ತುಮಕೂರು : ಬಡ ಕುಟುಂಬದಲ್ಲಿ ಹುಟ್ಟಿ ಉನ್ನತ ಸ್ಥಾನಕ್ಕೇರಿ ನಮ್ಮೆಲ್ಲರಿಗೂ ಮಾರ್ಗ ದರ್ಶಕರಾದವರು ಡಾ: ಬಾಬು ಜಗಜೀವನ್ ರಾಂ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಆಯೋಜಿಸಿದ್ದ ಡಾ: ಬಾಬು ಜಗಜೀವನ ರಾಂ ಅವರ 117ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬಾಬು ಜಗಜೀವನ ರಾಂ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಉತ್ತಮ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಕೆಲಸ ಪಡೆದುಕೊಂಡವರು. ಭಾರತ ಸ್ವಾತಂತ್ರ್ಯಗೊಂಡ ಮೇಲೆ ವಿವಿಧ ಇಲಾಖೆಗಳ ಕೇಂದ್ರ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರು ಕೃಷಿ ಕ್ಷೇತ್ರಕ್ಕೆ ನೀಡಿದ ಪ್ರಾಮುಖ್ಯತೆಯಿಂದ ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಸಿಕೊಂಡರು ಎಂದು ತಿಳಿಸಿದರು.
ಗುರಿ ಮತ್ತು ಸಾಧನೆಗೆ ಪರಿಶ್ರಮ ಮತ್ತು ಆತ್ಮವಿಶ್ವಾಸ ಮುಖ್ಯವಾಗುತ್ತದೆ ಎಂದು ಬಾಬು ಜಗಜೀವನ್ ರಾಂ ಅವರ ಪ್ರತಿಪಾದನೆಯಾಗಿತ್ತು ಎಂದು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು, ಬಾಬು ಜಗಜೀವನ್ ರಾಂ ಅವರು ದೇಶದ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸುವ ಮೂಲಕ ಆದರ್ಶಪ್ರಾಯ ವ್ಯಕ್ತಿಯಾಗಿ ಬದುಕಿದ್ದ ಅವರನ್ನು ಕೇವಲ ತೋರ್ಪಡಿಕೆಯ ಆಚರಣೆಗೆ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ದಲಿತ ಮುಖಂಡರು ಉಪಸ್ಥಿತರಿದ್ದರು.