ತುಮಕೂರು : ಗೋವಿಂದರಾಜ ನಗರದಿಂದ ವರುಣ, ಚಾಮರಾಜನಗರ ದಲ್ಲಿ ಸೋತ ನಂತರ ಈಗ ತುಮಕೂರಿಗೆ ಬಂದು ನಿಂತಿರುವ ಟೂರಿಂಗ್ ಟಾಕೀಸ್ ಅಭ್ಯರ್ಥಿಗಳನ್ನು ದೂರ ಇಡಬೇಕು ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಹೇಳಿದರು.
ಅವರು ತುಮಕೂರಿನ ಎಲ್ಲಾಪುರದಲ್ಲಿ ನಡೆದ ಕಾಂಗ್ರೆಸ್ಸಿನ ಪ್ರಜಾ ಧ್ವನಿ-2 ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬಿಜೆಪಿ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಆಗಿದ್ದು ಬಂಧಾನದಿಂದ ಮದುವೆಯಾಗಿದ್ದಾರೆ, ಬಿಎಸ್ ಯಡಿಯೂರಪ್ಪನವರ ವಿರುದ್ಧ ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪನವರು ಅಪ್ಪ ಮಕ್ಕಳನ್ನು ದೂರ ಇಡಬೇಕು ಎಂದು ಹೇಳಿದ್ದರು, ದೇವೇಗೌಡರು ಯಡಿಯೂರಪ್ಪನವರಿಗೆ ಬಾಸ್ಟರ್ಡ್ ಎಂದು ಬೈದಿದ್ದರೂ ಈಗ ಅಂತಹವರ ಜೊತೆ ಹೋಗಿ ಮೈತ್ರಿ ಅನ್ನು ಮಾಡಿಕೊಂಡಿರುವುದಕ್ಕೆ ಏನು ಹೇಳಬೇಕು ಎಂದರು.
ಟೂರಿಂಗ್ ಟಾಕೀಸ್ ಅಭ್ಯರ್ಥಿಗಳನ್ನು ದೂರ ಇಟ್ಟು, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕೆ. ಏನ್ ರಾಜಣ್ಣನವರು ಮನವಿ ಮಾಡಿದರು.
ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಮಾತನಾಡಿ ಈ ಚುನಾವಣೆ ಈ ದೇಶದ ಭವಿಷ್ಯದ ಚುನಾವಣೆಯಾಗಿದ್ದು, ಇದು ಮುಂದಿನ ಪೀಳಿಗೆಯ ಚುನಾವಣೆಯು ಆಗಿರುತ್ತದೆ ಈ ನೆಲೆಯಲ್ಲಿ ಜನಪರ ಬಡವರ ಪರ ದಲಿತರ ಪರ ಹಿಂದುಳಿದವರ ಪರವಾಗಿ ಸರ್ಕಾರ ಹಸಿದವರ ಹೊಟ್ಟೆ ತುಂಬಿಸದಂತ ಸರ್ಕಾರ ಕಿತ್ತೊಗೆಯಬೇಕಾಗಿದೆ, 2014ರಲ್ಲಿ ಭಾರತದ ಹಸುವಿನ ಸೂಚಂಕ ಅಂತರಾಷ್ಟ್ರೀಯ ಮಟ್ಟದಲ್ಲಿ 55ನೇ ಸ್ಥಾನದಲ್ಲಿತ್ತು, ಹತ್ತು ವರ್ಷಗಳ ನಂತರ ಹಸಿವಿನ ಸೂಚ್ಯಂಕ 111 ಸ್ಥಾನಕ್ಕೆ ಬಂದಿದೆ ಅಂದರೆ ಬಡವರನ್ನು ಮತ್ತಷ್ಟು ಹಸಿವಿನ ಕಡೆಗೆ ದೂಡಿದ್ದಾರೆ ಎಂದರ್ಥ ಎಂದರು.
ಒಕ್ಕೂಟದ ವ್ಯವಸ್ಥೆಯನ್ನು ಹಾಳುಮಾಡಲು ಹೊರಟಿರುವ ಕೇಂದ್ರ ಸರ್ಕಾರವು ರಾಜ್ಯಗಳನ್ನು ಕಡೆಗಣಿಸುತ್ತ ಇದೆ ಇಂತಹ ಸರ್ಕಾರವನ್ನು ಕಿತ್ತೊಗೆಯುವ ಕಾಲ ಬಂದಿದ್ದು, ಕಾಂಗ್ರೆಸ್‍ಗೆ ಮತ ನೀಡುವಂತೆ ಮನವಿ ಮಾಡಿದರು. ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದರೆ ಆದಾಯವನ್ನು ಮುಸ್ಲಿಮರಿಗೆ ಕೊಡುತ್ತಾರೆ, ತಾಳಿ ಕಿತ್ತು ಕೊಡುತ್ತಾರೆ ಎಂಬ ಮಾತುಗಳು ಪ್ರಧಾನಿಯ ಬಾಯಲ್ಲಿ ಬರಬಹುದೇ ಎಂದು ಪ್ರಶ್ನಿಸಿದರು.
ಹೊರಗಿಂದ ಬಂದವರು ತುಮಕೂರನ್ನು ಅಭಿವೃದ್ಧಿ ಮಾಡುವುದಿಲ್ಲ, ತುಮಕೂರಿಗೆ ಅವರ ಕೊಡುಗೆ ಏನು ಇಲ್ಲ ತುಮಕೂರಿನ ಅಭಿವೃದ್ಧಿಗೋಸ್ಕರ ಕಾಂಗ್ರೆಸ್ಸಿಗೆ ಮತ ನೀಡುವಂತೆ ಪರಮೇಶ್ವರ್ ಅವರು ಮನವಿ ಮಾಡಿದರು.
ಚಿನ್ನದ ಮೊಟ್ಟೆ
ಪ್ರಾಸ್ತವಿಕವಾಗಿ ಮಾತನಾಡಿದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರು, ನಮ್ಮ ಸರ್ಕಾರ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದ್ದು, ಕೋಳಿ ಕೋಯ್ದರೆ ಚಿನ್ನದ ಮೊಟ್ಟೆನೂ ಸಿಗಲ್ಲ, ಕೋಳಿನೂ ಇರುವುದಿಲ್ಲ, ಆದ್ದರಿಂದ ಪ್ರತಿ ತಿಂಗಳೂ ಗ್ಯಾರಂಟಿಗಳಿಂದ ಚಿನ್ನದ ಮೊಟ್ಟೆ ಇಡುವ ಕೋಳಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದರು.
ವೇದಿಕೆ ಹತ್ತದ ಮುದ್ದಹನುಮೇಗೌಡರು
ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ವೇದಿಕೆ ಹತ್ತಲಿಲ್ಲ. ವೇದಿಕೆಯ ಕೆಳಭಾಗದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರ ಸಭೆ ಹಾಗೂ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುದ್ದಹನುಮೇಗೌಡ ಅವರು ವೇದಿಕೆ ಏರಿ ಪ್ರಚಾರ ಮಾಡಿದರೆ ಕಾರ್ಯಕ್ರಮದ ಖರ್ಚುವೆಚ್ಚ ಅವರ ಚುನಾವಣೆ ಲೆಕ್ಕಕ್ಕೆ ಬರುತ್ತದೆ. ಹಾಗಾಗಿ ವೇದಿಕೆ ಹತ್ತದೆ ಕೆಳಗೆ ಜನರ ಮಧ್ಯೆ ಕುಳಿತತಿದ್ದರು.