೆ ಹಾಕಲು ಜಮೀರ್ ಅಹಮದ್ ಅವರಿಗೆ ಅಧಿಕಾರ ನೀಡಿದವರು ಯಾರು ? ಅವರಿಗೆ ಈ ಅಧಿಕಾರ ನೀಡಿದವರು ಯಾರು? ಎಂದು ಪ್ರಶ್ನಿಸಿರುವ ಅತೀಕ್ ಅಹಮದ್,ಪಕ್ಷದ ಆಗು ಹೋಗುಗಳನ್ನು ನೋಡಿಕೊಳ್ಳಲು ಜಿಲ್ಲಾಧ್ಯಕ್ಷರಿದ್ದಾರೆ.ಹಿರಿಯ ಮುಖಂಡರುಗಳಾದ ಡಾ.ಜಿ.ಪರಮೇಶ್ವರ್,ಟಿ.ಬಿ.ಜಯಚಂದ್ರ,ಕೆ.ಎನ್.ರಾಜಣ್ಣ,ರಾಜ್ಯ ನಾಯಕರಾದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿದ್ದಾರೆ.ಅವರೆಲ್ಲರನ್ನು ಹೊರತು ಪಡಿಸಿ, ಪಕ್ಷದ ಮಾಹಿತಿ ಪಡೆಯಲು ಜಮೀರ್ ಅಹಮದ್ ಅವರಿಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದರು.

ತುಮಕೂರು ನಗರದಲ್ಲಿ ಹಿಂದು,ಮುಸ್ಲಿಂರು ಅಣ್ಣ ತಮ್ಮಂದಿರಂತೆ ಬದುಕುತಿದ್ದೇವೆ.ಆಟಿಕಾ ಬಾಬು ಎಂಬ ವ್ಯಕ್ತಿ ಜೆಡಿಎಸ್ ಪಕ್ಷದಿಂದ ಹಾನಗಲ್‍ನಲ್ಲಿ ಸ್ಪರ್ಧಿಸಿ, ಠೇವಣಿಯನ್ನು ಪಡೆದಿಲ್ಲ.ಈಗ ಬಂದು ತುಮಕೂರು ನಗರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರು ಮತ್ತು ಜಮೀರ್ ಅಹಮದ್ ನಡುವೆ ಸ್ನೇಹವಿದ್ದರೆ ಸಂತೋಷ.ಆದರೆ ಪಕ್ಷದ ವಿಚಾರವನ್ನು ಚರ್ಚಿಸಲು ಇವರಿಗೆ ಅಧಿಕಾರ ನೀಡಿದವರು ಯಾರು ?, ಜಮೀರ್ ಅಹಮದ್ ಅವರ ಈ ನಡೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲ ಉಂಟು ಮಾಡಿದೆ.ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ಕುರಿತು ಹೈಕಮಾಂಡ್ ಜಮೀರ್ ಅಹಮದ್ ಅವರಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ಈಗಾಗಲೇ ನಮ್ಮ ಜಿಲ್ಲಾಧ್ಯಕ್ಷರು ಆಟಿಕಾ ಬಾಬು ಅವರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಅವರು ಟಿಕೇಟ್‍ಗಾಗಿ ಅರ್ಜಿ ಸಲ್ಲಿಸಿಲ್ಲ. ಆಕಾಂಕ್ಷಿಗಾಗಿ ನಾವು 7 ಜನರು ಮಾತ್ರ ಅರ್ಜಿ ಸಲ್ಲಿಸಿದ್ದೇವೆ.ನಮ್ಮನ್ನು ಹೊರತು ಪಡಿಸಿ, ಹೊರಗಿನವರಿಗೆ ಟಿಕೇಟ್ ನೀಡಿದರೆ ಇಡೀ ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪೆಟ್ಟಾಗಲಿದೆ.ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುವುದು ಖಂಡಿತ. ಇದನ್ನು ಹೈಕಮಾಂಡ್ ಕೂಡ ಅರ್ಥಮಾಡಿಕೊಳ್ಳಬೇಕೆಂದು ಆತೀಕ್ ಅಹಮದ್ ಮನವಿ ಮಾಡಿದರು.

ನಾವು ಹತ್ತಾರು ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ.ಪಕ್ಷದ ನೀಡಿದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ನಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ.ಜಮೀರ್ ಅಹಮದ್ ಜೊತೆ ಸೇರಿ ಕೆಲವರು ತುಮಕೂರು ನಗರದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಕಾಂಗ್ರೆಸ್ ಮುಖಂಡರೇ ತೆರೆ ಮೆರೆಯ ಪ್ರಯತ್ನ ನಡೆಸುತಿದ್ದಾರೆ.ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ.ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದು ಅತೀಕ್ ಅಹಮದ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ಪಾಷ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *