ಕ್ರೌರ್ಯದ ವಿರುದ್ಧ ಜಾಗೃತಿ ಮೂಡಿಸಬೇಕಿದೆ

ತುಮಕೂರು : ಸಮಾಜದಲ್ಲಿ ವಿದ್ಯಾವಂತರು ಹೆಚ್ಚಿದಂತೆ ಕ್ರೂರ ಮನಸ್ಸುಗಳು ಹೆಚ್ಚುತ್ತಿವೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ವಿವಿಧ ಸ್ವರೂಪ ಪಡೆದುಕೊಳ್ಳುತ್ತಿವೆ. ನಾಗರಿಕರಾದ ನಾವು ಇಂತಹ ದೌರ್ಜನ್ಯಗಳನ್ನು ಮೆಟ್ಟಿನಿಲ್ಲುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ದಾಕ್ಷಾಯಿಣಿ ಅವರು ಕರೆ ನೀಡಿದರು.

ತುಮಕೂರು ವಿಶ್ವವಿದ್ಯಾನಿಲಯ ಸಮಾಜ ಕಾರ್ಯ ವಿಭಾಗ, ತುಮಕೂರು ನಗರ ಸಾಂತ್ವನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪ್ರಶಿಕ್ಷಣಾರ್ಥಿಗಳ ಅವಲೋಕನ ಭೇಟಿ, ಸಮಾಲೋಚನಾ ಮಾರ್ಗಗಳು ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಮೇಲೆ ವರ್ಷದಿಂದ ವರ್ಷಕ್ಕೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳಲ್ಲಿ ವರದಕ್ಷಿಣೆಯೂ ಒಂದಾಗಿದೆ. ಹೆಣ್ಣು ಹೆತ್ತವರು ಮಗಳನ್ನು ವಿವಾಹ ಮಾಡಿಸಬೇಕಾದರೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಊಹಿಸಿದರೆ ವರದಕ್ಷಿಣೆಯ ಗಂಭೀರತೆ ಅರ್ಥವಾಗುತ್ತದೆ. ಹಣದ ರೂಪದಲ್ಲಿ ಕೊಡುವುದಷ್ಟೇ ವರದಕ್ಷಿಣೆಯಾಗುವುದಿಲ್ಲ. ಖರ್ಚು ಸೇರಿದಂತೆ ವರನ ಕಡೆಯವರು ಕೇಳಿದ್ದನ್ನೆಲ್ಲಾ ಈ ವ್ಯಾಖ್ಯಾನಗಳಲ್ಲಿ ಬರುತ್ತದೆ. ವಿದ್ಯಾರ್ಥಿ ಹಂತವನ್ನು ಮುಗಿಸಿ ಬದುಕಿನ ಘಟಕ್ಕೆ ಬಂದಾಗ ವಿದ್ಯಾರ್ಥಿಗಳು ವರದಕ್ಷಿಣೆ ವಿರೋಧಿ ಮನೋಭಾವ ರೂಪಿಸಿಕೊಂಡು ಕೌಟುಂಬಿಕ ಸಾಮರಸ್ಯ ಕಾಪಾಡಿಕೊಳ್ಳಲು ಶ್ರಮಿಸಬೇಕಾಗಿದೆ ಎಂದರು.

