ಆತ್ಮಕಥೆ ಆತ್ಮರತಿಯಾಗಬಾರದು: ಪ್ರೊ. ಎಸ್. ಜಿ. ಸಿದ್ದರಾಮಯ್ಯ

ತುಮಕೂರು: ನಮನ್ನು ನಾವು ಜಗತ್ತಿಗೆ ತೆರೆದಿಡುವ ನೈತಿಕ ಕ್ರಮವೇ ಆತ್ಮಕಥೆಯಾದ್ದರಿಂದ ಆತ್ಮವಿಮರ್ಶೆಯ ಮುಖೇನ ಆತ್ಮಕಥೆಯನ್ನು ರಚಿಸಬೇಕೆ ಹೊರೆತು ಆತ್ಮರತಿಯಾಗಬಾರದು ಎಂದು ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಹೇಳಿದರು.

ತುಮಕೂರು ವಿವಿಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಮಂಗಳವಾರ ಆಯೋಜಿಸಿದ್ದ ಪ್ರೊ.ಎಸ್. ಜಿ. ಸಿದ್ದರಾಮಯ್ಯ ಅವರ ಆತ್ಮಕಥನ ‘ಯರೆಬೇವು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆತ್ಮಕಥೆಗಳು ಸಮಾಜದ ಏಣಿ ಶ್ರೇಣಿಗಳು, ಅವಮಾನಗಳು, ದುಗುಡ-ದುಮ್ಮಾನಗಳ ಜೊತೆಗೆ ಆ ಕಾಲಘಟ್ಟದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿನ್ನೆಲೆಗಳ ಕೈಗನ್ನಡಿಯಾಗಿವೆ. ಬಾಳಕಥನ ಎಂಬುದು ರೂಪಕವಿದ್ದಂತೆ, ಪಾರದರ್ಶಕತೆಯಿಂದ ಕೂಡಿದ ಆತ್ಮಕಥೆ ಮಾತ್ರ ಶ್ರೇಷ್ಠವಾದದ್ದು ಎಂದರು.

ಹಿರಿಯ ಸಾಹಿತಿಗಳಾದ ಪಿ. ಲಂಕೇಶ್, ಗಿರೀಶ್ ಕಾರ್ನಾಡ್, ಶ್ಯಾಮರಾಯರು, ಕುವೆಂಪು, ಶಿವರಾಮ ಕಾರಂತರ ಆತ್ಮಕಥೆಗಳು ನೈಜ ಭಾವವನ್ನು ಹೊಂದಿವೆ. ಬರೆಹಕ್ಕೆ ವಸ್ತುವಾಗುವಂತೆ ಬದುಕಬೇಕೆಂಬ ಪರಿಕಲ್ಪನೆಯಲ್ಲಿ ಅನೇಕ ಮಹಿಳಾ ಸಾಹಿತಿಗಳ ಉತ್ಕøಷ್ಟ ಆತ್ಮಕಥಾನಕಗಳು ಬಂದಿವೆ. ಸಾಲು ಮರದ ತಿಮ್ಮಕ್ಕ, ಮಾಟಗಾನಹಟ್ಟಿಯ ದಾಸಪ್ಪನಂತಹ ಅದೆμÉ್ಟೂೀ ಅನಾಮಧೇಯ ಆತ್ಮಕಥೆಗಳನ್ನು ನಾವಿಂದು ಕಟ್ಟಬೇಕಿದೆ ಎಂದರು.

ನಮ್ಮ ಪುರಾಣಗಳಲ್ಲಿ ಬರುವ ಮಹಿಳಾ ಪಾತ್ರಗಳಾದ ಸೀತೆ, ಉರ್ಮಿಳಾ, ಶಾಂತ, ಅಂಬೆ, ಅಂಬಿಕೆ, ಅಂಬಾಲಿಕೆ, ಕುಂತಿ, ಭಾನುಮತಿಯರು ಆತ್ಮಕಥನವನ್ನು ಬರೆದಿದ್ದರೆ ಅವರ ತುಡಿತ ಮಿಡಿತಗಳು, ಆ ಕಾಲಘಟ್ಟದ ಸತ್ಯ ಕಥೆಗಳನ್ನು ಬಿಚ್ಚಿಡುತ್ತಿದ್ದವು. ಅದ್ದರಿಂದ ವಿದ್ಯಾರ್ಥಿಗಳು ಆತ್ಮಕತೆಗಳಲ್ಲಿನ ಸೂಕ್ಷ್ಮತೆಯನ್ನು ಗ್ರಹಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

‘ಯರೆಬೇವು’ ಆತ್ಮಕಥೆಯು ನನ್ನ ಕಾಲಘಟ್ಟದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯನ್ನು ಕಟ್ಟಿಕೊಡುತ್ತದೆ. ಬಾಲ್ಯದ ಗೆಳೆಯರ ಅನುಭವ, ಗ್ರಾಮೀಣ ಸೊಗಡಿನ ಚಿತ್ರಣಗಳನ್ನು ಕಟ್ಟಿಕೊಡುತ್ತದೆ ಎಂದು ತಿಳಿಸಿದರು.

ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಪದವಿಯ ಜೊತೆಗೆ ಸಾಹಿತ್ಯ ಜ್ಞಾನವಿದ್ದಾಗ ಸಮಾಜಮುಖಿ ಕಾರ್ಯಗಳಲ್ಲಿ ಆಸಕ್ತಿ ಬೆಳೆಯುತ್ತದೆ. ಉತ್ತಮ ಆಲೋಚನೆಗಳು, ಚಿಂತನೆಗಳು ಸ್ಫುಟಿಸಬೇಕಾದರೆ ಸುತ್ತಲಿನ ಪರಿಸರ ಸಹಕರಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪೆÇ್ರ. ನಿತ್ಯಾನಂದ ಬಿ. ಶೆಟ್ಟಿ, ವಿದ್ಯಾರ್ಥಿಗಳಿಗೆ ಸಮಾಜದ ಸಮಸ್ಯೆಗಳ ಕುರಿತು ಬರೆಯಬೇಕೆಂಬ ತುಡಿತವಿರುತ್ತದೆ. ಅವರ ಬರೆಹಗಳನ್ನು ಸರಿಯಾದ ಕ್ರಮದಲ್ಲಿ ಸೇರಿಸಿ, ಸಮಗ್ರವಾಗಿಸುವ ಕಲ್ಪನೆಯನ್ನು ಆತ್ಮಕಥೆಗಳು ನೀಡುತ್ತವೆ ಎಂದರು.

ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *