ತುಮಕೂರು : ನನ್ನ ಹತ್ಯೆಗೆ ಸುಫಾರಿ ನೀಡಲಾಗಿತ್ತು ಎಂದು ವಿಧಾನಪರಿಷತ್ ಸದಸ್ಯರಾದ ಆರ್.ರಾಜೇಂದ್ರ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರು.
ಕಳೆದ ನವೆಂಬರ್ ತಿಂಗಳಿನಲ್ಲಿ ನನ್ನ ಮಗಳ ಹುಟ್ಟು ಹಬ್ಬದ ಸಂದರ್ಭದಲ್ಲಿ ಶಾಮಿಯಾನ ಹಾಕುವ ನೆಪದಲ್ಲಿ ಬಂದಿದ್ದ ಕೆಲವರು ನನ್ನ ಹತ್ಯೆ ಮಾಡಲು ಸಫಾರಿ ಪಡೆದಿದ್ದರು ಎಂಬುದು ಪೋನ್ ಸಂಭಾಷಣೆ ಲಭ್ಯವಾಗಿದ್ದು, ಇದನ್ನು ಸಮಗ್ರ ತನಿಖೆ ನಡೆಸಬೇಕೆಂದು ವಿಧಾನ ಪರಿಷತ್ ಸದಸ್ಯರು ಹಾಗೂ ಸಹಕಾರಿ ಸಚಿವರ ಪುತ್ರನೂ ಆಗಿರುವ ಆರ್.ರಾಜೇಂದ್ರ ಅವರು ಇಂದು ಎಸ್ಪಿಗೆ ದೂರು ನೀಡಿದರು.
ಮಾರ್ಚ್ 27ರಂದು ಈ ಸಂಬಂಧ ಬೆಂಗಳೂರಿನಲ್ಲಿ ಡಿಜಿರವರಿಗೆ ದೂರು ನೀಡಿದ್ದ ರಾಜೇಂದ್ರ ಅವರು, ಇಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರಿಗೆ ದೂರು ನೀಡಿದ್ದು, ದೂರಿನಲ್ಲಿ ಯಾರೊಬ್ಬರ ಹೆಸರು, ದೂರವಾಣಿ ಸಂಖ್ಯೆ ನಮೂದಿಸಿಲ್ಲ, ಪೆನ್ ಡ್ರೈವ್ ಒಂದನ್ನು ದೂರಿನ ಪ್ರತಿಯೊಂದಿಗೆ ನೀಡಿದ್ದಾರೆ.
ದೂರು ಸ್ವೀಕರಿಸಿದ ಎಸ್ಪಿ ಅವರು ರಾಜೇಂದ್ರ ಅವರ ಜೊತೆ ಘಟನೆಯ ಬಗ್ಗೆ ಕೆಲ ಕಾಲ ಚರ್ಚಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಜೇಂದ್ರ ಅವರು ನನ್ನ ಮೇಲೆ ಹನಿಟ್ರಾಫ್ ನಡೆದಿಲ್ಲ ಆದರೆ ಪೋನ್ ಕರೆಯ ಮೂಲಕ ಹತ್ಯೆ ಯತ್ನ ನಡೆದಿರುವುದು ಗಮನಕ್ಕೆ ಬಂದಿದೆ, ಕೊಲೆಗೆ 5ಲಕ್ಷ ರೂ.ಗಳನ್ನು ಪಡೆದಿರುವುದು ದೂರವಾಣಿಯ ಸಂಭಾಷಣೆಯ ಮೂಲಕ ತಿಳಿದಿದೆ ಎಂದು ತಿಳಿಸಿದರು.
ತುಮಕೂರಿನ ಇಬ್ಬರ ಬ್ಯಾಂಕ್ ಖಾತೆಗೆ 5ಲಕ್ಷ ಸಫಾರಿ ಕೊಲೆಗೆ ಹಣ ಹಾಕಲಾಗಿದೆ, ಈ ಸಂಬಂಧ ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಮಾಹಿತಿ ನೀಡಿದಾಗ ಡಿಜಿಯವರಿಗೆ ದೂರು ನೀಡುವಂತೆ ತಿಳಿಸಿದ್ದರು, ಈ ಸಂಬಂಧ ಡಿಜಿಯವರಿಗೆ ದೂರು ನೀಡಿದಾಗ ಡಿಜಿಯವರು ತುಮಕೂರು ಎಸ್ಪಿಗೆ ದೂರು ನೀಡು ಎಂದು ಸೂಚಿಸಿದ ಹಿನ್ನಲೆಯಲ್ಲಿ ಇಂದು ದೂರು ನೀಡಿದ್ದೇನೆ ಎಂದು ತಿಳಿಸಿದರು.