ತುಮಕೂರು:ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಸ್ವಾತಂತ್ರ ಭಾರತವನ್ನು ಹಸಿವಿನಿಂದ ಕಾಪಾಡಿದ್ದು,ಬಾಬು ಜಗಜೀವನ್‍ರಾಂ ಅವರು ಸಂಶೋಸಿದ ಹಸಿರು ಕ್ರಾಂತಿ.ಇಂದು ಆಹಾರ ಬೆಳೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದ್ದರೆ,ಅದಕ್ಕೆ ಮೂಲ ಕಾರಣಕರ್ತರು ನಮ್ಮ ಜಗಜೀವನರಾಂ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್‍ರಾಂ ಅವರ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಕೃಷಿ,ಕೈಗಾರಿಕಾ, ಕಾರ್ಮಿಕ,ವಿದೇಶಾಂಗ ಸಚಿವರಾಗಿ ಅವರು ಕೈಗೊಂಡ ಕಾರ್ಯಕ್ರಮಗಳು ಇಂದಿಗೂ ಇಡೀ ದೇಶಕ್ಕೆ ಮಾದರಿಯಾಗಿವೆ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿಕೊಟ್ಟರೆ,ಬಾಬು ಜಗಜೀವನ್ ರಾಂ ಅವರು ಸಂವಿಧಾನದ ಆಶಯಗಳನ್ನು ಈಡೇರಿಸಲು ತಮ್ಮ ಉಸಿರಿನ ಕೊನೆಯವರೆಗೂ ನಿರಂತವಾಗಿ ಶ್ರಮಿಸಿದ್ದರು ಎಂದರು.
ಸಂವಿಧಾನವೆಂಬುದು ದೇಶದ 150 ಕೋಟಿ ಜನಸಂಖ್ಯೆಯನ್ನು ಸಮಭಾವದಿಂದ ನೋಡುವ ಒಂದು ಗ್ರಂಥ.ಇದನ್ನು ಬದಲಾಯಿಸುವ ಮಾತುಗಳನ್ನು ಪದೇ ಪದೇ ಬಿಜೆಪಿ ಮುಖಂಡರು ಮಾತನಾಡುತಿದ್ದು, ಇದರ ವಿರುದ್ದ ದಲಿತರಷ್ಟೇ ಅಲ್ಲ, ಸಂವಿಧಾನದ ಪ್ರಕಾರ ಸವಲತ್ತುಗಳನ್ನು ಪಡೆಯುತ್ತಿರುವ ಎಲ್ಲಾ ಸಮುದಾಯಗಳು ದ್ವನಿ ಎತ್ತಬೇಕಾಗಿದೆ.ಸಂವಿಧಾನದ ಬದಲಾಯಿಸುತ್ತೇವೆ ಎಂದವರನ್ನು ಬದಲಾಯಿಸುವ ಅವಕಾಶ ನಮಗೆ ಒದಗಿ ಬಂದಿದೆ. ಅದನ್ನು ಚಾಚು ತಪ್ಪದೆ ನಾವೆಲ್ಲರೂ ಪಾಲಿಸಬೇಕಾಗಿದೆ ಎಂದು ಕೆಂಚಮಾರಯ್ಯ ನುಡಿದರು.
ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಜಿ.ಲಿಂಗರಾಜು ಮಾತನಾಡಿ, ಬಾಬು ಜಗಜೀವನ್ ರಾಂ ಓರ್ವ ವ್ಯಕ್ತಿಯಲ್ಲ. ಶಕ್ತಿ, ಕೃಷಿ ಸಚಿವರಾಗಿ ಅಲ್ಲದೆ,ಕಾರ್ಮಿಕ, ಕಾನೂನು ಸಚಿವರು,ರೈಲ್ವೆ ಸಚಿವರಾಗಿ ಅವರು ಅನೇಕ ಜನಪರ ಕಾಯ್ದೆಗಳನ್ನು ಜಾರಿಗೆ ತಂದು ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತುಗಳು ದೊರೆಯುವಂತಹ ಅವಕಾಶ ಕಲ್ಪಿಸಿದರು.40 ಕೋಟಿ ಜನರಿಗೆ ಆಹಾರ ಒದಗಿಸಲು ಪರದಾಡುತ್ತಿದ್ದ ಕಾಲದಲ್ಲಿ,ಹಸಿರು ಕ್ರಾಂತಿಯ ಮೂಲಕ ಕೃಷಿಯಲ್ಲಿ ಹಲವಾರು ಬದಲಾವಣೆಗಳನ್ನು ತಂದು,ಡ್ಯಾಂಗಳ ಮೂಲಕ ನೀರಾವರಿ ಒದಗಿಸಿ,ದೇಶದ ಎಲ್ಲ ಜನರು ಸಂತೃಪ್ತಿಯಿಂದ ಊಟ ಮಾಡುವಂತಹ ವಾತಾವರಣ ಕಲ್ಪಿಸಿದರು. ಇಂತಹ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ನಾವೆಲ್ಲರೂ ಮುನ್ನೆಡೆಯಬೇಕಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ರೇವಣ್ಣಸಿದ್ದಯ್ಯ ಮಾತನಾಡಿ,ಹುಟ್ಟಿನ ಕಾರಣಕ್ಕೆ ನೋವುಂಡು ದೇಶಕ್ಕೆ ಆಗಾಧವಾದ ಕೊಡುಗೆ ನೀಡಿದ್ದರೂ ಜಾತಿಯ ಕಾರಣಕ್ಕೆ ಅವರ ಸಾಧನೆಗಳು ಜನ ಮಾನಸಕ್ಕೆ ಪರಿಚಯವಾಗುವುದೇ ಕಡಿಮೆ. ಅಂತಹವರಲ್ಲಿ ಬಾಬು ಜಗಜೀವನ್‍ರಾಂ ಕೂಡ ಒಬ್ಬರು,ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕನಿಷ್ಠ ಕೂಲಿ ನಿಯಮ ಜಾರಿಗೆ ತಂದವರು ಬಾಬೂಜಿ,ಪಾಳು ಬಿದ್ದ ಸರಕಾರಿ ಭೂಮಿಯನ್ನು ದುಡಿಯವ ಜನರಿಗೆ ಹಂಚಿ,ಆಹಾರ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿದ ಪರಿಣಾಮ ಭಾರತೀಯರು ಅರೆಹೊಟ್ಟೆಯಲ್ಲಿ ಮಲಗುವುದು ತಪ್ಪಿತ್ತು.ರೈಲ್ವೆ ಸಚಿವರಾಗಿ, ಈ ದೇಶದ ಮೂಲೆ ಮೂಲೆಗೆ ರೈಲು ಸಂಪರ್ಕ ತಲುಪಬೇಕು ಎಂಬ ಕನಸು ಕಂಡವರು ಬಾಬು ಜಗಜೀವನ್‍ರಾಂ, ಕಾಂಗ್ರೆಸ್ ನೆರಳಿನಲ್ಲಿ ರಾಜಕಾರಣ ಮಾಡಿದವರಲ್ಲ. ತಮ್ಮದೆ ಆದ ಸ್ವಂತ ಪಕ್ಷ ಕಟ್ಟಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದವರು. ಅವರಲ್ಲಿರುವ ರಾಜಕೀಯ ಶಕ್ತಿಗೆ ಬೆಲೆ ಕೊಟ್ಟು ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತು ಎಂದರು.
ಮುಖಂಡರಾದ ವಾಲೆ ಚಂದ್ರಯ್ಯ ಮಾತನಾಡಿ,ಹಿಂದುಳಿದ ಜಾತಿಗಳಲ್ಲಿ ಹುಟ್ಟಿ, ಜಾತಿ ತಾರತಮ್ಯದ ನೋವುಂಡು ಬದುಕಿದ ಬಾಬು ಜಗಜೀವನ್‍ರಾಂ ನನ್ನ ಸಮುದಾಯ ಇಂತಹ ಅವಮಾನಗಳನ್ನು ಅನುಭವಿಸಬಾರದು ಎಂಬ ಕಾರಣಕ್ಕೆ ಸಂವಿಧಾನದ ಆಶಯದಂತೆ ಭೂಮಿಯ ಹಕ್ಕು ನೀಡಿದರು.ಆದರೆ ಯಾರಲ್ಲಿ ಸ್ವಾಭಿಮಾನದ ಬದುಕು ಕಾಣಬೇಕೆಂಬ ಕನಸು ಕಂಡಿದ್ದರೋ, ಅಂತಹ ಜನರು ಇಂದಿಗೂ ದೇವಾಲಯ, ಅಧಿಕಾರದ ಗರ್ಭಗುಡಿಯಿಂದ ದೂರವೇ ಉಳಿದಿದ್ದಾರೆ.ಜಾತಿಯತೆ ಎಂಬುದು ಇಂದಿಗೂ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇದನ್ನು ತೊಡೆದು ಹಾಕಬೇಕೆಂದರೆ ಸಂವಿಧಾನ ಉಳಿಯಬೇಕು. ಹಾಗಾಗಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಹಿರಿಯರ ಆಶಯಗಳನ್ನು ಈಡೇರಿಸೊಣ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ನರಸೀಯಪ್ಪ, ಎಂ.ವಿ.ರಾಘವೇಂದ್ರಸ್ವಾಮಿ, ಶಿವಾಜಿ,ಜಯಮೂರ್ತಿ, ಸಿಮೆಂಟ ಮಂಜುನಾಥ್, ಸಂಜೀವಕುಮಾರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸುಜಾತ,ಭಾನುಪ್ರಕಾಶ್ ವಿಜಯಲಕ್ಷ್ಮಿ,ಭಾಗ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.