ವಿವಾಹವಾಗುವ ಮುನ್ನ ನಾಲ್ಕಾರು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಏಕೆಂದರೆ, ಭವಿಷ್ಯದ ಬದುಕು ನಿಮ್ಮದಾಗುವುದರಿಂದ ಸ್ವಲ್ಪ ಎಡವಟ್ಟುಗಳಾದರೂ ಜೀವನ ಪೂರ್ತಿ ಸಂಕಟಪಡಬೇಕು. ಬಹಳಷ್ಟು ಜನ ಆತುರದಲ್ಲಿ ವಿವಾಹ ಮಾಡಿ ನಂತರದಲ್ಲಿ ಸಂಕಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಎಚ್ಚರವಿರಲಿ ಎಂದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ ಕುಟುಂಬದಲ್ಲಿ ನಡೆಯುವ ಸಣ್ಣಪುಟ್ಟ ವಾದ-ವಿವಾದಗಳು ದೊಡ್ಡ ಮಟ್ಟಕ್ಕೆ ತಿರುಗುತ್ತಿವೆ. ಇದಕ್ಕೆ ಹಲವು ಕಾರಣಗಳು ಪ್ರೇರೇಪಿಸುತ್ತಿವೆ. ಕೌಟುಂಬಿಕ ಸಾಮರಸ್ಯವನ್ನು ಹಾಳು ಮಾಡುತ್ತಿವೆ. ಈ ವಿಚಾರದ ಬಗ್ಗೆ ಸಮಾಜಕಾರ್ಯ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಿ ಕೌಟುಂಬಿಕ ವಾತಾವರಣವನ್ನು ಉತ್ತಮವಾಗಿಡಲು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವಂತೆ ಸಲಹೆಯಿತ್ತರು.

ಹೆಚ್ಚು ಓದಿರುವೆನೆಂಬ ಅಹಂ, ಅನುಮಾನ, ಪಿತೂರಿಗಳು, ಸಿಡುಕಿನ ಮನೋಭಾವ ಇವೆಲ್ಲಾ ದಾಂಪತ್ಯ ಜೀವನದಲ್ಲಿ ಏರುಪೇರಾಗಲು ಕಾರಣವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಶಾಂತಿ ಮತ್ತು ತಾಳ್ಮೆಯ ಚಿಂತನೆ – ಚರ್ಚೆಗಳು ಅಗತ್ಯ. ಆದರೆ ಬಹಳಷ್ಟು ಜನ ಚಿಂತನೆ ಮಾಡದೆ ನಕಾರಾತ್ಮಕವಾಗಿ ಪರಿಗಣಿಸುತ್ತಿದ್ದಾರೆ. ಇದು ಶಾಂತಿ, ಸಹನೆಯನ್ನು ಹಾಳು ಮಾಡುತ್ತಿವೆ. ಸಮಾಜಕಾರ್ಯ ವ್ಯಾಸಂಗ ಮಾಡುತ್ತಿರುವ ಪ್ರಶಿಕ್ಷಣಾರ್ಥಿಗಳ ಜವಾಬ್ದಾರಿ ಹೆಚ್ಚಿನದಿದ್ದು, ಹೆಚ್ಚು ಅಧ್ಯಯನ ಕೈಗೊಳ್ಳುವಂತೆ ಸಲಹೆ ನೀಡಿದರು.

ಸಾಂತ್ವನ ಕೇಂದ್ರದ ಪಾರ್ವತಮ್ಮ ಮಾತನಾಡಿ ಕೌಟುಂಬಿಕ ಕಿರುಕುಳದ ಪ್ರಕರಣಗಳು ಸಾಂತ್ವನ ಕೇಂದ್ರಗಳಿಗೆ ದಾಖಲಾಗುತ್ತಿದ್ದು, ಪರಸ್ಪರ ಸಮಾಲೋಚನೆಯ ಮೂಲಕ ಸೌಹಾರ್ದಯುತವಾಗಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿಚ್ಛೇದನದ ಪ್ರಕರಣಗಳು ಹೆಚ್ಚುತ್ತಿದ್ದು, ಹಿರಿಯರಾದವರು ಮಧ್ಯಸ್ಥಿಕೆ ವಹಿಸಿ ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡಬೇಕಾಗಿದೆ ಎಂದರು.

ಸಾಂತ್ವನ ಕೇಂದ್ರದ ಸಮಾಲೋಚಕಿ ರಾಧಾ ಲಕ್ಷ್ಮಿ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಮೋಹನ್ ಪ್ರಕಾಶ್, ಡಾ.ವೇಣುಗೋಪಾಲ್, ಡಾ.ತೋತ್ಯಾನಾಯಕ, ಪ್ರಹ್ಲಾದ ಜಿ., ಹೇಮಂತ್ ಕುಮಾರ್ ಕೆ.ಟಿ, ಬಿ.ಸಿ.ಭಾನುನಂದನ್, ರಮೇಶ್ ಎಸ್. ಇತರರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *